PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಅ. ೦೮ (ಕ ವಾ) ಹೈದ್ರಾಬಾದ್-ಕರ್ನಾಟಕದ ಅಭಿವೃದ್ಧಿ, ಕಲೆ, ಸಾಹಿತ್ಯ, ಸಂಸ್ಕೃತಿ, ಐತಿಹಾಸಿಕ ತಾಣಗಳು, ಸಾಧಕರು ಮುಂತಾದವುಗಳನ್ನು ಪರಿಚಯಿಸುವ ಈಶಾನ್ಯದ ಐಸಿರಿ ಸರಣಿಯ ನಾಲ್ಕನೆ ಸಂಚಿಕೆ ಅ. ೧೧ ರಂದು ಬೆಳಿಗ್ಗೆ ೧೦ ರಿಂದ ೧೧ ಗಂಟೆಯವರೆಗೆ ರಾಯಚೂರು ಹಾಗೂ ಹೊಸಪೇಟೆ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ.
     ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕೃತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸವ ಈಶಾನ್ಯದ ಐಸಿರಿ ಎಂಬ ಸರಣಿ ಕಾರ್‍ಯಕ್ರಮವನ್ನು ಕಲಬುರಗಿ ಆಕಾಶವಾಣಿ ಕೇಂದ್ರ ರೂಪಿಸಿದ್ದು, ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿ ಈ ಸಂಪೂರ್ಣ ಸರಣಿಯನ್ನು ಪ್ರಾಯೋಜಿಸಿದೆ. ಒಟ್ಟು ೫೨ ವಾರಗಳವರೆಗೆ ಪ್ರತಿ ರವಿವಾರ ಬೆಳಿಗ್ಗೆ ೧೦ ರಿಂದ ೧೧ ಗಂಟೆಯವರೆಗೆ ಈ ಸರಣಿ ಮೂಡಿ ಬರಲಿದ್ದು ೪ನೆಯ ಸಂಚಿಕೆ ಅಕ್ಟೋಬರ ೧೧ ರಂದು ಪ್ರಸಾರವಾಗಲಿದೆ.  ಈ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ ವಿವರಗಳು ಹೀಗಿವೆ.
ಕಲಬುರ್ಗಿ ಜಿಲ್ಲಾ ಉಸ್ತುವಾರಿ  ಸಚಿವರೂ ಹೈ.ಕ.ಪ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿರುವ ಡಾ. ಖಮರುಲ್ ಇಸ್ಲಾಂ ಅವರು ಭಾಗವಹಿಸಲಿದ್ದು, ಬರ ನಿರ್ವಹಣೆ, ಜನರಿಗೆ ಕುಡಿಯುವ ನೀರಿನ ಪೂರೈಕೆಯ ಕುರಿತು ಮಾತನಾಡಲಿದ್ದಾರೆ.  ಆಳಂದದ ಶಾಸಕರಾಗಿರುವ ಬಿ.ಆರ್. ಪಾಟೀಲ ಅವರು ಕೂಡ ಈ ಸಂಚಿಕೆಯಲ್ಲಿ ಭಾಗವಹಿಸಿ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ತಾವು ಕೈಗೊಂಡಿರುವ ಕೆಲಸ ಕಾರ್ಯಗಳ ಕುರಿತು ಹೇಳಲಿದ್ದಾರೆ.  ಬೆಂಗಳೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿರುವ ಬೆಳ್ಳಾಶೆಟ್ಟಿಯವರು ಕಳೆದ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಕುರಿತು ಮಾತನಾಡಿದ್ದರು. ಈ ಸಲ ಕೂಡಾ ಈ ಯೋಜನೆಯ ಇನ್ನೊಂದು ಆಯಾಮವಾದ ಸುರಕ್ಷತೆಯ ಬಗ್ಗೆ ಮಾತನಾಡಲಿದ್ದಾರೆ.  ವಕೀಲರಾಗಿರುವ ಪಿ. ವಿಲಾಸಕುಮಾರ ಅವರು ನಿರಂತರವಾಗಿ ಭಾಗವಹಿಸಿ ಕಾನೂನು ಸಲಹೆಗಳನ್ನು ನೀಡಿದ್ದು, ಈ ಸಲ ಆಸ್ತಿ ಖರೀದಿಯ ಕರಾರು ಪತ್ರವನ್ನು ಮಾಡಿಕೊಳ್ಳುವ ರೀತಿಯನ್ನು ತಿಳಿಸಿಕೊಡಲಿದ್ದಾರೆ.  ಕಲಬುರ್ಗಿಯ ಅಸಾಮಾನ್ಯ ಚಿತ್ರಕಲಾವಿದರಾಗಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿದ್ದ ದಿ.ಡಾ.ಎಸ್.ಎಂ. ಪಂಡಿತ್ ಅವರ ಜನ್ಮಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮ ರವಿವಾರ ಅಕ್ಟೋಬರ ೧೧ರಂದು ಕಲಬುರ್ಗಿಯಲ್ಲಿ ನಡೆಯಲಿದ್ದು, ನಾಡೋಜ ಡಾ. ಜೆ.ಎಸ್.ಖಂಡೇರಾವ್ ಅವರು ಡಾ. ಪಂಡಿತ್ ಅವರನ್ನು ಸ್ಮರಿಸಿಕೊಳ್ಳಲಿದ್ದಾರೆ.  ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಯೋಗಾಸನದ ಅರಳು ಪ್ರತಿಭೆ ಹುಮನಾಬಾದ್‌ನ ಶ್ರದ್ಧಾ ಶರಣಬಸಪ್ಪಾ ಪಾಟೀಲ ಅವರು ಈ ಸಂಚಿಕೆಯಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.  ಆಕಾಶವಾಣಿಯ ಎ ಗ್ರೇಡ್ ಕಲಾವಿದರಾಗಿರುವ ರಾಯಚೂರು ಜಿಲ್ಲೆ ಮಾನ್ವಿಯ ಅಂಬಯ್ಯ ನುಲಿಯವರು ಭಕ್ತಿಗೀತೆಯನ್ನು ಪ್ರಸ್ತುತ ಪಡಿಸಲಿದ್ದಾರೆ.   ಪರಿಣಿತ ಮಹಿಳಾ ಸಂಘದ ಸದ್ಯಸರು ಭಾಗವಹಿಸಿ ಮೊಸರಿನ ಉಪಯುಕ್ತತೆ , ಔಷಧೀಯ ಬಳಕೆಗಳು, ಸವಿಯಾದ ಶ್ಯಾವಿಗೆ ಪಾಯಸದ ತಯಾರಿಕೆಯ ಕುರಿತು ಹೇಳಿಕೊಡಲಿದ್ದಾರೆ. ಅಷ್ಟೇ ಅಲ್ಲ ಬಾಲಿವುಡ್ ತಾರೆ ಐಶ್ವರ್ಯಾ ರೈ ಬಚ್ಚನ್ ಅವರು ಸಾಧನೆಯ ಶಿಖರವೇರಿದ ಬಗೆಯನ್ನು ತಿಳಿಸಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಲ್ಲ್ಲಿ ಆತ್ಮ ವಿಶ್ವಾಸ ತುಂಬುವ ಕಾರ್ಯವನ್ನು ಮಾಡಲಿದ್ದಾರೆ. 
    ಇವುಗಳಲ್ಲದೆ ಕಳೆದ ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್‍ಯಕ್ರಮಗಳು, ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ 'ವಾರದ ವರದಿ', ಮಹಾತ್ಮರ, ಗಣ್ಯರ ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‌ಗಳು ಮೂಡಿ ಬರಲಿವೆ.
ಸರಣಿಯ ನಿರೂಪಣಾ ಸಾಹಿತ್ಯ, ನಿರ್ವಹಣೆ ಹಾಗೂ ನಿರ್ಮಾಣದ ಜವಬ್ದಾರಿಯನ್ನು ಕಾರ್ಯಕ್ರಮ ಅಧಿಕಾರಿಯಾಗಿರುವ ಸೋಮಶೇಖರ ಎಸ್. ರುಳಿ ಅವರು ವಹಿಸಿಕೊಂಡಿದ್ದಾರೆ  ಎಂದು ನಿಲಯದ ಮುಖ್ಯಸ್ಥೆಯಾಗಿರುವ ಅಂಜನಾ ಯಾತನೂರು ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top