PLEASE LOGIN TO KANNADANET.COM FOR REGULAR NEWS-UPDATES

 ಯಾವುದೇ ಸಂಘ -ಸಂಸ್ಥೆಗಳು ಸಮಾಜಮುಖಿ ಸೇವಾ ಕಾರ್ಯಕ್ಕೆ ಮುಂದಾಗಬೇಕು. ಕೇವಲ ಸಂಸ್ಥೆಯಾಗಿ ಹುಟ್ಟಿದರೆ ಸಾಲದು, ಮಾನವ ಕಲ್ಯಾಣಕ್ಕೆ  ದಾರಿಯಾದಾಗಲೇ ಅದು ಸಾರ್ಥಕತೆ ಪಡೆಯುತ್ತದೆ ಎಂದು ಭಾಗ್ಯನಗರ ಗ್ರಾಮ ಪಂಚಾಯತಿ ಅಧ್ಯಕ್ಷ ಹೊನ್ನೂರಸಾಬ ಭೈರಾಪುರ ಹೇಳಿದರು.
                 ಭಾಗ್ಯನಗರದ ಮೋಚಿ ಓಣಿಯ ಮರಿಯಮ್ಮನ ದೇವಸ್ಥಾನದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಸುರಕ್ಷ ಫೌಂಡೇಶನ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಮಹಿಳಾ ಸಬಲೀಕರಣ, ಸಮಾಜದಲ್ಲಿ ಇನ್ನೂ ತಳವೂರಿರುವ ಅನಕ್ಷರತೆಯನ್ನು ತೊಡೆದು ಹಾಕಲು ಇಂಥ ಸಂಸ್ಥೆಗಳು ಮುಂದಾಗುವ ಜರೂರತ್ತನ್ನು ಒತ್ತಿ ಹೇಳಿದರು.
ಮತ್ತೊಬ್ಬ ಮುಖ್ಯ ಅತಿಥಿ ಚನ್ನಪ್ಪ ತಟ್ಟಿ ಮಾತನಾಡಿ, ಸಂಸ್ಥೆಯ ಪದಾಧಿಕಾರಿಗಳು ಹಣದ ಮೋಹಕ್ಕೆ ಒಳಗಾಗದೇ ಆತ್ಮ ಸಾಕ್ಷಿಯಿಂದ ದುಡಿಯಬೇಕಾದದ್ದು ಅಗತ್ಯ ಎಂದು ಪ್ರತಿಪಾದಿಸಿದರು. ಸಂಸ್ಥೆಯ ಮೂಲಕ ಉಚಿತ ನೇತ್ರ ತಪಾಸಣೆ, ರಕ್ತ ದಾನದಂಥ ಉತ್ತಮ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ವಿನಂತಿಸಿದರು.
ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿ ಕಾ ಬಡಿಗೇರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಇತ್ತೀಚೆಗೆ ಸಂಸ್ಥೆಗಳ ಮೂಲಕ ಸಾಕಷ್ಟು ಕಾರ್ಯಗಳು ನಡೆಯುತ್ತಿರುವದು ಶ್ಲಾಘನೀಯವಾದದ್ದು ಎಂದು ಅಭಿಪ್ರಾಯಪಟ್ಟರು. ಅಜೀಂ ಪ್ರೇಮಜಿ ಫೌಂಢೇಶನ್ ಶಿಕ್ಷಣಕ್ಕಾಗಿ ಸಾಕಷ್ಟು ಕೆಲಸವನ್ನು ದೇಶದಲ್ಲಿ ಮಾಡುತ್ತಿದೆ. ಆ ಮಾದರಿಯಲ್ಲಿ ಭಾಗ್ಯನಗರದಲ್ಲಿ ಹೊಸದಾಗಿ ಕಾಲಿಡುತ್ತಿರುವ ಸುರಕ್ಷ ಫೌಂಡೇಶನ್ ಅಂಥ ಉತ್ತಮವಾದ ಸೇವೆಯನ್ನು ಮಾಡಲಿ ಎಂದು ಆಶಿಸಿದರು. ಸಂಸ್ಥೆಯ ಸದಸ್ಯರು ಲಾಭದ ಉದ್ದೇಶವನ್ನು ಎಂದೂ ಇಟ್ಟುಕೊಳ್ಳದೇ ನಿಸ್ವಾರ್ಥತೆಯಿಂದ ದುಡಿಯಲು ಬಿನ್ನವಿಸಿದರು.
ಆರಂಭದಲ್ಲಿ  ಸಂಸ್ಥೆಯ ಅಧ್ಯಕ್ಷ ಯಲ್ಲಪ್ಪ ಕವಲೂರು ಸಂಸ್ಥೆಯ ಧೇಯೋಧ್ದೇಶಗಳನ್ನು ವಿವರಿಸಿದರು. ತಮ್ಮ ಸಂಸ್ಥೆಯ ವತಿಯಿಂದ ಸಾಕಷ್ಟು ಕಾರ್ಯಕ್ರಮ ನಡೆಸುವದಾಗಿ ತಿಳಿಸಿದರು.ಗ್ರಾಮ ಪಂಚಾಯಿತಿ ಸದಸ್ಯರಾದ  ಮಲ್ಲೇಶ ಬುಲ್ಟಿ ಹಾಗೂ ಸುರೇಶ ದರಗದಕಟ್ಟಿ ವೇದಿಕೆಯ ಮೇಲಿದ್ದರು. ಸಂಸ್ಥೆಯ ಕಾರ್ಯದರ್ಶಿ ಚಂದ್ರೇಶ ಬೆದವಟ್ಟಿ. ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ಸುತಾರ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.   ಉಪಾಧ್ಯಕ್ಷ ಕುಬೇರಪ್ಪ.ಸಿ.ಕವಲೂರು, ಸಹ ಕಾರ್ಯದರ್ಶಿ ಸೋಮಶೇಖರ ಮಡಿವಾಳರ, ಖಜಾಂಚಿ ರಾಘವೇಂದ್ರ, ಉಪಸ್ಥಿತರಿದ್ದರು. 

25 Apr 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top