ನ್ಯಾಯವಾದಿಗಳು ಕಕ್ಷಿದಾರರಿಗೆ ನ್ಯಾಯದಾನ ಕೊಡಿಸುವುದರ ಜೊತೆಗೆ ಸಾಮಾಜಿ
ಕ ಕಳಕಳಿ ಹೊಂದುವುದು ಅಗತ್ಯವಾಗಿದೆ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಬಿ.ಎಸ್. ಇಂದ್ರಕಲಾ ಅವರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಒಂದು ದಿನದ ಕಾನೂನು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಸಂವಿಧಾನದತ್ತ ಮಹಿಳೆಯರ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯ ಡೀನ್ ಹಾಗೂ ನಿರ್ದೇಶಕ ಸಿ.ಎಸ್. ಪಾಟೀಲ್ ಅವರು ಮಾತನಾಡಿ, ಸಂವಿಧಾನದಲ್ಲಿ ಮಹಿಳೆ ಮತ್ತು ಪುರುಷರಿಗೆ ಸಮಾನವಾದ ಹಕ್ಕುಗಳಿದ್ದು, ಲಿಂಗ ಸಮಾನತೆಯಲ್ಲಿ ಯಾವುದೇ ತಾರತಮ್ಯ ಎಸಗಿದರೂ ಅದು ಸಂವಿಧಾನ ಬಾಹಿರವಾಗುತ್ತದೆ. ಉದಾಹರಣೆಗೆ ಸಮಾನ ಕೆಲಸಕ್ಕೆ ಸಮಾನ ಕೂಲಿ ಎಂಬುದು ಸಂವಿಧಾನಾತ್ಮಕ ಹಕ್ಕು. ಆದರೆ ಇದರ ಅರಿವಿಲ್ಲದೆ ಕೂಲಿ ಹಣ ಪಾವತಿಯಲ್ಲಿಯೂ ತಾರತಮ್ಯ ಎಸಗಿದಲ್ಲಿ, ಮಹಿಳೆಯರು ಅದನ್ನು ವಿರೋಧಿಸಬೇಕು. ಮಹಿಳೆಯರು ಯಾರನ್ನೂ ಅವಲಂಬಿಸದೆ, ತಮಗೆ ತಾವೇ ಅಭಿವೃದ್ಧಿಯತ್ತ ಸಾಗಲು ಯತ್ನಿಸಬೇಕು. ಹಿಂದುಳಿದ ಪ್ರದೇಶವಾಗಿರುವ ಈ ಭಾಗದಲ್ಲಿ ಮಹಿಳೆಯರು ಮತ್ತು ಮಕ್ಕಳು ತಮ್ಮ ಹೊಲಗಳಲ್ಲಿ ದುಡಿಯದಿದ್ದರೆ, ಅಂತಹ ಮನೆಯಲ್ಲಿ ಬೆಳೆ ಬಾರದ ಪರಿಸ್ಥಿತಿ ಇದೆ. ಪುರುಷರಲ್ಲಿ ಕೌಟುಂಬಿಕ ಹೊಣೆಗಾರಿಕೆ ಪ್ರಜ್ಞೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮಹಿಳೆಯರೇ ಇಂತಹ ಪರಿಸ್ಥಿತಿಯನ್ನು ಸರಿಪಡಿಸುವ ಉಪಾಯವನ್ನು ಕಂಡುಕೊಳ್ಳಬೇಕು ಎಂದು ಅವರು ಮಹಿಳೆಯರಿಗೆ ಕಿವಿಮಾತು ಹೇಳಿದರು.
ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಶ್ರೀಕಾಂತ ದಾ ಬಬಲಾದಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲಾ ಅಕಾಡೆಮಿ ಅಧ್ಯಕ್ಷರು ಹಾಗೂ ರಾಜ್ಯ ವಕೀಲರ ಪರಿಷತ್ ಸದಸ್ಯೆ ಸಂಧ್ಯಾ ಮಾದಿನೂರ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಪ್ರಾರಂಭದಲ್ಲಿ ಸ್ವಾಗತಿಸಿದರು. ಕಿರಿಯ ಶ್ರೇಣಿ ನ್ಯಾಯಾಧೀಶರಾದ ಕಾವೇರಿ ಅವರು ಕಾರ್ಯಕ್ರಮ ನಿರೂಪಿಸಿದರು. ವಕೀಲ ಎಂ. ಹನುಮಂತರಾವ್ ಅವರು ’ಕಾನೂನು ಸೇವಾ ಪ್ರಾಧಿಕಾರ ನಡೆದುಬಂದ ಹಾದಿ’ ಕುರಿತು ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಹಿರಿಯ ಶ್ರೇಣಿ ನ್ಯಾಯಾಧೀಶರಾದ ಬಸವರಾಜ ಚೆಗರೆಡ್ಡಿ ಸೇರಿದಂತೆ ಅನೇಕ ನ್ಯಾಯವಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
0 comments:
Post a Comment