PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಅ.೦೯ (ಕ ವಾ) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತ ಸಮುದಾಯದ ವಿವಿಧ ಜನಾಂಗದವರಿಗಾಗಿ ಸರ್ಕಾರದಿಂದ ಅನುಷ್ಠಾನಗೊಳಿಸುವ ವಿವಿಧ ಕಾರ್ಯಕ್ರಮಗಳ ಅರಿವು ಮೂಡಿಸುವ ಕಾರ್ಯಾಗಾರವನ್ನು ಅ.೧೨ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲೆಯ ಗಂಗಾವತಿಯ ಇಸ್ಲಾಂಪೂರದಲ್ಲಿರುವ ಅಲಿ ಫಾತಿಮಾ ಶಾದಿಮಹಲ್‌ನಲ್ಲಿ ಆಯೋಜಿಸಲಾಗಿದೆ.
     ಕಾರ್ಯಾಗಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಜೈನ್, ಬೌದ್ಧ, ಪಾರ್ಸಿ, ಕ್ರಿಶ್ಚಿಯನ್ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗಂಗಾವತಿ ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಜಯಂತಿ ಅ.೧೪ ರಂದು ಪೂರ್ವಾಭಾವಿ ಸಭೆ
ಕೊಪ್ಪಳ, ಅ.೦೯ (ಕ ವಾ)  ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಅ.೨೭ ರ ಶೀಗಿ ಹುಣ್ಣಿಮೆ ದಿನದಂದು ಕೊಪ್ಪಳ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಆಚರಿಸಬೇಕಾಗಿದ್ದು, ಸಿದ್ಧತೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪೂರ್ವಾಭಾವಿ ಸಭೆಯನ್ನು ಅ.೧೪ ರಂದು ಸಂಜೆ ೦೪ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಪ್ರಭಾರಿ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಆಸಕ್ತ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಸಭೆಗೆ ಹಾಜರಾಗಿ ಜಯಂತಿ ಆಚರಣೆ ಕುರಿತು ಉಪಯುಕ್ತ ಸಲಹೆ ಸೂಚನೆ ನೀಡಿ, ಸಭೆಯನ್ನು ಯಶಸ್ವಿಗೊಳಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕಲ್ಲೇಶ ಪ್ರಕಟಣೆಯಲ್ಲಿ ಕೋರಿದ್ದಾರೆ.
ದಾಳಿಂಬೆ ಬೆಳೆಗಾರರಿಗೆ ತೋಟಗಾರಿಕೆ ಸಲಹೆ.
ಕೊಪ್ಪಳ ಅ. ೦೯ (ಕ ವಾ) ಪ್ರಸಕ್ತ ವರ್ಷ ಮುಂಗಾರು ಸಂಪೂರ್ಣ  ಕೈಕೊಟ್ಟಿದ್ದರೂ, ಹಿಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ದಾಳಿಂಬೆ  ಬೆಳೆಗಾರರಿಗೆ ತೋಟಗಾರಿಕೆ ಉಪ ನಿರ್ದೇಶಕರ ಕಛೇರಿ (ಜಿ.ಪಂ), ಕೊಪ್ಪಳದಿಂದ ಕೆಲವು ಸಲಹೆ ನೀಡಲಾಗಿದೆ.
     ಈ ವರ್ಷ ದಾಳಿಂಬೆಯ ಉತ್ತಮ ಫಸಲನ್ನು ನಿರೀಕ್ಷಿಸಬಹುದಾಗಿದೆ. ದುಂಡಾಣು ರೋಗದ ಬಾಧೆ ಅಧಿಕ ಇರುವ ಈ ಭಾಗದಲ್ಲಿ ತಡ ಹಸ್ತ ಬಹಾರದಲ್ಲಿ ಬೆಳೆ ತೆಗೆಯಬಹುದೆಂದು  ಸಲಹೆ ನೀಡಲಾಗಿದೆ.
    ಅದರಂತೆ ಅಕ್ಟೋಬರ್ ೩ನೇ ವಾರದಿಂದ ಚಾಟ್ನಿ ಮಾಡುವುದು ಸೂಕ್ತವಾಗಿದ್ದು, ನೀರು ಕೊಡುವುದನ್ನು ಸಂಪೂರ್ಣ ನಿಲ್ಲಿಸಬೇಕು.  ಇಥೊಫಾನ ೩೯ ಎಸ್. ಎಲ್. ಎನ್ನುವ ಸಸ್ಯ ಚೋದಕವನ್ನು ಮಣ್ಣನ್ನು ಆಧರಿಸಿ ೨.೦೦ ರಿಂದ ೨.೫೦ ಮಿ.ಲಿ. ಒಂದು ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.  ಕೀಟ, ರೋಗಗಳ ಹಾವಳಿ ಇದ್ದಲ್ಲಿ ಸೂಕ್ತ ರಾಸಾಯನಿಕಗಳನ್ನು ಬಳಸಬೇಕು. ನಂತರ ತೆಳುವಾಗಿ  ಸವರಿಕೆ ಮಾಡಿ ಕೊಡಲೇ ಶೆ. ೧ರ  ಬೋರ್ಡೊಲೇಪನ ಮಾಡಬೇಕು. ನಂತರ ಶಿಫಾರಸು ಮಾಡಿದ ಪ್ರಮಾಣದಲ್ಲಿ  ಗೊಬ್ಬರ ಕೊಡಬೇಕು. ಗೊಬ್ಬರ ಕೊಡುವಾಗ ೧/೩ ರಷ್ಟು ಭಾಗ ಸಾವಯವ ಗೊಬ್ಬರ, ೧/೩ರಷ್ಟು ಭಾಗ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೂ , ಮತ್ತು ೧/೩ ರಷ್ಟು ಭಾಗ ಗೊಬ್ಬರಗಳನ್ನು  ರಸಾವರಿ  ರೂಪದಲ್ಲಿಯೂ ಕೊಡಬೇಕಾಗುತ್ತದೆ.  ಎರೆಹುಳು, ಬೇವಿನ ಹಿಂಡಿ ಜೊತೆ ಸೂಡೊಮೊನಾಸ್ ಜೀವಾಣು ಗೊಬ್ಬರವನ್ನು  ಪ್ರತಿ ಗಿಡಕ್ಕೂ ಕೊಡಬೇಕು. ಗೊಬ್ಬರ ಕೊಟ್ಟಾದನಂತರ ಕೊಡಲೇ ನೀರು ಹರಿಸಬೇಕು. ನಂತರ ನಿಯಮಿತವಾಗಿ ನೀರು ಕೊಡುತ್ತಿರಬೇಕು. ತೋಟವನ್ನು ಕಸದಿಂದ ಮುಕ್ತವಾಗಿಡಬೇಕು.
    ನಂತರದ ದಿನಗಳಲ್ಲಿ ಪ್ರತಿಗಿಡದ ಸುತ್ತಲೂ ೧೦೦ ಗ್ರಾಂ. ಬ್ಲೀಚಿಂಗ್ ಪುಡಿ ಉದುರಿಸಬೇಕು  ಅಥವಾ ೧೦೦೦ ಲೀ. ನೀರಿನಲ್ಲಿ ೨೫ ಕಿ.ಗ್ರಾಂ. ಬೆರೆಸಿ ಸಿಂಪಡಿಸಬೇಕು. ಒಣಗಿದ ಎಲೆಗಳನ್ನು ಆರಿಸಿ ಸುಡಬೇಕು. ಆಫ್ರಿಕನ್ ಚೆಂಡು ಹೂ ಸಾಲಿನ ಮಧ್ಯದಲ್ಲಿ ನಾಟಿ ಮಾಡುವುದರಿಂದ  ಜಂತು ಹುಳದ ಬಾಧೆಯನ್ನು ತಡೆಗಟ್ಟ ಬಹುದಲ್ಲದೇ ಇದರಿಂದ ಹೆಚ್ಚಿನ ಆದಾಯ ಪಡೆಯಬಹುದು.
    ನುಸಿ, ಎಲೆ ತಿನ್ನುವ ಕೀಟಗಳ ನಿಯಂತ್ರಣಕ್ಕೆ ಡೈಕೋಫಾಲ ೨.೫೦ ಮಿ.ಮೀ ಅಥವಾ ಗಂಧಕ ೩.೦೦ ಗ್ರಾಂ. ಮತ್ತು ಕ್ವಿನಾಲ್ ಫಾಸ್ ೨ ಮೀ.ಲೀ. ಕೀಟನಾಶಕಗಳನ್ನು ೧ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
ದುಂಡಾಣು ಹತೋಟಿ ಕ್ರಮಗಳು : ಚಾಟ್ನಿ ಮಾಡಿದ ತಕ್ಷಣ ಶೇ. ೧ ರ ಬೋರ್ಡೋ ಲೇಪನ ಮಾಡುವುದು.  ಮೊದಲನೇ ಸಿಂಪರಣೆಯಾಗಿ ಸೂಡೊಮೋನಾಸ್ ೧೦ ಗ್ರಾಂ.  ೧ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.  ೮ ದಿನಗಳ ನಂತರ ಸಿ.ಓ.ಸಿ. ೩ ಗ್ರಾಂ. ಜೊತೆಗೆ  ಬ್ರೋನೋಪಾಲ ೦.೫೦ ಗ್ರಾಂ.  ಮಿಶ್ರಮಾಡಿ  ಅಂಟು ಪದಾರ್ಥ ಬೆರೆಸಿ ಸಿಂಪಡಿಸಬೇಕು. ಸಿಂಪರಣೆಯ ಮರು ದಿನವೇ ೧ ಗ್ರಾಂ. ಸತು, ಮ್ಯಾಗ್ನೇಷಿಯಂ, ಬೋರಾನ್ ಮತ್ತು ಸುಣ್ಣ ಮುಂತಾದ ಲಘು ಪೋಷಕಾಂಶಗಳನ್ನು ತಪ್ಪದೇ ಸಿಂಪರಿಸಬೇಕು.  ಸಿಂಪರಣಾ ನಂತರ  ಮಳೆ ಬಂದರೆ ಇದೇ ಸಿಂಪರಣೆಯನ್ನು ಪುನರಾವರ್ತಿಸಬೇಕು.  ಈ ಸಿಂಪರಣೆಯನ್ನು  ವಾತಾವರಣ ಆಧರಿಸಿ ಆಗಾಗ್ಗೆ ಕೈಕೊಳ್ಳುತ್ತಿರಬೇಕು. ಸಿ.ಓ.ಸಿ. ಬದಲಾಗಿ ಕ್ಯಾಪ್ಟಾನ್ ಮತ್ತು ಸ್ಟ್ರೆಪ್ಟೋಸೈಕ್ಲಿನ್ ಬಳಸಬಹುದು. ತಿಂಗಳಿಗೊಮ್ಮೆ ಶೇ.೧ರ ಬೋರ್ಡೊ ಸಿಂಪರಣೆ,  ಸೂಡೊಮೋನಾಸ್ ಸಿಂಪರಣೆ ಅವಶ್ಯಕ. ಮೂರು ತಿಂಗಳಿಗೊಮ್ಮೆ ಬ್ಲೀಚಿಂಗ ಪುಡಿ ಬಳಸಬೇಕು.
    ಚಳಿಗಾಲದಲ್ಲಿ ರಸಹೀರುವ ಕೀಟಗಳ ಹಾವಳಿ ಜಾಸ್ತಿ ಇರುವುದರಿಂದ ತಜ್ಞರನ್ನು ಸಂಪರ್ಕಿಸಿ ಸೂಕ್ತ ರಾಸಾಯನಿಕಗಳಾದ ಇಮಿಡಾ, ಥಯೋಮೆಥಾಕ್ಸಾಮ್, ಫಿಪ್ರೊನಿಲ್ ಮುಂತಾದವುಗಳ ಸಿಂಪರಣೆ ಕೈಗೊಳ್ಳಬೇಕು.
    ತೋಟಗಾರಿಕೆ ಬೆಳೆಗಳು  ಹೆಚ್ಚುಕಾಲ ಶೇಖರಿಸಿಡಲು  ಸಾಧ್ಯವಿಲ್ಲವಾದ್ದರಿಂದ ಅತೀಯಾದ ರಾಸಾಯನಿಕಗಳ ಬಳಕೆ ಮಾಡಕೂಡದು, ಯಾವುದೇ ಕಾರಣಕ್ಕೂ ಕೆಂಪು ತ್ರಿಕೊನ ಚಿಹ್ನೆ ಇರುವ ರಾಸಾಯನಿಕಗಳನ್ನು ಬಳಸಬಾರದು. ರಾಸಾಯನಿಕಗಳನ್ನು ಅವಶ್ಯಕ ಇದ್ದಾಗ ಮಾತ್ರ ಶೀಫಾರಸು ಮಾಡಿದ ಪ್ರಮಾಣದಲ್ಲಿ ಮಾತ್ರ ಸಿಂಪರಿಸಬೇಕು. ಇಲ್ಲದಿದ್ದಲ್ಲಿ ಉತ್ಪನ್ನಗಳಲ್ಲಿಯೂ ವಿಷ ಪ್ರಮಾಣ ಸೇರಿಕೊಂಡು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಈ ವಿಷಯವನ್ನು ತೋಟಗಾರಿಕೆ ಬೆಳೆಗಾರರು ಸದಾ ಗಮನದಲ್ಲಿಡಬೇಕು.
     ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೊಪ್ಪಳ ಮತ್ತು ಆಯಾ ತಾಲ್ಲೂಕು ತೋಟಗಾರಿಕೆ ಕಛೇರಿಗಳನ್ನು ಅಥವಾ ಕೊಪ್ಪಳದ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

Advertisement

0 comments:

Post a Comment

 
Top