PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮಾ. : ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆ ಕುರಿತಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿನ ಸ್ಥಿತಿ-ಗತಿಗಳ ಸಮಗ್ರ ಮಾಹಿತಿಯನ್ನು ಮೂರು ದಿನಗಳ ಒಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲೆಯ ಕುಡಿಯುವ ನೀರಿನ ಸ್ಥಿತಿ-ಗತಿಗಳ ಬಗ್ಗೆ ಪರಿಸ್ಥಿತಿ ಪರಾಮರ್ಶಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಈಗಾಗಲೆ ಬೇಸಿಗೆ ಕಾಲದ ಪ್ರವೇಶವಾಗಿದ್ದು, ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ತೊಂದರೆ ಉಂಟಾಗುವ ಸಾಧ್ಯತೆಗಳಿರುತ್ತವೆ.  ಬೇಸಿಗೆ ಸಂದರ್ಭದಲ್ಲಿ ಯಾವುದೇ ಗ್ರಾಮ ಅಥವಾ ನಗರಕ್ಕೆ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.  ಸದ್ಯ ಜಿಲ್ಲೆಯ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿರುವ ನೀರಿನ ಮೂಲಗಳು, ಬೋರ್‌ವೆಲ್, ಕೈಪಂಪು, ಕುಡಿಯುವ ನೀರಿನ ಘಟಕ, ಕೆರೆ ಇತ್ಯಾದಿ ಮೂಲಗಳಿಂದ ನೀರು ಪೂರೈಕೆಯಾಗುತ್ತಿದ್ದಲ್ಲಿ, ಅಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಅಧಿಕಾರಿಗಳು ಖುದ್ದು ಪರಿಶೀಲಿಸಿ, ಸಮಗ್ರ ವರದಿ ಸಲ್ಲಿಸಬೇಕು.  ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಸಹಜವಾಗಿ ಕುಸಿಯುವ ಸಾಧ್ಯತೆ ಇದ್ದು, ಬೋರ್‌ವೆಲ್‌ಗಳ ಮೂಲಕ ನೀರು ಪೂರೈಕೆ ಮಾಡುತ್ತಿರುವೆಡೆ, ನೀರಿನ ಮಟ್ಟ ಕಡಿಮೆಯಾಗುವ ಸಂಭವ ಇರುತ್ತದೆ.  ಕೈಪಂಪುಗಳು ಸಹ ಕೆಲವೆಡೆ ಕೆಟ್ಟುಹೋಗಿದ್ದು, ದುರಸ್ತಿ ಮಾಡಿಸುವುದು ಅಗತ್ಯವಾಗಿರುತ್ತದೆ.  ಕೆರೆ ಅಥವಾ ಇತರೆ ಮೂಲಗಳ ಮೂಲಕ ನೀರು ಪೂರೈಕೆ ಮಾಡುತ್ತಿದ್ದಲ್ಲಿ, ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿರುವುದರಿಂದ, ಇವೆಲ್ಲವುಗಳನ್ನು ಅಧಿಕಾರಿಗಳು ಖುದ್ದು ಪರಾಮರ್ಶಿಸಿ, ಗ್ರಾಮ,ನಗರ, ಪಟ್ಟಣ ಪ್ರದೇಶವಾರು ಪ್ರಸ್ತುತ ಸ್ಥಿತಿ-ಗತಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ಕ್ರೋಢೀಕರಿಸಿಕೊಳ್ಳಬೇಕು.  ಸಮಸ್ಯಾತ್ಮಕ ಗ್ರಾಮ ಹಾಗೂ ಪ್ರದೇಶಗಳ ಬಗ್ಗೆ ಪಟ್ಟಿ ಸಿದ್ಧಪಡಿಸಿ, ಅಲ್ಲಿ ಬೇಸಿಗೆಯಲ್ಲಿ ನೀರು ಪೂರೈಸಲು ಕೈಗೊಳ್ಳಬೇಕಾದ ಪರ್ಯಾಯ ಕ್ರಮಗಳ ಬಗ್ಗೆ ಯೋಜನೆ ಸಿದ್ಧಪಡಿಸಬೇಕು.  ಯಾವುದೇ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು.  ಒಟ್ಟಾರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆ ನಿಟ್ಟಿನಲ್ಲಿ ಗ್ರಾಮ, ಪಟ್ಟಣ, ನಗರವಾರು ಸದ್ಯದ ಸ್ಥಿತಿ-ಗತಿ ಹಾಗೂ ಸಮಸ್ಯಾತ್ಮಕ ಪ್ರದೇಶಗಳಿಗೆ ನೀರು ಪೂರೈಕೆಗೆ ಕೈಗೊಳ್ಳಬಹುದಾದ ಪರ್ಯಾಯ ಕ್ರಮಗಳು, ಅಗತ್ಯವಿರುವ ಅನುದಾನ ಮತ್ತಿತರ ಸಮಗ್ರ ವರದಿ ಹಾಗೂ ಯೋಜನೆಯನ್ನು ಮೂರು ದಿನಗಳ ಒಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದೆ ಅಧಿಕಾರಿಗಳು, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.

31 Mar 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top