PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :   ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ದೊಡ್ಡದು. ಮಹಿಳೆಯಿಂದಲೇ ಸಮಾಜ ನಿರ್ಮಾಣವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿವೆ. ಮಹಿಳೆಯರಲ್ಲಿ ಕಾನೂನಿನ ಅರಿವು ಹೆಚ್ಚಿಸಬೇಕಿದೆ. ಮಹಿಳೆಯರ ರಕ್ಷಣೆಯಲ್ಲಿ ಸಂವಿಧಾನ ಪ್ರಮುಖ ಪಾತ್ರ ವಹಿಸುತ್ತದೆ.ಅವರ ರಕ್ಷಣೆಗಾಗಿ ಮಹಿಳಾ ಆಯೋಗ ಸೇರಿದಂತೆ ಹಲವಾರು  ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ‍್ಯದರ್ಶಿಗಳಾದ ಬಿ.ದಶರಥ ಹೇಳಿದರು.
ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾ ನ್ಯಾಯವಾದಿಗಳ ಸಂಘ,ಸೇವಾ ಕೌಟುಂಬಿಕ ಸಲಹಾ ಕೇಂದ್ರ ಕೊಪ್ಪಳ ಇವರ ಸಹಯೋಗದಲ್ಲಿ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ದಿ.೨೫ರಂದು ಹಮ್ಮಿಕೊಳ್ಳಲಾಗಿದ್ದ ಮಹಿಳೆ ಮತ್ತು ಮಕ್ಕಳ ರಕ್ಷಣೆ ಮತ್ತು ಕಲ್ಯಾಣ, ಮಹಿಳೆಯರ ಮೇಲೆ ದೌರ್ಜನ್ಯ ತಡೆ ಕಾಯ್ದೆ ವಿಶೇಷ ಕಾನೂನು ನೆರವು ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಾಜಶೇಖರ ಮಾಲೀಪಾಟೀಲ್ ಪೋಕ್ಸೋ, ಕೌಟುಂಬಿಕ ದೌರ್ಜನ್ಯ ಕಾಯ್ದೆ ಕುರಿತು ಸವಿವರವಾಗಿ ಮಾತನಾಡಿದರು. 
ಮಹಿಳೆ ಮತ್ತು ರಕ್ಷಣೆ ಕುರಿತು ಉಪನ್ಯಾಸ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ವಸಂತಪ್ರೇಮಾ ನಮ್ಮದು ಪರಿವರ್ತನಾಶೀಲ ಸಮಾಜ. ಹಾಗಾಗಿ ನಮ್ಮ ಹಲವಾರು ಸಮಸ್ಯೆಗಳಿವೆ. ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ದ್ವಿತಿಯ ದರ್ಜೆಯ ಪ್ರಜೆಗಳಂತೆ ನೋಡುವ, ಹಲವಾರು ಕಟ್ಟುಪಾಡುಗಳಿಂದ ಅವರನ್ನು ಬಂಧಿಸಲಾಗುತ್ತಿದೆ. ಮುಂದುವರೆದ  ಇಂದಿನ ದಿನಗಳಲ್ಲೂ ಸಹಿತ ಮಹಿಳೆ ಹಲವಾರು ಕಾರಣಗಳಿಂದಾಗಿ ಬಹಿಷ್ಕೃತಳಾಗುತ್ತಿದ್ದಾಳೆ ಅಲ್ಲದೇ ಅನ್ಯಾಯಕ್ಕೊಳಗಾಗುತ್ತಿದ್ದಾಳೆ. ಮಹಿಳೆಯರಿಗೆ ಸಮಾಜದಲ್ಲಿ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಮಹಿಳೆಯರಿಗೆ ಕರಾಟೆ ತರಬೇತಿಯನ್ನೂ ನೀಡುವ ಯೋಜನೆ ಆರಂಭಿಸಲಾಗಿದೆ. ಮಹಿಳೆ ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳಬೇಕಿದೆ ಎಂದರು.  ಸೇವಾ ಸಂಸ್ಥೆಯ ಅಧ್ಯಕ್ಷರಾದ ರಾಜಾಬಕ್ಷಿ ಎಚ್.ವಿ. ಮಾತನಾಡಿ -ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ನ್ಯೂಕ್ಲಿಯರ್ ಕುಟುಂಬಗಳು ಹೆಚ್ಚಾಗುತ್ತಿವೆ. ಹಿಂದಿನ ಕಾಲದಲ್ಲಿ ಎಲ್ಲರೂ ಕೂಡಿ ಬಾಳುತ್ತಿದ್ದರು.ಅವಿಭಕ್ತ ಕುಟುಂಬಗಳಿರುತ್ತಿದ್ದವು.  ಸಮೃದ್ದ ಕುಟುಂಬದ ಪರಿಸರವಿರುತ್ತಿತ್ತು. ಸಾಮಾಜಿಕ ಮೌಲ್ಯಗಳು ಹಿರಿಯರಿಂದ ಕಿರಿಯರಿಗೆ ಬಳುವಳಿ ರೂಪದಲ್ಲಿ ಸಿಗುತ್ತಿದ್ದವು. ಇಂದಿನ ಸ್ಪರ್ದಾತ್ಮಕ ದಿನಗಳಲ್ಲಿ ಗಂಡ-ಹೆಂಡತಿ ಜೊತೆಗಿರುವುದೇ ಅವಿಭಕ್ತ ಕುಟುಂಬ ಎನ್ನುವಂತಾಗಿದೆ. ಅವಿಭಕ್ತ ಕುಟುಂಬಗಳು ಕಡಿಮೆಯಾಗಿರುವುದು ಸಂಬಂಧಗಳಲ್ಲಿ ಬಿರುಕುಂಟಾಗಲು ಮುಖ್ಯ ಕಾರಣ. ಹೀಗಾಗಿ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದರು.
ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರಭುರಾಜ್ ನಾಯಕ ಮಾತನಾಡಿ ಮಹಿಳೆ ಮಾನವ ಜನಾಂಗದ ನಿರ್ಮಾತೃ. ಸಮಾಜ ನಿರ್ಮಾಣದಲ್ಲಿ ಮಹಿಳೆ ಪಾತ್ರ ದೊಡ್ಡದಿದೆ. ಮಹಿಳೆ ಆರೋಗ್ಯಪೂರ್ಣವಾಗಿ ವಿಕಾಸಗೊಂಡರೆ ಸಮಾಜವೇ ವಿಕಾಸಗೊಂಡಂತೆ. ಮಹಿಳೆ ಮತ್ತು ಪುರುಷರು ರಥದ ಗಾಲಿಗಳಂತೆ. ಸಮಾಜ ಚಲನೆಯಲ್ಲಿರಬೇಕಾದರೆ ಈ ಎರಡೂ ಚಕ್ರಗಳೂ ಮುಖ್ಯ. ಕಾಯ್ದೆಯ ಅರಿವು ಎಲ್ಲರಿಗೂ ಬಂದಾಗ ದೌರ್ಜನ್ಯ ಕಡಿಮೆಯಾಗುತ್ತವೆ ಎಂದರು. ಕಾರ‍್ಯಕ್ರಮದ ಸ್ವಾಗತ, ನಿರೂಪಣೆಯನ್ನು ಆಪ್ತ ಸಮಾಲೋಚಕಾರದ ಅಶ್ವಿನಿ, ವಂದನಾರ್ಪಣೆಯನ್ನು ದಾವಲಸಾಬ ಮಾಡಿದರು. ವಿದ್ಯಾರ್ಥಿನಿಯರು ಮತ್ತು ಉಪನ್ಯಾಸಕರು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. 

26 Feb 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top