PLEASE LOGIN TO KANNADANET.COM FOR REGULAR NEWS-UPDATES


 ಮಾವೊವಾದಿ ನಾಯಕ ಕೊಬಾಡ್ ಗಾಂಧಿಯನ್ನು ಬಿಡುಗಡೆಗೊಳಿಸಲು ದಿಲ್ಲಿ ನ್ಯಾಯಾಲಯವೊಂದು ಬುಧವಾರ ಆದೇಶಿಸಿದೆ. ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯನ್ವಯ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಸಾಕ್ಷಗಳಿಲ್ಲದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸುವಂತೆ ನ್ಯಾಯಾಲಯ ಇಂದು ನೀಡಿದ ತೀರ್ಪೊಂದರಲ್ಲಿ ತಿಳಿಸಿದೆ. ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯನ್ವಯ ದೋಷಾರೋಪ ದಾಖಲಿಸಲು ನ್ಯಾಯಾಲಯ ನಿರಾಕರಿಸಿದೆ. ಕೊಬಾಡ್ ಗಾಂಧಿಯನ್ನು ವಿಚಾರಣೆಗೆ ಗುರಿ ಪಡಿಸಲು ಸಾಕಷ್ಟು ಸಾಕ್ಷಗಳಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ದಿಲ್ಲಿಯಲ್ಲಿ ನಕ್ಸಲ್ ಘಟಕವನ್ನು ವಿಸ್ತರಿಸಲು ಕೊಬಾಡ್ ಗಾಂಧಿ ಯತ್ನಿಸುತ್ತಿದ್ದರು ಎಂಬ ಆರೋಪವನ್ನು ಪೊಲೀಸರು ದಾಖಲಿಸಿದ್ದರು. ಗಾಂಧಿಯು ಡೂನ್ ಸ್ಕೂಲ್‌ನ ಹಳೆ ವಿದ್ಯಾರ್ಥಿಯಾಗಿದ್ದು, ಲಂಡನ್‌ನಲ್ಲಿ ವ್ಯಾಸಂಗ ಮಾಡಿದವರಾಗಿದ್ದಾರೆ.

ಪ್ರತಿಷ್ಠಿತ ಡೂನ್ ಸ್ಕೂಲ್‌ನ ಹಳೆ ವಿದ್ಯಾರ್ಥಿಯಾಗಿರುವ ಗಾಂಧಿ, ಸಿಪಿಐ-ಎಂಎಲ್ (ಪೀಪಲ್ಸ್ ವಾರ್ ಗ್ರೂಪ್)ನ ಹಿರಿಯ ನಾಯಕರಾಗಿದ್ದಾರೆ ಎಂದು ಆಪಾದಿಸಲಾಗಿದೆ. 1981ರಿಂದ ಅವರು ಅದರ ನಾಯಕರಾಗಿದ್ದಾರೆ ಎನ್ನಲಾಗಿದೆ. ಅವರು ಸಿಪಿಐ(ಮಾವೊವಾದಿ)ಯ ಕೇಂದ್ರೀಯ ಸಮಿತಿಯ ಸದಸ್ಯರು ಎಂದೂ ಗುರುತಿಸಲಾಗಿತ್ತು. 2007ರಲ್ಲಿ ಅವರು ಅದರ ಪಾಲಿಟ್ ಬ್ಯೂರೊಗೆ ಆಯ್ಕೆಯಾಗಿದ್ದರು ಎಂದು ಹೇಳಲಾಗಿದೆ. ಗಾಂಧಿಯ ಬಳಿಯಿಂದ ನಕಲಿ ಮತದಾರರ ಗುರುತು ಚೀಟಿ ಮತ್ತು ಪಾನ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿಷೇಧಿತ ಸಂಘಟನೆಯ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರೆನ್ನಲಾದ ಸಿಡಿಯೊಂದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದರು.
2009, ಸೆಪ್ಟಂಬರ್ 20ರಂದು ಅವರನ್ನು ಇಲ್ಲಿ ಬಂಧಿಸಲಾಗಿತ್ತು. ಅವರ ಬಂಧನದ ಬಳಿಕ, ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಜಾರ್ಖಂಡ್ ಪೊಲೀಸ್ ಇನ್ಸ್‌ಪೆಕ್ಟರ್ ಫ್ರಾನ್ಸಿಸ್ ಇಂದೂವರ್‌ರನ್ನು ಹತ್ಯೆ ಮಾಡಲಾಗಿದೆ. ಅವರ ಬಂಧನವನ್ನು ವಿರೋಧಿಸಿ ಮಹಾರಾಷ್ಟ್ರದಲ್ಲಿ ಕರಪತ್ರಗಳನ್ನು ಹಂಚಲಾಗಿದೆ ಎಂದು ಪೊಲೀಸರು ವಾದಿಸಿದ್ದರು.

Advertisement

0 comments:

Post a Comment

 
Top