PLEASE LOGIN TO KANNADANET.COM FOR REGULAR NEWS-UPDATES


ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಎಂಬತ್ತೈದು ವರ್ಷಗಳ ಇತಿಹಾಸವಿದೆ. ಅದು ಈ ಸುದೀರ್ಘ ಅವಧಿಯಲ್ಲಿ ತಾನು ಅಂದುಕೊಂಡ ಗುರಿಯನ್ನು ಅದು ಸಾಧಿಸುತ್ತಲೇ ಬಂದಿದೆ. ಗುರಿಸಾಧನೆಗಾಗಿ ಅನೇಕ ಪಾತ್ರಧಾರಿಗಳನ್ನು ಸೃಷ್ಟಿಸುತ್ತದೆ. ಸೂತ್ರಗಳು ಮಾತ್ರ ನಾಗಪುರದಲ್ಲಿರುತ್ತವೆ. ಒಂದೆಡೆ ಗಾಂಧೀಜಿಯನ್ನು ಹೊಗಳುತ್ತದೆ. ಇನ್ನೊಂದೆಡೆ ‘‘ನಾನೇಕೆ ಗಾಂಧಿಯನ್ನು ಕೊಂದೆ’’ ಎಂಬ ಗೋಡ್ಸೆ ಪುಸ್ತಕ ಮಾರಾಟ ಮಾಡುತ್ತದೆ. ಅಂಬೇಡ್ಕರರನ್ನು ಸಾಮಾಜಿಕ ದೃಷ್ಟಾರ ಎಂದು ಪುಸ್ತಕ ಛಾಪಿಸುತ್ತದೆ. ಮತ್ತೊಂದೆಡೆ ಅರುಣ್ ಶೌರಿಯಿಂದ ‘ಅಂಬೇಡ್ಕರ ಹುಸಿದೇವತೆ’ ಎಂಬ ಪುಸ್ತಕ ಬರೆಸುತ್ತದೆ. ಹೀಗೆ ನಾನಾ ತಂತ್ರಗಳ ಮೂಲಕ ಅದು ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಲೇ ಬಂದಿದೆ.
ಆರೆಸ್ಸೆಸ್ ಏಕಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಅಶೋಕ ಸಿಂಘಾಲ್, ರಾಜನಾಥ ಸಿಂಗ್, ಪ್ರವೀಣ್ ತೊಗಾಡಿಯಾ, ನರೇಂದ್ರ ಮೋದಿ, ಪ್ರಮೋದ್ ಮುತಾಲಿಕ್, ಯಡಿಯೂರಪ್ಪ, ಜಗದೀಶ್ ಕಾರಂತ ಹೀಗೆ ನಾನಾ ಪಾತ್ರಗಳನ್ನು ಸೃಷ್ಟಿಸುತ್ತದೆ. ಮೇಲ್ನೋಟಕ್ಕೆ ಇವರ ಪೈಕಿ ಕೆಲವರು ಮೃದು ವ್ಯಕ್ತಿತ್ವದವರಾಗಿ ಕಾಣುತ್ತಾರೆ. ಇನ್ನು ಕೆಲವರು ಬೆಂಕಿ ಉಗುಳು ತ್ತಾರೆ. ಬೆಂಕಿ ಉಗುಳುವವರು ಒಮ್ಮಿಂದೊಮ್ಮೆಲೇ ಶಾಂತಿಯ ಕಾರಂಜಿಯಾಗುತ್ತಾರೆ. ಬೇರೆ ಸೋಗು ಹಾಕಿ ಗಾಂಧಿ ತದ್ರೂಪಿಗಳಂತೆ ಕಾಣುತ್ತಾರೆ. ಆದರೆ ಈ ಎಲ್ಲ ಪಾತ್ರಧಾರಿಗಳ ಗುರಿ ಒಂದೇ. ‘ಹಿಂದೂರಾಷ್ಟ್ರ’ ನಿರ್ಮಾಣ.

ಲಾಲ್‌ಕೃಷ್ಣ ಅಡ್ವಾಣಿ ಅಯೋಧ್ಯೆಗೆ ರಥಯಾತ್ರೆ ಹೊರಟಾಗ, 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ನೆಲಸಮಗೊಂಡಾಗ, ಅಟಲ್ ಬಿಹಾರಿ ವಾಜಪೇಯಿ ಅಲ್ಲಿರಲಿಲ್ಲ. ಅವರು ಲಕ್ನೊದಲ್ಲಿದ್ದರು. ಮಸೀದಿ ಉರುಳಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದರು. ಮುರಳಿ ಮನೋಹರ ಜೋಶಿ ಉರುಳುತ್ತಿರುವ ಮಸೀದಿ ಎದುರು ಕುಳಿತು ನಗು ಚೆಲ್ಲುತ್ತಿದ್ದರು. ಉಮಾಭಾರತಿ ಜೋಶಿಜಿಯನ್ನು ಹಿಂಬದಿಯಿಂದ ತಬ್ಬಿಕೊಂಡು ಕೇಕೆ ಹಾಕುತ್ತಿದ್ದರು. ಇದು ಪಾತ್ರಧಾರಿಗಳ ತಪ್ಪಲ್ಲ. ತಮಗೆ ಸಂಘವಹಿಸಿದ ಪಾತ್ರವನ್ನು ಅವರು ಪ್ರಾಮಾಣಿಕವಾಗಿ ನಿರ್ವಹಿಸಿದರು. ಈಗ ನರೇಂದ್ರ ಮೋದಿ ಸರದಿ. ಪ್ರಧಾನಿಯಾಗಿ ತಮ್ಮ ಪಾತ್ರವನ್ನು ಅವರು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಮುಂಚಿನ ಉಗ್ರಾವತಾರ ಈಗಿಲ್ಲ. ಮುಸಲ್ಮಾನರನ್ನು ಒಳಗೊಂಡು ಎಲ್ಲರ ಅಭಿವೃದ್ಧಿ ತನ್ನ ಗುರಿ ಎಂದು ಸಂಸತ್ತಿನ ಚೊಚ್ಚಲ ಭಾಷಣದಲ್ಲಿ ಇವರು ಹೇಳಿದ್ದಾರೆ. ಹಗರಣ ಮುಕ್ತ ಭಾರತದ ಬಗ್ಗೆ ಪ್ರಸ್ತಾಪಿಸಿದ್ದಾರೆ. ದೇಶದ ಜನರಲ್ಲಿರುವ ಮೂಢನಂಬಿಕೆ ತೊಡೆದು ಹಾಕುತ್ತೇವೆ ಎಂದು ಹೇಳಿದ್ದಾರೆ. ಬಡವರಿಗೆ ಶಕ್ತಿ ತುಂಬುವುದಾಗಿ ಹೇಳಿದ್ದಾರೆ. ದೇಶದ ಮುನ್ನಡೆಗೆ ಪ್ರತಿಪಕ್ಷಗಳ ಸಹಕಾರವನ್ನು ಅವರು ಕೋರಿದ್ದಾರೆ. ಪಾತ್ರಧಾರಿ ನರೇಂದ್ರ ಮೋದಿ ಹೀಗೆ ಹೇಳಿದರೆ ಸೂತ್ರಧಾರಿ ಮೋಹನ ಭಾಗವತ್ ನಾಗಪುರದಲ್ಲಿ ನಡೆದ ಆರೆಸ್ಸೆಸ್ ವಾರ್ಷಿಕ ತರಬೇತಿ ಶಿಬಿರದಲ್ಲಿ ಮಾತಾಡುತ್ತ ‘‘2014ನೆ ಇಸವಿ 1947ಕ್ಕೆ ಸಮಾನವಾದುದು. ಆಗ ನಾವು ಸ್ವಾತಂತ್ರ ಪಡೆದೆವು, ಆದರೆ ನಮ್ಮ ದೇಶದ ಭವಿಷ್ಯವನ್ನು ಕೆಲವೇ ನಾಯಕರು ತಮ್ಮ ಇಷ್ಟದಂತೆ ರೂಪಿಸಿದರು, ಅದಕ್ಕಾಗಿ ಭಾರೀ ಬೆಲೆ ತೆತ್ತೆವು. ಈಗ ಮತ್ತೆ ಅಂತಹ ತಪ್ಪು ಮಾಡಬಾರದು. ಈಗ ದೊರೆತ ಅವಕಾಶವನ್ನು ಬಳಸಿಕೊಳ್ಳಬೇಕು’’ ಎಂದು ಹೇಳಿದರು. ಇದರರ್ಥ ಇನ್ನು ಮುಂದೆ ಸಂವಿಧಾನದ ಮೇಲೆ ಮನುವಾದದ ಸವಾರಿ ನಡೆಯುತ್ತದೆ.
 ಪಾತ್ರಧಾರಿ ನರೇಂದ್ರ ಮೋದಿ ಆರೆಸ್ಸೆಸ್ ಶಾಖೆಯಲ್ಲಿ ತಯಾರಾಗಿ ಬಂದಿದ್ದರೂ ಈಗ ಅವರು ಪ್ರಧಾನಿಯಾಗಿದ್ದಾರೆ. ಈ ದೇಶಕ್ಕೆ ಯಾರೇ ಪ್ರಧಾನಿಯಾಗಲಿ ಅವರು ದಾರಿ ತಪ್ಪದಂತೆ ಜಾತಿವಾದಿಯಾಗದಂತೆ ಸಂವಿಧಾನ ಅವರನ್ನು ಕಟ್ಟಿಹಾಕುತ್ತದೆ. ಡಾ.ಅಂಬೇಡ್ಕರ್ ರೂಪಿಸಿದ ಸಂವಿಧಾನದ ‘‘ಭೀಮಗೆರೆ’’ ದಾಟಿ ಹೊರಗೆ ಹೋಗಲು ಸಾಧ್ಯವೇ ಇಲ್ಲ. ಅಂತಲೇ ಅಟಲ್ ಬಿಹಾರಿ ವಾಜಪೇಯಿ ಇರಲಿ, ನರೇಂದ್ರ ಮೋದಿ ಇರಲಿ ಅವರು ರಾಜ್ಯಾಂಗದ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ರೀತಿ ಮಾತಾಡಲೇ ಬೇಕಾಗುತ್ತದೆ. ಹಾಗೆ ಮಾತಾಡುವಂತೆ ಸೂತ್ರಧಾರಿಗಳು ಕಣ್ಸನ್ನೆ ಮಾಡಿರುತ್ತಾರೆ.
ನರೇಂದ್ರ ಮೋದಿ ಹೀಗೆ ಮಾತಾಡಿದ ರೆಂದ ಮಾತ್ರಕ್ಕೆ ಅವರು ಬದಲಾದರೆಂತಲ್ಲ. ಬಾಳಠಾಕ್ರೆ ಅವಹೇಳನ ಮಾಡಿದ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪುಣೆಯಲ್ಲಿ ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ ಶೇಖ್ ಮೊಹಿಸಿನ್ ಸಾದಿಕ್ ಕೊಲೆಯ ಬಗ್ಗೆ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಈ ಹತ್ಯೆಯನ್ನು ಖಂಡಿಸಿಲ್ಲ. ಇನ್ನು ಮುಂದೆ ಇಂಥದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿಲ್ಲ.
  ಸಂಘ ಪರಿವಾರದ ಪಾರ್ಲಿಮೆಂಟ್ ಪಾತ್ರಧಾರಿಗಳ ಅಭಿನಯ ಒಂದು ರೀತಿಯಾಗಿದ್ದರೆ, ಪಾರ್ಲಿಮೆಂಟಿನ ಹೊರಗಿನ ಪಾತ್ರಧಾರಿಗಳ ಅಭಿನಯ ವಿಭಿನ್ನವಾಗಿದೆ. ಮೋದಿ ಪ್ರಧಾನಿಯಾದ ನಂತರವೂ ಈ ಪಾತ್ರಧಾರಿಗಳ ರೌದ್ರಾವತಾರ ಕೊನೆ ಗೊಂಡಿಲ್ಲ. ಮೋದಿ ವಿರುದ್ಧ ಮಾತಾಡಿದ್ದಕ್ಕಾಗಿ ವಿಶ್ವಖ್ಯಾತಿಯ ಸಂಗೀತ ವಿದುಷಿ ಗಾಯಕಿ ಶುಭಾ ಮುದ್ಗಲ್ ಅವರಿಗೆ ಈ ಮೋದಿ ಅಭಿಮಾನಿಗಳು ಇತ್ತೀಚೆಗೆ ಪ್ರಾಣ ಬೆದರಿಕೆ ಹಾಕಿದರು. ಪುಣೆಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯ ಪ್ರಾಣವನ್ನೇ ತೆಗೆದರು.
‘ಇತ್ತ ನಮ್ಮ ಕರಾವಳಿಯಲ್ಲಿ ಅನೈತಿಕ ಪೊಲೀಸರ ಗೂಂಡಾಗಿರಿ ನಿರಾತಂಕವಾಗಿ ನಡೆದಿದೆ. ಕೇಂದ್ರದಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರವಂತೂ ಲಂಗುಲಗಾಮಿಲ್ಲ ದಂತಾಗಿದೆ. ಈ ಸಂಸ್ಕೃತಿ ರಕ್ಷಕರ ಗೂಂಡಾಗಿರಿಗೆ ಕೊಲ್ಲೂರು ಧರ್ಮಪೀಠದ ಸ್ವಾಮೀಜಿ ಮೈತ್ರಿಕಶ್ಯಪ ಮತ್ತು ಇತರ ಮೂವರು ಇತ್ತೀಚೆಗೆ ಗುರಿಯಾಗಿದ್ದಾರೆ. ದನ ಸಾಗಾಟ ಮಾಡು ತ್ತಿದ್ದರೆಂದು ಈ ಹಿಂದೂ ಸ್ವಾಮೀಜಿ ಮೇಲೆ ಇತ್ತೀಚೆಗೆ ಮಾರಣಾಂತಿಕ ಹಲ್ಲೆ ನಡೆದಿದೆ.
ಕೇರಳದ ಪಾಲ್ಗಾಟ್‌ನಲ್ಲಿರುವ ತಪೋವರಿಷ್ಠಾಶ್ರಮದ ಗೋಶಾಲೆಗೆ ಗೋವುಗಳನ್ನು ಕೊಂಡೊಯ್ಯಲು ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ಪಂಚಾಯತ್ ಪರವಾನಿಗೆಯನ್ನು ಕಾನೂನುಬದ್ಧವಾಗಿ ಪಡೆದಿದ್ದರು. ಆದರೆ ಹಿಂದೂತ್ವದ ನಶೆ ಏರಿಸಿಕೊಂಡ ಕೋಮುವಾದಿ ಸಂಘಟನೆಗಳ ಕಾರ್ಯಕರ್ತರ ಗುಂಪು ಅಧಿಕೃತ ಪರವಾನಿಗೆ ಯನ್ನು ತೋರಿಸಿದರೂ ಪರವಾನಿಗೆ ಹರಿದು ಹಾಕಿ ಪಶುಗಳಂತೆ ವರ್ತಿಸಿದ್ದಾರೆ. ಸ್ವಾಮೀಜಿಗಳನ್ನೇ ಥಳಿಸಿದ್ದಾರೆ. ಹಿಂದೆ ಕೇಂದ್ರದಲ್ಲಿ ವಾಜಪೇಯಿ ಸರಕಾರವಿದ್ದಾಗಲೂ ಪ್ರಧಾನಿ ಯಾಗಿದ್ದ ವಾಜಪೇಯಿ ತಮಗೆ ವಹಿಸಿಕೊಟ್ಟ ಪಾತ್ರವನ್ನು ಚೆನ್ನಾಗಿ ನಿರ್ವಹಣೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಅವರು ಒಂದೆಡೆ ಉದಾರವಾದಿಯಾಗಿ ಮಾತಾಡು ತ್ತಿದ್ದರೆ, ಇನ್ನೊಂದೆಡೆ ಗುಜರಾತ್ ಹತ್ಯಾಕಾಂಡ ನಡೆಯಿತು. ಆಗ ಅಟಲ್ ಜೀ ಗುಜರಾತ್‌ಗೆ ಹೋಗಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಗೆ ರಾಜಧರ್ಮ ಪಾಲಿಸುವಂತೆ ಉಪದೇಶ ನೀಡಿದ್ದರು. ಈಗ ನರೇಂದ್ರ ಮೋದಿ ಅಟಲ್ ಜೀ ಅವತಾರ ತಾಳಿದ್ದಾರೆ. ಫ್ಯಾಸಿಸಂ ಈಗ ಹಿಟ್ಲರ್‌ನ ಕಾಲದಂತಿಲ್ಲ. ಆಧುನಿಕ ಪ್ರಜಾತಂತ್ರಕ್ಕೆ ತಕ್ಕಂತೆ ತನ್ನ ವೇಷವನ್ನು ಅದು ಬದಲಿಸುತ್ತಲೇ ಇರುತ್ತದೆ. ಮೋದಿ ಸರಕಾರದ ನಿಜಸ್ವರೂಪ ಗೊತ್ತಾಗಬೇಕಾದರೆ ಇನ್ನಷ್ಟು ಸಮಯ ವಾಗಬೇಕು. ಆದರೂ ಈಗಾಗಲೇ ಈ ಸರಕಾರದ ಅಸಲಿ ಮುಖ ಕಾಣಿಸ ತೊಡಗಿದೆ. ಅಧಿಕಾರ ವಹಿಸಿಕೊಂಡ ಮೂರೇ ದಿನಗಳಲ್ಲಿ ರಕ್ಷಣಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣವನ್ನು ಶೇ.25ರಿಂದ 100ಕ್ಕೆ ಹೆಚ್ಚಿಸಿದೆ. ರಕ್ಷಣಾ ವಲಯದಲ್ಲಿ ವಿದೇಶಿ ಕಂಪೆನಿಗಳು ಭಾರತದ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಇದರಿಂದ ಅವಕಾಶ ದೊರೆತಂತಾಗುತ್ತದೆ.
ಇನ್ನು ಮೀಸಲಾತಿಯನ್ನು ರದ್ದುಪಡಿಸುವ ಮಾತುಗಳೂ ಅಲ್ಲಲ್ಲಿ ಕೇಳಿ ಬರುತ್ತಿವೆ. ಪಠ್ಯಪುಸ್ತಕಗಳ ಕೋಮುವಾದೀಕರಣದ ಯತ್ನವೂ ಆರಂಭವಾಗಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೆ ವಿಧಿಯನ್ನು ರದ್ದುಗೊಳಿಸುವ ಹುನ್ನಾರವೂ ನಡೆದಿದೆ. ಅಲ್ಲಿ ಮೋದಿ ಪ್ರಧಾನಿಯಾಗುತ್ತಲೇ ತಮಗೆ ಗೂಂಡಾಗಿರಿಗೆ ದೊರೆತ ಲೈಸನ್ಸ್ ಎಂದು ಹಿಂಬಾಲಕರ ಪುಂಡಾಟಿಕೆಯು ಆರಂಭವಾಗಿದೆ.
ಪ್ರಧಾನಿಯಾದ ನಂತರ ಮೋದಿ ಬದಲಾಗಿದ್ದಾರೆ ಎಂದು ಬಹಳ ಜನ ಅಂದು ಕೊಂಡಿದ್ದಾರೆ. ಅಂತಹ ಬದಲಾವಣೆ ಸುಲಭವಲ್ಲ. ಈಗ ಅವರು ನಿರ್ವಹಿಸುತ್ತಿರುವುದು ಆರೆಸ್ಸೆಸ್ ವಹಿಸಿಕೊಟ್ಟ ಪಾತ್ರವನ್ನು. ಸರಳವಾಗಿ ಹೇಳುವುದಾದರೆ ಈಗವರು ವಾಜಪೇಯಿ ಅವತಾರ ತಾಳಿದ್ದಾರೆ. 
courtesy: varthabharati

Advertisement

0 comments:

Post a Comment

 
Top