ಆಧಾರ: ಸುರೇಶ್ ಭಟ್, ಬಾಕ್ರಬೈಲ್

ಗುಲ್ಬರ್ಗ್ ಹತ್ಯಾಕಾಂಡ ಕುರಿತು ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ ಝಾಕಿಯಾ ಜಾಫ್ರಿ (ಎಹಸಾನ್ ಜಾಫ್ರಿಯವರ ಪತ್ನಿ) ನರೇಂದ್ರ ಮೋದಿಯನ್ನು ಮುಖ್ಯ ಆರೋಪಿಯಾಗಿ ಹೆಸರಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ಕೋರ್ಟು ವಿಶೇಷ ತನಿಖಾ ತಂಡವೊಂದನ್ನು (ಎಸ್‌ಐಟಿ) ನೇಮಿಸಿ ಮೋದಿ ವಿರುದ್ಧ ಕಾನೂನುಕ್ರಮ ಜರಗಿಸುವಷ್ಟು ಪುರಾವೆಗಳಿವೆಯೆ ಎಂದು ತಿಳಿಯುವಂತೆ ಆದೇಶಿಸಿತ್ತು. ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದ ಈ ಸಮಿತಿಯಲ್ಲಿದ್ದವರಲ್ಲಿ ಹಲವು ಮಂದಿ ಮೋದಿ ಕಿಂಕರರೆ ಆಗಿದ್ದರು.

ಅಂತೆಯೆ ಸುಪ್ರೀಂ ಕೋರ್ಟು ಭಾರತದ ನ್ಯಾಯಾಂಗ ಪ್ರಕ್ರಿಯೆಗನುಗುಣವಾಗಿ ಸಿಆರ್‌ಪಿಸಿ 173 (8)ರ ಅನ್ವಯ ಎಸ್‌ಐಟಿ ತನ್ನ ಅಂತಿಮ ವರದಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿತು. ಎರಡೂ ಕಡೆಗಳ ವಾದಗಳನ್ನಾಲಿಸಿದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಗಣಾತ್ರ, ಗುಲ್ಬರ್ಗ್ ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಸಂಗ್ರಹಿಸಿರುವ ಪುರಾವೆಗಳ ಆಧಾರದಲ್ಲಿ ಮೋದಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗುವುದಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.

ಇವರಲ್ಲಿ ನಾವೆಲ್ಲರೂ ಕೇಳಬೇಕಾಗಿರುವ ಪ್ರಶ್ನೆಗಳೇನೆಂದರೆ ‘ಕ್ಲೀನ್ ಚಿಟ್’ ಅಂದರೇನು? ಕಾನೂನಿನಲ್ಲಿ ಅಂತಹದೊಂದು ಶಬ್ದ ಇದೆಯೇ? ಜನಬಳಕೆಯ ಪರಿಭಾಷೆಯಲ್ಲಿ ‘ಕ್ಲೀನ್ ಚಿಟ್ ಸಿಕ್ಕಿದೆ’ ಅಂದರೆ ಸಾಮಾನ್ಯವಾಗಿ ನಿರ್ದೋಷಿಯೆಂದು ಘೋಷಿಸಲಾಗಿದೆ ಯಾ ಆರೋಪಗಳಿಂದ ಮುಕ್ತಗೊಳಿಸಲಾಗಿದೆ ಎಂದರ್ಥ. ಆದರೆ ಎಸ್‌ಐಟಿ ವರದಿ ಮೋದಿಯನ್ನು ನಿರ್ದೋಷಿಯೆಂದು ಘೋಷಿಸುವುದಿಲ್ಲ; ಅದು ಹೇಳುವುದಿಷ್ಟೇ: ಅದರ ಅಭಿಪ್ರಾಯದಲ್ಲಿ, ಅದಕ್ಕೆ ದೊರೆತಿರುವ ಪುರಾವೆಗಳನ್ನು ಆಧರಿಸಿ ಮೋದಿ ವಿರುದ್ಧ ಕ್ರಿಮಿನಲ್ ಕೇಸು ಹೂಡಲಾಗುವುದಿಲ್ಲ.

ಈ ಸಂದರ್ಭದಲ್ಲಿ ಮೆಹಿಬೂಬ್ ಸಾಹಿಬ್ ವರ್ಸಸ್ ಕರ್ನಾಟಕ ಉಪಲೋಕಾ ಯುಕ್ತ ಪ್ರಕರಣದಲ್ಲಿ (ಐಔ್ಕ 2002 ಓಅ್ಕ ಜಛಿ 2535 ಠಿಛಿ 18ಠಿ ಅಟ್ಟಜ್ಝಿ 2002) ಕರ್ನಾಟಕ ಹೈಕೋರ್ಟು ನೀಡಿರುವ ತೀರ್ಪು ತುಂಬಾ ಪ್ರಸ್ತುತವಿದೆ. 20) ......ಆರೋಪಿಯನ್ನು ವಿಚಾರಣೆ ಗೊಳಪಡಿಸಲು ಸಾಧ್ಯವಿದೆಯೆಂದು ತನಿಖಾಧಿಕಾರಿ ಅಭಿಪ್ರಾಯಪಟ್ಟಲ್ಲಿ ಆರೋಪಪಟ್ಟಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತದೆ. ತನಿಖಾಧಿಕಾರಿಯು ತದ್ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದರೆ ‘ಬಿ’ ವರದಿ ಸಲ್ಲಿಸಲಾಗುತ್ತದೆ. ಕ್ರಿಮಿನಲ್ ಕೋರ್ಟು ‘ಬಿ’ ವರದಿಯನ್ನು ಅಂಗೀಕರಿಸಿ ದಾಗ ವಿಷಯ ಅಲ್ಲಿಗೆ ಕೊನೆಗೊಳ್ಳುತ್ತದೆ/ಕಾನೂನುಕ್ರಮ ಜರಗುತ್ತದೆ.
ಆದುದರಿಂದ ‘ಬಿ’ ವರದಿ ಸಲ್ಲಿಸುವ ತನಿಖಾಧಿಕಾರಿಯು ಆರೋಪಿ ವಿರುದ್ಧ ಕ್ರಿಮಿನಲ್ ದಾವೆ ಹೂಡುವಷ್ಟು ಪುರಾವೆಗಳಿಲ್ಲ ಎಂಬ ತನ್ನ ಅಭಿಪ್ರಾಯವನ್ನಷ್ಟೆ ಕೋರ್ಟಿಗೆ ತಿಳಿಸುತ್ತಾನೆ. ಕೋರ್ಟು ‘ಬಿ’ ವರದಿಯನ್ನು ಅಂಗೀಕರಿಸಿ ಕಾನೂನುಕ್ರಮ ಜರಗಿಸಲು ಆದೇಶಿಸುವ ಸಂದರ್ಭದಲ್ಲಿ ಯಾವುದೇ ಆರೋಪಗಳ ಕುರಿತು ತನಿಖೆ ನಡೆಸುವ ಕ್ರಮವಾಗಲಿ, ಆರೋಪಿ ನಿರ್ದೋಷಿಯೆಂದು ದಾಖಲಿಸುವ ಕ್ರಮವಾಗಲಿ ಇಲ್ಲ. ವಾಸ್ತವವಾಗಿ ಆರೋಪವೆ ಇಲ್ಲದಾಗ ಆರೋಪಮುಕ್ತಗೊಳಿಸುವ ಪ್ರಶ್ನೆಯೆ ಉದ್ಭವಿಸುವುದಿಲ್ಲ.....ಗುಲ್ಬರ್ಗ್ ಪ್ರಕರಣವನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬೇಕು.
ಮ್ಯಾಜಿಸ್ಟ್ರೇಟ್ ಗಣಾತ್ರ ಎಸ್‌ಐಟಿ (ಇಲ್ಲಿ ತನಿಖಾಧಿಕಾರಿ) ವರದಿಯನ್ನು ಅಂಗೀಕರಿಸಿದರೆಂದ ಮಾತ್ರಕ್ಕೆ (1) ನರೇಂದ್ರ ಮೋದಿ ನಿರಪರಾಧಿ ಎಂದಾಗುವುದಿಲ್ಲ (2) ಆತನ ಮೇಲಿರುವ ಆರೋಪಗಳೆಲ್ಲವೂ ಬಿದ್ದುಹೋಗಿವೆ ಎಂದಾಗುವುದಿಲ್ಲ. ಮುಂದೆ ನ್ಯಾಯಾಲಯದಲ್ಲಿ ವಿಧ್ಯುಕ್ತ ವಿಚಾರಣೆ ನಡೆದು, ಎಲ್ಲಾ ಪುರಾವೆಗಳನ್ನು ಪರಿಗಣಿಸಿದ ಬಳಿಕವೆ ಆರೋಪಿ ನಿರಪರಾಧಿ ಅಥವಾ ಅಪರಾಧಿ ಎಂದು ಘೋಷಿಸಲಾಗುತ್ತದೆ. ಯಾವ ಹೇಳಿಕೆಗಳ ಆಧಾರದಲ್ಲಿ ತನಿಖಾಧಿಕಾರಿ ತನ್ನ ಅಭಿಪ್ರಾಯಕ್ಕೆ ಬರುತ್ತಾನೋ ಅಂಥಾ ಹೇಳಿಕೆಗಳು ಕಾನೂನಿನ ದೃಷ್ಟಿಯಲ್ಲಿ ಪುರಾವೆ ಆಗುವುದಿಲ್ಲ.
ಆದುದರಿಂದಲೆ ಸ್ಥಳೀಯ ನ್ಯಾಯಾಲಯ ಎಸ್‌ಐಟಿ ವರದಿಯನ್ನು ಒಪ್ಪಿರುವುದರ ಅರ್ಥ ಮೋದಿ ನಿರಪರಾಧಿ ಎಂದು ಅಲ್ಲವೆ ಅಲ್ಲ. ಇಲ್ಲಿ ಗಮನಿಸಬೇಕಿರುವ ಅಂಶವೆಂದರೆ ಕಾನೂನು ಪ್ರಕ್ರಿಯೆಯನ್ವಯ ಸ್ಥಳೀಯ ನ್ಯಾಯಾಲಯದ ಆದೇಶವನ್ನೀಗ ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಮೋದಿ ವಿರುದ್ಧ ಇನ್ನೊಂದು ಪ್ರಕರಣವೂ ಇದೆ. ಅದೇ ನರೋದಾ ಪಾಟಿಯಾ ಪ್ರಕರಣ. ಈ ಪ್ರಕರಣದಲ್ಲಿ ಈಗಾಗಲೇ ಮಾಯಾ ಕೊಡ್ನಾನಿ, ಬಾಬು ಬಜರಂಗಿ ಮತ್ತಿತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ ಎಂಬುದನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು.
ನರೋದಾ ಪಾಟಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಮತ್ತಿತರ ನಾಲ್ವರ ವಿರುದ್ಧ 5 ವರ್ಷಗಳ ಹಿಂದೆಯೆ ಎಸ್‌ಐಟಿಗೆ ಅರ್ಜಿ ಸಲ್ಲಿಸಲಾಗಿದ್ದು ಎಸ್‌ಐಟಿಯ ವರದಿ ಇನ್ನು ಬರಬೇಕಷ್ಟೆ. ಆದುದರಿಂದಲೆ ಈ ‘ಕ್ಲೀನ್ ಚಿಟ್’ ಘೋಷಣೆ ಎನ್ನುವುದು ದೊಡ್ಡದೊಂದು ದಗಲ್ಬಾಜಿಯಾಗಿದ್ದು ಅದರ ಹಿಂದೆ ಅಮಾಯಕ ಜನರ ದಿಕ್ಕು ತಪ್ಪಿಸುವ ಉದ್ದೇಶ ಅಡಗಿದೆ ಎಂಬುದನ್ನು ಈಗಲಾದರೂ ಗುರುತಿಸಬೇಕಾಗಿದೆ. ***
courtesy : varthabharati
www.truthofgujarat.com )
Photo courtesy : Internet
0 comments:
Post a Comment
Click to see the code!
To insert emoticon you must added at least one space before the code.