ಜನರಿಂದ, ಜನರಿಗಾಗಿ, ಜನರಿಗೋಸ್ಕರವಾಗಿರುವುದೆ ಪ್ರಜಾಪ್ರಭುತ್ವ ವ್ಯವಸ್ಥೆ. ಇಂಥ ಬೃಹತ್ತಾಗಿರುವ ಜನತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭಾರತ ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈ ಬಗ್ಗೆ ಭಾರತೀಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹೋಗಿ ಮತ್ತೆ ರಾಜ, ಮಹಾರಾಜರ ಆಡಳಿತ ಬರುತ್ತಿದೆ ಏನು ಎಂಬಂತೆ ಕಾಣುತ್ತಿದೆ.
ಜನಸಾಮಾನ್ಯನಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಜನರ ಬೇಕು, ಬೇಡಿಕೆಗಳು, ಜನರಿಗೆ ಅನುಕೂಲವಾಗುವಂಥ ಕಾನೂನು, ಯೋಜನೆಗಳನ್ನು ರೂಪಿಸಬೇಕು ಎನ್ನುವುದು ಪ್ರಜಾಪ್ರಭುತ್ವದ ಮೂಲ ಆಶಯ. ಆದರೆ ಈ ಮೂಲ ಆಶಯವನ್ನು ಇಂದು ಕಣ್ಣಿಗೆ ಎಣ್ಣೆ ಹಚ್ಚಿಕೊಂಡು ಹುಡುಕಬೇಕಾಗಿದೆ.
ಆಡಳಿತ ನಡೆಸುವ ಪ್ರಭುತ್ವವು ಜನರ ಬೇಡಿಕೆಗಳನ್ನು ಈಡೇರಿಸಿದೆ ಇದ್ದರೆ, ಹೋರಾಟ, ಸತ್ಯಾಗ್ರಹ, ಘೇರಾವು ಸೇರಿದಂತೆ ವಿವಿಧ ಹಂತದ ಹೋರಾಟವನ್ನು ಹಿಂದಿನಿಂದಲೂ ಜನತೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಭಾರತದಲ್ಲಿ ಸತ್ಯಾಗ್ರಹಗಳಿಂದಲೆ ಸ್ವತಂತ್ರ್ಯವನ್ನು ತಂದುಕೊಟ್ಟ ಕೀರ್ತಿ ಮಹಾತ್ಮಾ ಗಾಂಧೀಜಿಗೆ ಸಲ್ಲುತ್ತದೆ. ಆಗಲೂ ಸಹ ಸತ್ಯಾಗ್ರಹಗಳಿಗೆ ಬ್ರಿಟಿಷ್ ಆಡಳಿತ ಬಗ್ಗದಿದ್ದಾಗ ಕರ ನಿರಾಕರಣೆಯಂಥ ಹೋರಾಟ ಮಾಡಿದ್ದು ಇದೆ.


ಇದೇ ರೀತಿ ೨೦೧೦ ರಲ್ಲಿ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಕೊಪ್ಪಳಕ್ಕೆ ಸೀರೆ ಹಂಚಲು ಬರುವಾಗ ಸರ್ಕಾರದ ಕ್ರಮವನ್ನು ವಿರೋಧಿಸುವದಾಗಿ ಹೇಳಿಕೆ ನೀಡಿದ್ದ ಅಂದು ಜೆಡಿಎಸ್‌ನಲ್ಲಿ ಶಾಸಕನಾಗಿದ್ದು ಇಂದಿನ ಮಾಜಿ ಶಾಸಕರಾಗಿರುವ ಸಂಗಣ್ಣ ಕರಡಿ ಸೇರಿದಂತೆ ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿ ಕಾರ್ಯಕ್ರಮ ಮುಗಿಯುವವರಿಗೂ ದೂರದ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಅದೇ ರೀತಿ ಅದೇ ಯಡಿಯೂgಪ್ಪ ೨೦೧೧ರಲ್ಲಿ ಕೊಪ್ಪಳದಲ್ಲಿ ವಿವಿಧ ಕಾರ್ಯಕ್ರಮಕ್ಕೆ ಆಗಮಿಸಿದಾಗ ಅಂದು ನೆರೆ ಸಂತ್ರಸ್ತರಿಗಾಗಿ ನರೇಗಲ್ ಗ್ರಾಮದಲ್ಲಿ ನಿರ್ಮಿಸಿದ ಮನೆಗಳ ಗುಣಮಟ್ಟ ಕಳಪೆಯಾಗಿದೆ ಎಂದು ಧರಣಿ ನಡೆಸಿದ್ದ ವಿವಿಧ ಸಂಘಟನೆಗಳ ಮುಖಂಡರನ್ನು ಅವರು ಎಲ್ಲಿ ಇದ್ದರು ಅಲ್ಲಿಯೇ ಬಂಧಿಸಿದ ಅಮಾನವೀಯ ಘಟನೆಯೂ ಜರುಗಿತ್ತು.
ಯಡಿಯೂರಪ್ಪ ಅಧಿಕಾರ ಕಳೆದುಕೊಂಡು ರಾಜ್ಯದಲ್ಲಿ ಬರ ಅಧ್ಯಯನಕ್ಕಾಗಿ ಕೊಪ್ಪಳ ತಾಲೂಕಿನ ವದಗನಹಾಳ ಗ್ರಾಮಕ್ಕೆ ಆಗಮಿಸಿದಾಗ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ವದಗನಹಾಳ ಗ್ರಾಮದ ಕುಟುಂಭದ ಯುವಕ ಸಾವುನ್ನಪ್ಪಿದ್ದು. ಅದಕ್ಕೆ ನಮಗೆ ನ್ಯಾಯ ಕೊಡಿ ಎಂದು ಅವರ ಕುಟುಂಭದವರು ಕೇಳಲು ಹೋಗಿದ್ದವರನ್ನು ಪೊಲೀಸರು ಬಂಧಿಸಿದ ಘಟನೆ ನಡೆಯಿತು.
ಇದು ಯಡಿಯೂರಪ್ಪ ಕಾಲದ ಘಟನೆಗಳಾದರೆ ಗಂಗಾವತಿಯಲ್ಲಿ ನಡೆದ ೭೮ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಎಸ್‌ಎಫ್‌ಐ ಕಾರ್ಯಕರ್ತರು ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವದನ್ನು ವಿರೋಧಿಸಿ ಸರ್ಕಾರ iತ್ತು ಮುಖ್ಯಮಂತ್ರಿಗಳ ವಿರುದ್ದ ಘೋಷಣೆ ಹಾಕಿದ್ದನ್ನೆ ನೆಪ ಮಾಡಿಕೊಂಡು ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಬೀಸಿದ್ದು ಅಲ್ಲದೆ ಅವರನ್ನು ಬಂಧಿಸಿದ ಘಟನೆ ಜರುಗಿತು.
ಇಂತಹ ತಪ್ಪುಗಳನ್ನು ಮಾಡುವುದಿಲ್ಲ ಎಂದುಕೊಂಡಿದ್ದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೂ ಜನಪರ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿರುವದಕ್ಕೆ ಸಿಂಧನೂರು ಘಟನೆ ಸಾಕ್ಷಿಯಾಗಿದೆ. ಯಾಕೆಂದರೆ ಸಿದ್ದರಾಮಯ್ಯ ವಿರುದ್ದ ಪಕ್ಷದಲ್ಲಿದ್ದಾಗ ಸರ್ಕಾರದ ಈ ಕ್ರಮವನ್ನು ಖಂಡಿಸಿದ್ದರು. ಕೊಪ್ಪಳದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಕೂಲಿ ನೀಡಿ ಎಂದು ಹೋರಾಟ ಮಾಡಿದ ಕೂಲಿಕಾರರ ಮೇಲೆ ಲಾಠಿ ಪ್ರಹಾರ ಮಾಡಿದ್ದನ್ನು ಉಗ್ರವಾಗಿ ಖಂಡಿಸಿದ್ದರು.
ಆದರೆ ಅವರು ಅಧಿಕಾರಕ್ಕೆ ಬಂದ ತಕ್ಷಣ ಮಾಡಿದ್ದು ಸಹ ಹಿಂದಿನ ಮುಖ್ಯಮಂತ್ರಿಗಳು ಮಾಡಿದ ಕೆಲಸವನ್ನೆ, ಮುಖ್ಯಮಂತ್ರಿಯೆಂದರೆ ಈ ರಾಜ್ಯದ ೭ ಕೋಟಿ ಜನರ ಪ್ರತಿನಿಧಿ, ಈ ಜನರಲ್ಲಿ ಬಡವರಿಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ. ಅದಕ್ಕೆ ನಿಮ್ಮ ಗಮನ ಸೆಳೆಯಲು ನಾವು ಘೇರಾವು ಮಾಡಿ ಮನವಿ ಸಲ್ಲಿಸುತ್ತೇವೆ ಎಂದುಕೊಂಡರೆ ಅದಕ್ಕೆ ಅವಕಾಶವಿಲ್ಲದಂತೆ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಹೋರಾಟಗಾರ ಅಭಿಪ್ರಾಯ.
ಸಿಂಧನೂರ ತಾಲೂಕಿನಲ್ಲಿ ೧೯೮೧ರಿಂದ ಇಲ್ಲಿಯ ಮಾಜಿ ಶಾಸಕ ವೆಂಕಟರಾವ್ ನಾಡಗೌಡರು ಅಧಿಕ ಭೂಮಿಯನ್ನು ಹೊಂದಿದ್ದಾರೆ, ಉಳುವವನೆ ಭುಮಿ ಒಡೆಯ ಎಂಬ ದೇವರಾಜ ಅರಸರ ಕಲ್ಪನೆಯಂತೆ ಭೂಮಿ ಇಲ್ಲದವರಿಗೆ ಭೂಮಿ ನೀಡಿ ಎಂದು ಇಲ್ಲಿಯ ಸಿಪಿಎಂಎಲ್ ಪಕ್ಷ ಹೋರಾಟ ಮಾಡುತ್ತಾ ಬಂದಿದೆ. ಆದರೆ ಅದಕ್ಕೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಈಗಾಗಲೆ ರೈತರು ಈ ಭೂಮಿಯನ್ನು ಉಳುತ್ತಿದ್ದಾರೆ. ಕಾನೂನಾತ್ಮಕವಾಗಿ ಕೆಲಸ ಮಾಡಿ ರೈತರಿಗೆ ನೀಡಿ ಎಂದು ಹಲವು ಭಾರಿ ಹೋರಾಟ, ಕಾನೂನಾತ್ಮಕ ಹೋರಾಟ ಮಾಡಿದರೂ ಅದಕ್ಕೆ ಯಾರು ಕ್ಯಾರೆ ಎನ್ನದಿದ್ದರಿಂದ ರೈತರೊಂದಿಗೆ ಮುಖ್ಯಮಂತ್ರಿಗೆ ಘೇರಾವು ಹಾಕುತ್ತವೆ ಎಂದು ಹೇಳಿಕೆ ನೀಡಿದ್ದೆ ತಪ್ಪು ಎನ್ನುವಂತೆ ಅವರನ್ನು ರಾತ್ರೋರಾತ್ರಿ ಬಂಧಿಸಿ ಕೇಸು ದಾಖಲಿಸಿದ್ದಾರೆ.
ಅದು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿರಲಿಕ್ಕು ಸಾಕು. ಒಮ್ಮೊಮ್ಮೆ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲದೆ ಇಂಥ ಕಾರ್ಯಗಳು ನಡೆಯುತ್ತವೆ. ಪೊಲೀಸರು ಮುಖ್ಯಮಂತ್ರಿಯನ್ನು ಒಲೈಸಿಕೊಳ್ಳುವ ಉದ್ದೇಶದಿಂದ ಅವರ ಕಾರ್ಯಕ್ರಮಕ್ಕಿಂತ ಮುಂಚೆಯೇ ಧರಣಿ, ಮನವಿ ಪತ್ರ, ಘೇರಾವು ಮಾಡುವವರ ಬಗ್ಗೆ ನಿಗಾ ವಹಿಸಿ ಅವರನ್ನು ಮುಖ್ಯಮಂತ್ರಿಗಳ ಬಳಿಯಲ್ಲಿ ಹೋಗದಂತೆ ಕ್ರಮಕೈಗೊಳ್ಳುತ್ತಾರೆ.
ಗುಪ್ತಚರ ಇಲಾಖೆಯವರಂತೂ ಮುಖ್ಯಮಂತ್ರಿ ಬರುವ ಮುನ್ನ ಈ ಬಗ್ಗೆ ಏನೇನು ಚಟುವಟಿಕೆ ನಡೆಯುತ್ತವೆ ಎಂಬುದವರ ಬಗ್ಗೆ ಮಾಹಿತಿ ಪಡೆದು ಮುಖ್ಯಮಂತ್ರಿಗಳನ್ನು ರಾಜರಂತೆ ನೋಡಿಕೊಳ್ಳುತ್ತಾರೆ.
ಇತ್ತೀಚಿಗೆ ಮುಖ್ಯಮಂತ್ರಿ ಸೇರಿದಂತೆ ಅಧಿಕಾರಿಯುತ ಜನಪ್ರತಿನಿಧಿಗಳ ಕಾರ್ಯಕ್ರಮದ ವೇದಿಕೆ ಮುಂದೆ ೧೦೦ ಮೀಟರ್‌ವರಿಗೆ ಮಾನವ ರಹಿತವಾದ ವೇದಿಕೆಯನು ನಿರ್ಮಿಸುತ್ತಿರುವದು, ನಮ್ಮ ಜನಪ್ರತಿನಿಧಿಗಳು ಜನರಿಂದ ದೂರವಾಗುತ್ತಿರುದರ ಲಕ್ಷಣ ಎನ್ನಲಾಗುತ್ತಿದೆ.

ಜನರ ಮಧ್ಯೆ ಇದ್ದು ಕೆಲಸ ಮಾಡಬೇಕಾದ ಜನಪ್ರತಿನಿಧಿಗಳು ದೂರವಾಗುತ್ತಿದ್ದಾರೆ. ಅದಕ್ಕೆ ಸುಪ್ರೀಂ ಕೋರ್ಟು ಸೂಚಸಿದಂತೆ ಘೇರಾವ, ಕಪ್ಪುಪಟ್ಟಿ ಧರಸಿ ಪ್ರತಿಭಟಿಸಬಾರದು ಎಂಬ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಉಮೇದು ಪೊಲೀಸರದು. ಇದರಿಂದ ಜನರ ಬೇಡಿಕೆಗೆ ಈಡೇರಿಲ್ಲ. ಅದ್ದರಿಂದ ಜನಪ್ರತಿನಿಧಿಗಳು ಧಣಿಗಳು, ರಾಜ ಮಹಾರಾಜರಾಗುತ್ತಿದ್ದಾರೆ. ಈ ಬಗ್ಗೆ ಆಡಳಿತ ನಡೆಸುವ ಜನಪ್ರತಿನಿಧಿಗಳು ಸ್ವವಿಮರ್ಶೆ ಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ.
ಶರಣಪ್ಪ ಬಾಚಲಾಪೂರ ಕೊಪ್ಪಳ
GOOD STORY SIR
ReplyDelete