PLEASE LOGIN TO KANNADANET.COM FOR REGULAR NEWS-UPDATES

 - ಸಂಗೀತ 

ಒಂದು ಉದಾಹರಣೆ, ಇತ್ತೀಚೆಗೆ ಶಿವಸೇನೆಯ ಮುಖ್ಯಸ್ಥ ಬಾಳ ಠಾಕ್ರೆಯವರು ನಿಧನರಾದಾಗ ಇಡೀ ಮುಂಬೈ ನಗರವೇ ಅಕ್ಷರಶಃ ಬಂದಾಗಿತ್ತು. ಅವರ ಪಾರ್ಥಿವ ಶರೀರದ ಮೆರವಣಿಗೆಯ ಕಾರಣದಿಂದಾಗಿ ಇಡೀ ಮುಂಬೈ ನಗರ ಟ್ರಾಫಿಕ್ ಜಾಮ್‌ಗೆ ತುತ್ತಾಗಿತ್ತಲ್ಲದೆ ಹಲವೆಡೆ ಶಿವಸೇನೆಯ ಕಾರ್ಯಕರ್ತರು ದಾಂಧಲೆ ಎಬ್ಬಿಸಿ ಹಿಂಸಾಚಾರ ಕೂಡ ಮಾಡಿದ್ದರು. ಇದರಿಂದ ಲಕ್ಷಾಂತರ ಸಾಮಾನ್ಯ ನಾಗರಿಕರು ಅನೇಕ ಕಷ್ಟಗಳನ್ನು ಅನುಭವಿಸಿದರು. ನಮ್ಮ ನಿಮ್ಮಂತೆಯೇ ಸಾಮಾನ್ಯ ಪ್ರಜೆಯಾಗಿದ್ದ ಶಹೀನ್ ಧಂಡಾ ಎಂಬ ಇಪ್ಪತ್ತೊಂದು ವರ್ಷದ ಒಬ್ಬ ಹುಡುಗಿ ಈ ವಿದ್ಯಮಾನಗಳನ್ನು ಕುರಿತು ತನಗನಿಸಿದ್ದನ್ನು ಸಹಜವಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಳು. ‘‘ಮುಂಬೈ ನಗರ ಬಂದ್ ಆಚರಿಸಿದ್ದು ಗೌರವಕ್ಕಲ್ಲ, ಭಯಕ್ಕೆ. ಠಾಕ್ರೆಯಂತಹ ಜನರು ದಿನನಿತ್ಯ ಸಾಯುತ್ತಿರುತ್ತಾರೆ. ಅದಕ್ಕಾಗಿ ನಗರವನ್ನು ಬಂದ್ ಮಾಡುವುದು ಸರಿಯಲ್ಲ’’ ಎಂದು ತನ್ನ ಫೇಸ್‌ಬುಕ್ ಅಕೌಂಟಿನಲ್ಲಿ ಪೋಸ್ಟ್ ಮಾಡಿದ್ದಳು. ಅದು ಅವಳ ಅನುಭವದ ಅನಿಸಿಕೆಯಾಗಿದ್ದಿರಬಹುದು. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡದಿದ್ದರೆ ಶಿವಸೇನೆಯ ಕಾರ್ಯಕರ್ತರು ಅಂಗಡಿಗಳನ್ನೇ ಧ್ವಂಸ ಮಾಡಬಹುದು ಎಂಬ ಭಯದಲ್ಲಿ, ವಾಹನಗಳಲ್ಲಿ ಚಲಿಸಿದರೆ ವಾಹನಗಳನ್ನೇ ಜಖಂ ಗೊಳಿಸಬಹುದು ಎಂಬ ಭೀತಿಯಲ್ಲಿ ಬಂದ್ ಮಾಡಿದವರೇ ಹೆಚ್ಚು. ಆದರೆ ಈ ಅಭಿಪ್ರಾಯವನ್ನು ಫೇಸ್‌ಬುಕ್‌ನಲ್ಲಿ ಪ್ರಾಮಾಣಿಕವಾಗಿ, ಮುಕ್ತವಾಗಿ ಪೋಸ್ಟ್ ಮಾಡಿದ್ದಕ್ಕೆ ಆಕೆಯನ್ನು ಪೊಲೀಸರು ಬಂಧಿಸಿದರು. ಮಾತ್ರವಲ್ಲ, ಆಕೆಯ ಪೋಸ್ಟ್‌ಗೆ ಲೈಕ್ ಒತ್ತಿದ ಇನ್ನೊಬ್ಬ ಹುಡುಗಿಯನ್ನೂ ಪೊಲೀಸರು ಬಂಧಿಸಿದರು.
ಅದು ಒಂದೂವರೆ ವರ್ಷದ ಹಿಂದಿನ ಮಾತು. ಇತ್ತೀಚಿನ ಇನ್ನೊಂದು ಉದಾಹರಣೆ ನೋಡಿ. ಹೋದ ತಿಂಗಳಲ್ಲಿ ನರೇಂದ್ರ ಮೋದಿಯವರ ಬಗ್ಗೆ ತನ್ನ ಫೇಸ್‌ಬುಕ್ ಅಕೌಂಟಿನಲ್ಲಿ ವಿಮರ್ಶಾತ್ಮಕ ಪೋಸ್ಟ್ ಮಾಡಿದ ಕಾರಣಕ್ಕೆ ಗೋವಾ ಮೂಲದ ದೇವು ಚೋಡಂಕರ್ ಎಂಬ ಮೂವತ್ತೊಂದು ವರ್ಷದ ಯುವಕನೊಬ್ಬನನ್ನು ‘ಕೋಮುವಾದಿ, ಪ್ರಚೋದನಕಾರಿ ಹೇಳಿಕೆ’ ಎಂಬ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ತೀರಾ ಇತ್ತೀಚೆಗೆ, ಅಂದರೆ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ಮೇಲೆ ಕೇರಳದ ಏಳು ಯುವಕರನ್ನು ಪೊಲೀಸರು ಇದೇ ಕಾರಣಕ್ಕೆ ಬಂಧಿಸಿದ್ದಾರೆ. ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಈ ವಿದ್ಯಾರ್ಥಿಗಳು ತಮ್ಮ ಕಾಲೇಜಿನಿಂದ ಹೊರತರುತ್ತಿದ್ದ ಪತ್ರಿಕೆಯ ಹಿಂದಿನ ಯಾವುದೋ ಒಂದು ಸಂಚಿಕೆಯಲ್ಲಿ ನರೇಂದ್ರ ಮೋದಿಯವರನ್ನು ಅಡಾಲ್ಫ್ ಹಿಟ್ಲರ್, ಒಸಮಾ ಬಿನ್ ಲಾಡೆನ್ ಮತ್ತು ಜಾರ್ಜ್ ಡಬ್ಲೂ ಬುಷ್ ಅವರಿಗೆ ಹೋಲಿಸಿ ಲೇಖನ ಬರೆದಿದ್ದಕ್ಕೆ ಬಿಜೆಪಿಯ ಯುವ ಮೋರ್ಚಾ ಪೊಲೀಸರಲ್ಲಿ ದೂರು ನೀಡಿತ್ತು. ಅದನ್ನು ಪರಿಗಣಿಸಿದ ಪೊಲೀಸರು ಏಳು ಜನರನ್ನು ಬಂಧಿಸಿದರು.
ನಮ್ಮ ಕರ್ನಾಟಕದ ಉದಾಹರಣೆಯನ್ನೇ ನೋಡಿ. ಆಗಿನ್ನೂ ನಿಯೋಜಿತ ಪ್ರಧಾನಿಯಾಗಿದ್ದ ಮೋದಿ ಯವರ ಬಗ್ಗೆ ಟೀಕಾತ್ಮಕ ಎಮ್ಮೆಮ್ಮೆಸ್ ಪಸರಿಸಿದ ಆರೋಪದಡಿಯಲ್ಲಿ ಭಟ್ಕಳ ಮೂಲದ ಎಂಬಿಎ ವಿದ್ಯಾರ್ಥಿ ವಾಕಸ್ ಬ್ರಹ್ಮಾವರ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಹೀಗೆ ಹೇಳುತ್ತಾ ಹೋದರೆ ಇಂತಹ ವಿವೇಚನಾರಹಿತ ಬಂಧನಗಳಿಗೆ ಕೊನೆಯಿರುವುದಿಲ್ಲ.
 ಈಗ ಸುಮ್ಮನೆ ನೀವು ಇಲ್ಲಿಯ ತನಕ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ, ಲೈಕ್ ಮಾಡಿದ, ಕಮೆಂಟ್ ಮಾಡಿದ ರಾಜಕೀಯ ವಿಷಯಗಳನ್ನು, ಚಿತ್ರಗಳನ್ನು, ವೀಡಿಯೊಗಳನ್ನು ಕುರಿತು ಯೋಚಿಸಿ. 2002ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡಕ್ಕೆ ನರೇಂದ್ರ ಮೋದಿಯವರೇ ನೇರ ಹೊಣೆಯೆಂದು ಹೇಳುವ ಅದೆಷ್ಟು ಪೋಸ್ಟ್‌ಗಳಿಗೆ ಕಮೆಂಟ್ ಮತ್ತು ಲೈಕ್‌ಗಳನ್ನು ನೀವು ಮಾಡಿದ್ದರೆ ನೀವೂ ಕೂಡ ಯಾವ ಕ್ಷಣದಲ್ಲಿ ಬೇಕಾದರೂ ಬಂಧನಕ್ಕೊಳಗಾಗಬಹುದು! ಈ ಪೋಸ್ಟ್, ಕಮೆಂಟ್, ಲೈಕ್‌ಗಳನ್ನು ನೀವು ಮೋದಿ ಪ್ರಧಾನಿ ಆದ ಮೇಲೆಯೇ ಮಾಡಿರಬೇಕೆಂದೇನೂ ಇಲ್ಲ. ಈ ಹಿಂದೆ, ಯಾವಾಗಲೋ ಮಾಡಿದ್ದರೂ ಆದೀತು, ನಿಮ್ಮ ಬಂಧನಕ್ಕೆ ಅಡ್ಡಿಯಿಲ್ಲ!! ಅದನ್ನು ಕಲ್ಪಿಸಿಕೊಂಡರೇನೇ ಒಂದು ರೀತಿಯ ಜಿಗುಪ್ಸೆಯಾಗುತ್ತದೆ. ನಿಜ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆಂದು ಬೆನ್ನು ತಟ್ಟಿಕೊಳ್ಳುತ್ತಿರುವ ನಮ್ಮ ಭಾರತದಲ್ಲಿ ಪ್ರಜಾತಂತ್ರದ ಅತ್ಯಂತ ಮೂಲಭೂತ ಅಂಶಗಳಲ್ಲಿ ಒಂದಾದ ವಾಕ್ ಸ್ವಾತಂತ್ರ್ಯಕ್ಕೆ ಬಂದಿರುವ ದುರ್ಗತಿಯಿದು. ತನಗೆ ಅನಿಸಿದ್ದನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತ ಮಾಡುವುದಕ್ಕೂ ಇಲ್ಲಿ ಸ್ವಾತಂತ್ರ್ಯವಿಲ್ಲ. ಇನ್ನೊಂದು ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ. ಬಂಧನಕ್ಕೊಳಗಾದ ಮುಂಬೈ ಯುವತಿಯರು ಫೆೇಸ್‌ಬುಕ್‌ನಲ್ಲಿ ಹಾಕಿದ ಕಮೆಂಟ್‌ನಲ್ಲಿ ಅಂತಹ ಆಕ್ಷೇಪಾರ್ಹ ಸಂಗತಿಯಾದರೂ ಏನಿದೆ? ಅದೇ ವಿಷಯವನ್ನು ನೀವು ಪತ್ರಿಕೆಯಲ್ಲಿ ಬರೆದಿದ್ದರೆ ಅಥವಾ ಭಾಷಣದಲ್ಲಿ ಮಾತಾಡಿದ್ದರೆ ಅಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಬಂಧನಕ್ಕೊಳಗಾಗಬೇಕಾದ ಪರಿಸ್ಥಿತಿ ಎದುರಾಯಿತು. ಇದಕ್ಕೆ ಕಾರಣ ಏನೆಂದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಎಂಬ ಬ್ರಹ್ಮಾಸ್ತ್ರ. ಈ ಸೆಕ್ಷನ್ ಅನ್ನು ಬಳಸಿಕೊಂಡು ಜನರ ಬಾಯಿಗೆ ಬೀಗ ಹಾಕುವ ಕೆಲಸಕ್ಕೆ ನಮ್ಮ ರಾಜಕೀಯ ಪಕ್ಷಗಳು ಮುಂದಾಗುತ್ತಿವೆ. ವಾಕ್ ಸ್ವಾತಂತ್ರ್ಯಹರಣಕ್ಕೆ ಈ ಸೆಕ್ಷನ್ ಅನ್ನು ಒಂದು ದಂಡವನ್ನಾಗಿ ಬಳಸಿಕೊಳ್ಳುತ್ತಿರುವವರಲ್ಲಿ ಕೇವಲ ಬಿಜೆಪಿ ಮತ್ತು ಶಿವಸೇನೆ ಮಾತ್ರ ಮುಂದಿಲ್ಲ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ-ಹೀಗೆ ಎಲ್ಲಾ ಪಕ್ಷಗಳು ಈ ಕೆಲಸವನ್ನು ಮಾಡುತ್ತಲೇ ಬಂದಿವೆ. ಹಾಗೆ ನೋಡಿದರೆ ಈ ಕಾಯ್ದೆಯನ್ನು ತಿದ್ದುಪಡಿ ಮಾಡಿ ಇಂತಹ ಒಂದು ಕರಾಳ ಸೆಕ್ಷನ್ ಸೇರಿಸಿದ್ದೆ ಯುಪಿಎ ಸರಕಾರ. ತನ್ನ ಅಧಿಕಾರವಧಿಯುದ್ದಕ್ಕೂ ಅದನ್ನು ಸಮರ್ಥಿಸಿದ್ದು ಮಾತ್ರವಲ್ಲದೇ ತನ್ನ ಟೀಕಾಕಾರರನ್ನು ಬಗ್ಗುಬಡಿಯುವುದಕ್ಕೂ ಅದನ್ನು ಬಳಸಿಕೊಂಡಿತ್ತು. ಈಗ ಬಿಜೆಪಿ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ವಿರುದ್ಧ ಮಾತಾಡುವ ದನಿಗಳನ್ನೆಲ್ಲ ದಮನಿಸುವುದಕ್ಕೆ ಈ ಸೆಕ್ಷನ್ ಅನ್ನು ಬಳಸಿಕೊಳ್ಳುತ್ತಿದೆ. ಈ ಕರಾಳ ಸೆಕ್ಷನ್ ಅನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯಿಂದ ತೊಡೆದುಹಾಕುವುದಕ್ಕೆ ದೊಡ್ಡ ಜನಾಂದೋಲನವೇ ಆಗಬೇಕಿದೆ. ಇಲ್ಲದಿದ್ದರೆ ಸರಕಾರದ ವಿರುದ್ಧದ ನಮ್ಮ ದನಿಗಳನ್ನು ಅಡಗಿಸುವುದಕ್ಕೆ ಈ ಕಾಯ್ದೆಯನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತದೆ. ಆದರೂ ಈ ಸೆಕ್ಷನ್ ನಿರ್ಮೂಲನೆಯಾಗುವ ವರೆಗಾದರೂ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಷಯವನ್ನು ಪೋಸ್ಟ್ ಮಾಡುವಾಗ, ಲೈಕ್ ಮಾಡುವಾಗ ಅಥವಾ ಕಮೆಂಟ್ ಮಾಡುವಾಗ ಸ್ವಲ್ಪ ಎಚ್ಚರದಿಂದಿರುವುದು ಒಳಿತು.

Courtesy : varthabharati column

Advertisement

0 comments:

Post a Comment

 
Top