PLEASE LOGIN TO KANNADANET.COM FOR REGULAR NEWS-UPDATES

ಯಶ್ ಅಭಿಮಾನಿಗಳಿಗಾಗಿ ಸಿದ್ಧಪಡಿಸಿದಂಥ ಫುಲ್ ಮೀಲ್ಸ್ ಮಾಸ್ಟರ್ ಪೀಸ್. ಕಾಮಿಡಿ ಇದೆ, ಜಬರ್ ದಸ್ತ್ ಫೈಟ್ಸ್ ಇವೆ, ಸಾನ್ವಿಯ ಗ್ಲಾಮರ್ ಇದೆ. ಶಿಳ್ಳೆ ಗಿಟ್ಟಿಸುವ ಡೈಲಾಗ್ಸ್ ಇವೆ. ಕೊನೆಗೆ ಸೆಂಟಿಮೆಂಟ್ ಸೀನ್ ಸಹ ಇದೆ. ಶಬ್ದವೇಧಿಯಿಂದ ಹಿಡಿದು ಜಾಕಿವರೆಗೆ ಡ್ರಗ್ಸ್ ಮಾಫಿಯಾ ಕಥೆಯಾಧಾರಿತ ಸಿನಿಮಾಗಳು ಸಾಕಷ್ಟು ಬಂದು ಹೋಗಿವೆ. ಮಾಸ್ಟರ್ ಪೀಸ್ ಕೂಡಾ ಡ್ರಗ್ಸ್ ಮಾಫಿಯಾ ಕಥೆಯ ಎಳೆಯನ್ನೇ ಹೊಂದಿದೆಯಾದರೂ ಮಧ್ಯಂತರದವರೆಗೆ ಕಥೆ ತೆರೆದುಕೊಳ್ಳುವುದಿಲ್ಲ.
"ಯಾವ ಫೀಲ್ಡ್ ಮೇಲೂ ಯಾರ ಹೆಸರೂ ಬರದಿರಲ್ಲ, ನಂದುಅಂತ ಬಂದವನ ಎದುರು ತೊಡೆ ತಟ್ಟಿ ನಿಂತು, ಫೀಲ್ಡ್ ಲ್ಲಿ ಹವಾ ಮೇಂಟೇನ್ ಮಾಡ್ಬೇಕು", "ಗೆಲ್ಲೋಕೆ ಬೇಕಾಗಿರೋದು ಕಲರ್ ಅಲ್ಲ, ಖದರ್ರು" ಎನ್ನುವಂಥ ಡೈಲಾಗ್ ಗಳಿಗೆ ಮಾಸ ಪ್ರೇಕ್ಷಕ ಫುಲ್ ಫೀದಾ. ಚಂದ್ರಲೇಖದ ಸಾನ್ವಿ, ಅದೇ ದೆವ್ವದ ಅವತಾರದ ಎಂಟ್ರಿ ನೋಡಿದರೆ ಇದೊಂದು ದೆವ್ವದ ಕಥೆ ಇರಬಹುದಾ ಅಂದುಕೊಳ್ಳುವಷ್ಟರಲ್ಲಿ ಅದು ಪಕ್ಕಾ ಕಾಮಿಡಿ ಎನ್ನುವ ನಿರ್ಧಾರ ಗಟ್ಟಿಯಾಗಿಬಿಡುತ್ತದೆ. ಬ್ರೂಸ್ ಲೀ ಅವತಾರದ ಚಿಕ್ಕಣ್ಣ ತೆರೆ ಮೇಲೆ ಕಾಣಿಸುವಷ್ಟು ಹೊತ್ತು ಫುಲ್ ಮಜಾ.  ಸಾನ್ವಿ, ಕಾರಿನಲ್ಲಿ ಯಶ್ ಜೊತೆ ಡೇಟಿಂಗ್ ಸೀನ್ ಸೇರಿದಂತೆ ಒಂದೆರಡು ದೃಶ್ಯಗಳು ಫ್ಯಾಮಿಲಿ ಆಡಿಯನ್ಸ್ ಗೆ ಮುಜುಗರ ಉಂಟು ಮಾಡುತ್ತದೆ. ಮೀಡಿಯಾದ ಬೇಜವಾಬ್ದಾರಿತನವನ್ನ ಸಾಧ್ಯವಾದಷ್ಟು ಕಡೆ ಸೂಕ್ಷ್ಮವಾಗಿ ತೋರಿಸಲಾಗಿದೆ. ಅದರಲ್ಲೂ ಎಲೆಕ್ಟ್ರಾನಿಕ್ ಮೀಡಿಯಾ ಬಂಡವಾಳವೇ ಟಿಆರ್ ಪಿ ಗಿಟ್ಟಿಸುವುದು ಎನ್ನುವ ಸಂಭಾಷಣೆಯೂ ಇದೆ. ಒಮ್ಮೊಮ್ಮೆ ಕಥೆ ಎಲ್ಲೆಲ್ಲೋ ಹೋಗ್ತಾ ಇದೆ ಎನ್ನುತ್ತಿರುವಂತೆ ಮತ್ತೇ ಟ್ರ್ಯಾಕ್ ಗೆ ಮರಳುತ್ತದೆ. ಒಂದೆರಡು ಕಡೆ ಆಕಳಿಕೆಯೂ ಬರುತ್ತದೆ ಎನ್ನುವ ಅಭಿಪ್ರಾಯವನ್ನ ಮಂಜುಮಾಂಡವ್ಯ ಸಹಿಸಿಕೊಳ್ಳಬೇಕು.
ಮೊದಲರ್ಧ ಹೀರೋ ಇಂಟ್ರಡಕ್ಷನ್, ಹೀರೋಯಿಸಂ, ಲವ್ ಗೆ ಮೀಸಲು. ವಿರಾಮದ ಹೊತ್ತಿಗೆ ಡ್ರಗ್ಸ್ ಮಾಫಿಯಾದ ಡಾನ್ ರವಿಶಂಕರ್ ಪ್ರತ್ಯಕ್ಷ. ಇಲ್ಲಿಂದ ಶುರುವಾಗುವ ಎರಡನೇ ಅರ್ಧ ಭಾಗ ಮಾಸ್ ಪ್ರಿಯರಿಗೆ ರಸದೌತಣ. ಸಮಾಜಕ್ಕೆ ಕೆಡುಕು ಬಯಸುವ ಕೆಟ್ಟವರನ್ನ, ದೇಶ, ನಾಡಿನ ಬಗ್ಗೆ ಕೆಟ್ಟದಾಗಿ ಮಾತನಾಡುವವರನ್ನ, ಕೆಟ್ಟತನವನ್ನ ಮಟ್ಟ ಹಾಕುವ ಮೂಲಕ ಜೈಲು ಪಾಲಾಗುವ ನಾಯಕ ಆಗ ಅಮ್ಮನ ಕಾಣಿಕೆ ಥೇಟ್ ಭಗತ್ ಸಿಂಗ್ ನಂತೆ ಕಂಗೊಳಿಸುತ್ತಾನೆ. ಅಲ್ಲಿಯವರೆಗೆ ಮಗ ಪುಡಿರೌಡಿ ಎಂದೇ ಭಾವಿಸಿ, ಒಂದು ಹಂತದಲ್ಲಿ ಎನ್ಕೌಂಟರ್ ಮಾಡಿ ಎಂದು ತಾಯಿಯೇ ಹೇಳುವಷ್ಟು ಖರಾಬ್ ಹಿನ್ನೆಲೆ ನಾಯಕನದ್ದು. ಅಮ್ಮನ ಕಣ್ಣಿಗೆ ಹೀರೋ ಅನಿಸಿಕೊಳ್ಳಬೇಕು ಎಂದು ಕನಸು ಕಾಣುವ ನಾಯಕ, ಕೊನೆಗೆ ಅಮ್ಮನೂ ಸೇರಿದಂತೆ ಎಲ್ಲರ ಮೆಚ್ಚಿನ ಹೀರೋ ಆಗುವುದರೊಂದಿಗೆ ಶುಭಂ. ಅಮ್ಮನಾಗಿ ಸುಹಾಸಿನಿ ಇಷ್ಟವಾಗುತ್ತಾರೆ. ಆಚ್ಯುತ್ ರಾವ್ ರಾಜಕಾರಣಿಯಾಗಿ ನ್ಯಾಯ ಸಲ್ಲಿಸಿದ್ದಾರೆ. ಅವಿನಾಶ್ ಚಿತ್ರದ ಆರಂಭ, ಮಧ್ಯ ಹಾಗೂ ಅಂತ್ಯದಲ್ಲಿ ಖಡಕ್ ಪೋಲಿಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಾನ್ವಿಗೆ ಚಂದ್ರಲೇಖದಲ್ಲಿದ್ದಂತೆ ಮಹತ್ವವಿಲ್ಲ. ಮರ ಸುತ್ತುವ ನಾಯಕಿಯ ಪಾತ್ರವನ್ನ ನಿಭಾಯಿಸಿದ್ದಾರೆ. ಚಿಕ್ಕಣ್ಣ ಮಾಸ್ಟರ್ ಪೀಸ್ಗೆ ಸಾಥ್ ನೀಡಿದ್ದಾರೆ. ಯಶ್ ಮತ್ತೊಮ್ಮೆ ರಾಜಾಹುಲಿ, ರಾಮಾಚಾರಿ ಲುಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿ ಬಳಗವನ್ನ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಹುಟ್ಟು ಹಾಕಿದ್ದಾರೆ. ವಿ.ಹರಿಕೃಷ್ಣ ಸಂಗೀತದಲ್ಲಿ ಯಶ್ ಹಾಡಿರುವ ಹಾಡು ಗುನುಗುವಂತಿದೆ. ವೈದಿ ಕ್ಯಾಮರಾ ವರ್ಕ್ ಸೂಪರ್ಬ್. ಶ್ರಾವಣಿ ಸುಬ್ರಮಣ್ಯ ನಂತರ ಮಾಸ್ಟರ್ ಪೀಸ್ ನಂಥ ಮಾಸ್ ಸಿನಿಮಾ ನಿರ್ದೇಶಿಸುವ ಮೂಲಕ ಮಂಜು ಮಾಂಡವ್ಯ ಭರವಸೆ ಮೂಡಿಸಿದ್ದಾರೆ. ನಿಮಾರ್ಪಕ ವಿಜಯ್ ಕಿರಗಂದೂರು ಹಾಕಿದ ಬಂಡವಾಳಕ್ಕೆ ಮೋಸವಿಲ್ಲ. ಒಟ್ಟಾರೆ ಮಾಸ್ಟರ್ ಪೀಸ್, ಹಳೆ ಕಥೆಗೆ ಹೊಸ ರೂಪ ನೀಡಿದ ಸಿನಿಮಾ. ಒಂದ್ಸಲ ಕಣ್ತುಂಬಿಕೊಳ್ಳಲು ಅಡ್ಡಿ ಇಲ್ಲ.              

                                        -ಚಿತ್ರಪ್ರಿಯ ಸಂಭ್ರಮ್.

24 Dec 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top