ಹೊಸಪೇಟೆ ಆಕಾಶವಾಣಿ ಕೇಂದ್ರ ಹಾಗೂ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಜಂಟಿಯಾಗಿ ಕೊಪ್ಪಳ ತಾಲ್ಲೂಕಿನ ಕರ್ಕಿಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಬಾನುಲಿ ರೈತ ದಿನ ಹಾಗೂ ಅನ್ನದಾತ ಸುಖೀಭವ ಕಾರ್ಯಕ್ರಮ ಸರಣಿಯ ಬಹುಮಾನ ವಿತರಣಾ ಸಮಾರಂಭ ಯಶಸ್ವಿಯಾಗಿ ಜರುಗಿತು.
ನೆಲದ ಫಲ-ಜಲದ ಸಿರಿ ಎಂಬ ಶೀರ್ಷಿಕೆಯೊಂದಿಗೆ ಕರ್ಕಿಹಳ್ಳಿಯ ಮೃತ್ಯುಂಜಯೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಮೃತ್ಯುಂಜಯೇಶ್ವರ ಸನ್ನಿಧಾನದ ವಸಂತ ದಿಕ್ಷೀತ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ವಿ.ಆರ್.ಜೋಷಿ ಮಾತನಾಡಿ ರೈತರು ತಮ್ಮ ಜಮೀನಿನಲ್ಲಿ ಬಿದ್ದ ಮಣ್ಣನ್ನು ಅಲ್ಲಿಯೇ ಇಂಗುವಂತೆ ನೋಡಿಕೊಳ್ಳ ಬೇಕು.ನೀರಿನ ಅಭಾವ ಉಂಟಾಗುತ್ತಿರುವದಕ್ಕೆ ಕಾರಣ ತಿಳಿದುಕೊಂಡು ದೂರಗಾಮಿ ಪರಿಹಾರ ಕಂಡುಕೊಳ್ಳಬೇಕು.ಸಮೀಪದ ಕೃಷಿ ವಿಸ್ತರಣಾ ಶಿಕ್ಷಣ ಘಟಕಗಳಿಗೆ ನಿಯಮಿತವಾಗಿ ಭೇಟಿ ನೀಡಿ ತಜ್ಞರ ಸಲಹೆ ಪಡೆದುಕೊಳ್ಳಬೇಕು ಎಂದರು.
ಸಸ್ಯರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಬಿ.ಪಾಟೀಲ ಮಾತನಾಡಿ, ನಮಗೆ ಗೊತ್ತಿಲ್ಲದ ಆಹಾರ ಉತ್ಪಾದನೆ ಮಾಡಲು ಹೋಗಿ , ಅಗತ್ಯಕ್ಕಿಂತ ಹೆಚ್ಚು ರಸಾಯನಿಕ-ಕೀಟನಾಶಕಗಳನ್ನು ಸಿಂಪಡಿಸುತ್ತಿದ್ದೇವೆ.ಆಹಾರ-ನೀರಿನ ಮೂಲಕ ರೋಗ-ರುಜಿನಗಳನ್ನು ಪಡೆಯುತ್ತಿದ್ದೇವೆ .ಕರ್ಕಿಹಳ್ಳಿ ಹಾಗೂ ಸುತ್ತಮುತ್ತಲಿನ ತುಂಗಭದ್ರಾ ಜಲಾಶಯದ ಹಿನ್ನೀರಿನ ಗ್ರಾಮಗಳ ಜನರು ಅನಗತ್ಯವಾಗಿ ಕೀಟನಾಶಕಗಳನ್ನು ಬಳಸಿದರೆ,ಆಣೆಕಟ್ಟೆಯಲ್ಲಿನ ನಿರಿಗೆ ವಿಷ ಬೆರೆಸಿದಂತಾಗುತ್ತದೆ ಎಂದರು.ಸುಸ್ಥಿರ ಕೃಷಿ ನಮ್ಮ ಧ್ಯೇಯವಾಗಬೇಕು ಎಂದರು.
ಗಂಗಾವತಿ ಎಐಸಿಆರ್‌ಪಿ ಕೃಷಿ ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿ ಡಾ.ಜೆ.ವಿಶ್ವನಾಥ ಮಾತನಾಡಿ,ಮಣ್ಣು ಮತ್ತು ನೀರು ರಾಷ್ಟ್ರೀಯ ಸಂಪತ್ತು.ಯಾವ ದೇಶ ತನ್ನ ಮಣ್ಣನ್ನು ಹಾಳು ಮಾಡಿಕೊಳ್ಳುತ್ತದೆಯೋ ಅದು ತನ್ನನ್ನೇ ಹಾಳು ಮಾಡಿಕೊಂಡಂತೆ.ಗಿಡ-ಮರಗಳನ್ನು ಕಾಪಾಡಿಕೊಂಡರೆ ಜಾಗತಿಕ ತಾಪಮಾನ ತಡೆಯಬಹುದು.ಪ್ರತಿಯೊಬ್ಬ ರೈತರೂ ತಮ್ಮ ಹೊಲದಲ್ಲಿನ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಅದರ ಆರೋಗ್ಯ ಕಾಪಾಡಲು ಒತ್ತು ನೀಡಬೇಕು ಎಂದರು.
ಕೊಪ್ಪಳದ ಸಹಾಯಕ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಮಾತನಾಡಿ ,ಸಾವಯವ ಕೃಷಿ ಎಂಬುದು ಕೇವಲ ಫ್ಯಾಷನ್ ಆಗಬಾರದು.ಅದು ಧ್ಯೇಯವಾಗಬೇಕು.ಎತ್ತು,ಎಮ್ಮೆ ರೈತನ ಸಂಗಾತಿಗಳಾಗಬೇಕು ಅಂದಾಗ ಮಾತ್ರ ಉತ್ತಮ ತಿಪ್ಪೆ ಗೊಬ್ಬರ ಸಿಗುತ್ತದೆ.ಸರಕಾರದ ಕೃಷಿಭಾಗ್ಯ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.
ರಾಯಚೂರು ಕೃಷಿ ವಿ.ವಿಯ ವಿಜ್ಞಾನಿ ಡಾ.ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ ಹೊಸಪೇಟೆ ಆಕಾಶವಾಣಿಯು ಕೊಪ್ಪಳದ ಕೃಷಿ ಇಲಾಖೆಯ ಸಹಕಾರದೊಂದಿಗೆ ಕಳೆದ ಎರಡು ವರ್ಷಗಳಿಂದ ಅನ್ನದಾತ ಸುಖೀಭವ ಕಾರ್ಯಕ್ರಮ ಬಿತ್ತರಿಸುತ್ತದೆ.ಈ ಭಾಗದ ಪ್ರತಿಯೊಬ್ಬ ರೈತರ ಹಿತಕ್ಕಾಗಿ ಆಕಾಶವಾಣಿ ಉತ್ತಮ ಕಾರ್ಯಕ್ರಮಗಳನ್ನು ನಿರ್ಮಿಸುತ್ತಿದೆ ಎಂದರು.
ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಯುಸೂಫ್ ಅಲಿ ನಿಂಬರಗಿ,ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಕೆ.ವೆಂಕಟೇಶ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹೊಸಪೇಟೆ ಆಕಾಶವಾಣಿ ನಿರ್ದೇಶಕ ಕೆ.ಅರುಣಪ್ರಭಾಕರ ಮಾತನಾಡಿ ಬಾನುಲಿಯು ಸರಳ ಹಾಗೂ ಉಚಿತ ಮಾಧ್ಯಮವಾಗಿದೆ.ಕಿಸಾನ್‌ವಾಣಿ ಗ್ರಾಮಾಂತರಂಗ ಕಾರ್ಯಕ್ರಮಗಳು ಜನಪ್ರಿಯವಾಗಿವೆ ಎಂದರು.
ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ.ಗಿರೀಶ ವಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಆಕಾಶವಾಣಿಯು ೧೯೬೬ರಲ್ಲಿ ಪ್ರತ್ಯೇಕ ಕೃಷಿ ವಿಭಾಗ ಆರಂಭಿಸಿತು.೨೦೦೪ ರ ಫೆ.೧೫ ರಂದು ದೇಶದ ಎಫ್.ಎಂ.ಕೇಂದ್ರಗಳ ಮೂಲಕ ಕಿಸಾನ್‌ವಾಣಿ ಕಾರ್ಯಕ್ರಮವನ್ನು ಭಾರತ ಸರಕಾರದ ಕೃಷಿ ಮಂತ್ರಾಲಯದ ಪ್ರಾಯೋಜನೆಯೊಂದಿಗೆ ಆರಂಭಿಸಲಾಯಿತು. ಆದ್ದರಿಂದ ಫೆ.೧೫ ನ್ನು ಪ್ರತಿ ವರ್ಷ ಬಾನುಲಿ ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಅನ್ನದಾತ ಸುಖೀಭವ ಕಾರ್ಯಕ್ರಮ ಸರಣಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸರಿ ಉತ್ತರ ಬರೆದು ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಪ್ರಸಾರ ನಿರ್ವಾಹಕ ಮಂಜುನಾಥ ಡಿ.ಡೊಳ್ಳಿನ ಸ್ವಾಗತಿಸಿದರು, ಕಾರ್ಯಕ್ರಮ ನಿರ್ವಾಹಕ ಬಿ.ಸಿದ್ದಣ್ಣ ವಂದಿಸಿದರು.ಸಿ.ನಾಗರತ್ನಮ್ಮ ನಿರೂಪಿಸಿದರು.
0 comments:
Post a Comment
Click to see the code!
To insert emoticon you must added at least one space before the code.