ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸ್ವೀಪ್ ಕಾರ್ಯಕ್ರಮದಡಿ ಕೊಪ್ಪಳದಲ್ಲಿ ಶನಿವಾರ ಬೆಳಿಗ್ಗೆ ಜಿಲ್ಲಾ ಕ್ರೀಡಾಂಗಣದಿಂದ ಪ್ಯಾರಾಗ್ಲೈಡಿಂಗ್ ಹಾರಾಟ ನಡೆಸಿ, ಮತದಾರರಿಗೆ ಕರಪತ್ರ ಹಾಕುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಏರ್ಪಡಿಸಲಾಯಿತು.
.jpg)
ಮತದಾರರ ಜಾಗೃತಿಗೆ ಚುನಾವಣಾ ಆಯೋಗ ಅನೇಕ ಬಗೆ, ಬಗೆಯ ಕಾರ್ಯಕ್ರಮಗಳನ್ನು ಸ್ವೀಪ್ ಯೋಜನೆಯಡಿ ಹಮ್ಮಿಕೊಂಡಿದೆ. ಇದರಲ್ಲಿ ಪ್ಯಾರಾಗ್ಲೈಡಿಂಗ್ ಸಹ ಒಂದು ವಿಶೇಷ ಸೇರ್ಪಡೆ. 'ಕರ್ನಾಟಕ ವಿಧಾನಸಭಾ ಚುನಾವಣೆ, ೫ನೇ ಮೇ ೨೦೧೩, ನಿಮ್ಮ ಮತ, ನಿಮ್ಮ ಹಕ್ಕು' ಎಂಬ ಸಂದೇಶವನ್ನೊಳಗೊಂಡ ಬ್ಯಾನರ್ ಪ್ಯಾರಾಗ್ಲೈಡಿಂಗ್ ಯಂತ್ರಕ್ಕೆ ಅಳವಡಿಸಲಾಗಿತ್ತು. ಮೇಘಾಲಯ ರಾಜ್ಯದವರಾದ ನಿಕೋಲಾಯ್ ಸಿಂಗ್ ನೇತೃತ್ವದ ೦೭ ಜನರ ತಂಡ ಕೊಪ್ಪಳ, ಭಾಗ್ಯನಗರ ಮುಂತಾದೆಡೆ ಪ್ಯಾರಾಗ್ಲೈಡಿಂಗ್ ಹಾರಾಟ ನಡೆಸಿ, ಸಾರ್ವಜನಿಕರಿಗೆ ಕರಪತ್ರವನ್ನು ಮೇಲಿಂದ ಕೆಳಗೆ ಹಾಕುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡಿತು. ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸ್ವತಃ ಪ್ಯಾರಾಗ್ಲೈಡಿಂಗ್‌ನಲ್ಲಿ ಹಾರಾಟ ನಡೆಸಿ ಸಂಭ್ರಮಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು, ಮತದಾರರ ಜಾಗೃತಿಗೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಕೊಪ್ಪಳ ಜಿಲ್ಲಾ ಮಟ್ಟಿಗೆ ಅತ್ಯಂತ ವಿಶೇಷವಾಗಿದ್ದು, ಈ ಮೂಲಕ ಮತದಾರರಿಗೆ ಜಾಗೃತಿ ಸಂದೇಶವನ್ನೊಳಗೊಂಡ ಕರಪತ್ರ ಹಂಚಲಾಗಿದೆ. ಮತದಾರರು ತಪ್ಪದೆ ತಮ್ಮ ಮತವನ್ನು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕುವಂತಾಗಬೇಕು ಎಂದು ಕರೆನೀಡಿದರು.
ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್. ಘಾಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಕ್ರೀಡಾಂಗಣದಲ್ಲಿ ಜಮಾವಣೆಗೊಂಡಿದ್ದ ಜನ ಈ ರೋಮಾಂಚನಕಾರಿ ಹಾರಾಟ ಕಂಡು ಸಂಭ್ರಮಿಸಿದರು. ಅಲ್ಲದೆ ಮತದಾರರ ಜಾಗೃತಿಗೆ ಚುನಾವಣಾ ಆಯೋಗ ಹಮ್ಮಿಕೊಂಡ ಈ ವಿಶೇಷ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮತದಾನ ದಿನವಾದ ಮೇ. ೦೫ ರಂದು ತಮ್ಮ ಅಮೂಲ್ಯ ಮತವನ್ನು ತಪ್ಪದೆ ಚಲಾಯಿಸುವುದಾಗಿ ಅಭಿಪ್ರಾಯ ಹಂಚಿಕೊಂಡರು.
0 comments:
Post a Comment
Click to see the code!
To insert emoticon you must added at least one space before the code.