PLEASE LOGIN TO KANNADANET.COM FOR REGULAR NEWS-UPDATES


 ಸದ್ದಿಲ್ಲದೆ ಬದಲಾದ ವಿವಿ ಲಾಂಛನ :ಮರೆಯಾದ ಜಿಲ್ಲೆಯ ಐತಿಹಾಸಿಕ ಚಿಹ್ನೆಗಳು

ತುಮಕೂರು, ಮಾ. 29: ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಉದಯವಾದ ತುಮಕೂರು ವಿಶ್ವವಿದ್ಯಾಲಯದ ಲಾಂಛನ ಮತ್ತು ಘೋಷ ವಾಕ್ಯ ಸದ್ದಿಲ್ಲದೆ ಬದಲಾಗಿದೆ. ಪ್ರಾದೇಶಿಕ ಚಿಹ್ನೆಗಳಿಗೆ ಬದಲಿಗೆ ಆಧ್ಯಾತ್ಮಿಕ ಅರ್ಥವನ್ನು ನೀಡುವಂತಹ ಚಿಹ್ನೆ ಮತ್ತು ಘೋಷ ವಾಕ್ಯ ಕಂಡು ಬಂದಿದೆ.
ಬೆಂಗಳೂರು ವಿವಿಯ ಮೇಲಿನ ಹೊರೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ತುಮಕೂರನ್ನು ಕೇಂದ್ರವಾಗಿಟ್ಟುಕೊಂಡು 2004ರಲ್ಲಿ ತುಮಕೂರು ವಿವಿ ಆರಂಭಿಸಲಾಯಿತು. ಇದಕ್ಕೆ ಅಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ಅವರು ಸಾಕಷ್ಟು ಶ್ರಮ ವಹಿಸಿದ್ದರು. ವಿವಿಗೆ ಮೊದಲ ಕುಲಪತಿಯಾಗಿ ನೇಮಕಗೊಂಡ ತುಮಕೂರು ಜಿಲ್ಲೆಯವರೆ ಆದ ಡಾ. ಓ.ಅನಂತರಾಮಯ್ಯ ಮತ್ತು ಜಿಲ್ಲೆಯ ಶಿಕ್ಷಣ ತಜ್ಞರು, ಚಿಂತಕರು, ಜನಸಾಮಾನ್ಯರು ಸೇರಿ ಜಿಲ್ಲೆಯ ಇತಿಹಾಸ, ಭೌಗೋಳಿಕ ಪರಿಸರ, ಸಂಸ್ಕೃತಿ, ಪ್ರಸಿದ್ಧ ಸ್ಥಳ ಹಾಗೂ ಪ್ರಮುಖ ಬೆಳೆಯನ್ನು ಕೇಂದ್ರವಾಗಿಟ್ಟುಕೊಂಡು ವಿವಿಯ ಲಾಂಛನವೊಂದನ್ನು ಸಿದ್ಧಪಡಿಸಿದ್ದರು.
ಅದರಲ್ಲಿ ಜ್ಞಾನದ ಸಂಕೇತವಾಗಿ ಜ್ಯೋತಿ, ತೆಂಗು, ಮಧುಗಿರಿ ಏಕಶಿಲಾ ಬೆಟ್ಟ, ತುಮಕೂರು ಎಂಬ ಹೆಸರು ಬರಲು ಕಾರಣ ಎಂದು ಹೇಳಲಾಗುವ ತುಂಬೆ ಹೂವು, ಟುಮುಕಿ ಚಿಹ್ನೆಗಳನ್ನೊಳಗೊಂಡ ಲಾಂಛನ ಸಿದ್ಧಪಡಿಸಿ ಘೋಷ ವಾಕ್ಯವಾಗಿ ‘ಜ್ಞಾನವೇ ಅನಂತ’ ((Knowledge is Eternal) ಎಂಬ ಪದವನ್ನು ಬಳಕೆ ಮಾಡಿಕೊಳ್ಳಲಾಗಿತ್ತು.
2007ರ ಜನವರಿ ತಿಂಗಳ ಮೊದಲ ವಾರದಲ್ಲಿ ಅಂದಿನ ರಾಜ್ಯಪಾಲ ರಾಮೇಶ್ವರ ಠಾಕೂರ್ ಅಧಿಕೃತವಾಗಿ ವಿವಿಯನ್ನು ಲಾಂಛನದ ಸಮೇತ ಉದ್ಘಾಟನೆಗೊಳಿಸಿದ್ದರು. ಜಿಲ್ಲೆಯ ಪ್ರಾದೇಶಿಕ ಇತಿಹಾಸ ಬಿಂಬಿಸುವ ತುಮಕೂರು ವಿವಿ ಲಾಂಛನ ಇದೀಗ ಬದಲಾಗಿದ್ದು, ಯಾರ ಗಮನಕ್ಕೂ ಬಾರದಂತೆ ಹೊಸ ಲಾಂಛನ ವಿವಿಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ವಿವಿಯ ಹೊರ ಭಾಗದಲ್ಲಿ ನಿಲ್ಲಿಸಲಾಗಿರುವ ಸ್ವಾಗತ ಕಮಾನುಗಳಲ್ಲಿ, ವಿವಿ ಕುಲಪತಿ ಸೇರಿದಂತೆ ವಿವಿಯ ಇತರ ಕಚೇರಿಗಳಲ್ಲಿ ಇನ್ನೂ ಹಳೆಯ ಲಾಂಛನವೇ ಬಳಕೆಯಲ್ಲಿದೆ.
ಆದರೂ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಏಕೆ ಹೊಸ ಲಾಂಛನ ಬಳಸಲಾಗುತ್ತಿದೆ ಎಂಬುದಕ್ಕೆ ವಿವಿ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಇದು ಸಾಕಷ್ಟು ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ. ಹೊಸ ಲಾಂಛನ ಪಿರಮಿಡ್ ಆಕೃತಿಯಲ್ಲಿದ್ದು, ಅದರ ಒಳ ಭಾಗದಲ್ಲಿ ಅರಳಿ ನಿಂತಿರುವ ಕಮಲದ ಹೂವಿನ ಮೇಲೆ ಉದಯಿಸುತ್ತಿರುವ ಸೂರ್ಯ, ಅದರ ಮೇಲೆ ಜ್ಯೋತಿ ಇದ್ದು ಮತ್ತೂ ಮೇಲ್ಭಾಗದಲ್ಲಿ ಅಣುಶಕ್ತಿಯ ಸಂಕೇತ ಬಳಸಲಾಗಿದೆ.
ಘೋಷ ವಾಕ್ಯವಾಗಿ ‘ಸೇವಾಸುತಿ ಮೇ ಜ್ಞಾನ ವಿಜ್ಞಾನ ಧಾರಾ’ ಎಂಬ ಸಂಸ್ಕೃತ ವಾಕ್ಯವನ್ನು ಬಳಸಲಾಗಿದೆ. ಇದೆಲ್ಲವನ್ನೂ ನೋಡಿದರೆ ಕಮಲದ ಹೂ ಬಿಜೆಪಿಯ ಚಿಹ್ನೆಯಾಗಿ, ಉದಯಿಸುತ್ತಿರುವ ಸೂರ್ಯವು ರಾಜ್ಯದಲ್ಲಿ ಬಿಜೆಪಿ ಹಾಗೂ ಹಿಂದೂ ಧರ್ಮ ಪ್ರವರ್ಧಮಾನಕ್ಕೆ ಬರುತ್ತಿದೆ ಎಂಬ ಅರ್ಥ ಬರುವಂತೆ ಬಳಸಲಾಗಿದೆ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ. ಹಾಗೆಯೇ ಭಾರತ ಅಣುಶಕ್ತಿಯಲ್ಲಿ ಮುಂಚೂಣಿಯಲ್ಲಿದೆ ಎನ್ನುವುದನ್ನು ಇಲ್ಲಿ ಬಳಸಿರುವ ಚಿಹ್ನೆಯಿಂದ ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಫೋಖ್ರಾಣ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದನ್ನು ಇಲ್ಲಿ ಪರೋಕ್ಷವಾಗಿ ಹೇಳಲಾಗಿದೆ. 
29 Mar 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top