
ಕೊಪ್ಪಳ, ೨೬ : ಲೇಖಕರಾದವರಿಗೆ ಜವಾಬ್ದಾರಿಗಳು ಬಹಳಷ್ಟಿರುತ್ತವೆ. ನಡೆ-ನುಡಿ ಏಕತೆ ಅವಶ್ಯವಾದದ್ದು. ಪ್ರಸ್ತುತ ರಾಜಕಾರಣಿಗಳಿಗೆ ಲೇಖಕರ ಪರಿಚಯವಿರಬೇಕು. ಸಾಂಸ್ಕೃತಿಕ, ಸಾಹಿತ್ಯಕ ಲೋಕದ ಅರಿವನ್ನು ರಾಜಕಾರಣಿಗಳು ಹೊಂದಿರಲೇ ಬೇಕು. ಭಾರತ ೧೨,೭೦೦ ಕ್ಕೂ ಹೆಚ್ಚು ಜಾತಿಗಳನ್ನು ಹೊಂದಿರುವ ದೇಶ. ಪ್ರತಿಯೊಂದು ಜಾತಿಗೂ ಹತ್ತಾರು ದೇವರುಗಳಿರುತ್ತದೆ. ದೇವರನ್ನು ಮನುಷ್ಯ ತನಗಾಗಿ ಬಳಸಿಕೊಳ್ಳುತ್ತಿದ್ದೇನೆ. ಈ ಸಂದೇಶ ಹೊತ್ತಿರುವ ಕೊಪ್ಪಳದ ಯುವಕವಿ ಮಹೇಶ ಬಳ್ಳಾರಿಯವರ ’ಎಡವಿ ಬಿದ್ದ ದೇವರು’ ಪರಿಪೂರ್ಣ ಕೃತಿ. ದೇವರು ಎಡವುತ್ತಲೇ ಇರುತ್ತಾರೆ. ದೇವರು ಮನುಷ್ಯನಿಂದ ತಪ್ಪಿಸಿಕೊಳ್ಳಲಿಕ್ಕೆ ಅಸಾಧ್ಯ. ಜನತೆ ಸುಶಿಕ್ಷಿತರಾದಂತೆ ಶಿಲಾಯುಕ್ಕೆ ಹೋಗುತ್ತಿದ್ದಾರೆ. ದೇವರು ಹೋದ ಕಡೆಗೆಲ್ಲಾ ಮನುಷ್ಯ ದೇವರನ್ನು ಹಿಡಿಯಲು ಬೆನ್ನತ್ತಿದ್ದಾನೆ ಎಂದು ವ್ಯಂಗ್ಯಮಿಶ್ರಿತ ಭಾಷೆಯಲ್ಲಿ ಕನ್ನಡದ ಖ್ಯಾತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ನೃಪತುಂಗ ಪ್ರಶಸ್ತಿ ಪುರಸ್ಕೃತರಾದ ಕುಂ. ವೀರಭದ್ರಪ್ಪ ನುಡಿದರು.
ಈ ಕಲ್ಯಾಣ ಕರ್ನಾಟಕ ಭಾಗ ಎರಡು ಸ್ವಾತಂತ್ರ್ಯ ಹೋರಾಟಗಳನ್ನು ಕಂಡ ನೆಲ. ಸಾಕಷ್ಟು ನೋವುಗಳನ್ನುಂಡ ನೆಲವಿದು. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಭವ್ಯ ಪರಂಪರೆ ಹೊಂದಿರುವ ಬಯಲು ಸೀಮೆಯಿದು. ಈ ನೆಲ ಮಹತ್ವದ ಚಳುವಳಿ ಮತ್ತು ಹೋರಾಟಗಳಿಗೆ ಸಾಕ್ಷಿಯಾಗಿದೆ. ಮಹೇಶ ಬಳ್ಳಾರಿಯಂಥವರು ಈ ನೆಲದ ಸತ್ವಯುತ ಕವಿಗಳಾಗಲಿದ್ದಾರೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಮತ್ತು ಅಂತರಂಗ ಧ್ವನಿ ಪ್ರಕಾಶನ ಆಯೋಜಿಸಿದ್ದ ಮಹೇಶ ಬಳ್ಳಾರಿಯವರ ’ಎಡವಿ ಬಿದ್ದ ದೇವರು’ ಕೃತಿ ಬಿಡುಗಡೆ ಮಾಡಿ ಅವರು ಮೇಲಿನಂತೆ ನುಡಿದರು.
ಕೊಟ್ಟೂರಿನ ಹಿರಿಯ ಕವಿ, ವಕೀಲರಾದ ಹೊ.ಮ. ಪಂಡಿತಾರಾಧ್ಯ ಕೃತಿ ಮತ್ತು ಕನ್ನಡದ ಮುಂದಿನ ಹೋರಾಟಗಳ ಕುರಿತಾಗಿ ಮಾತನಾಡಿದರು. ವಾಣಿಜ್ಯೋದ್ಯಮಿಗಳಾದ ಬಸವರಾಜ ಬಳ್ಳೊಳ್ಳಿ ಕೃತಿ ಮತ್ತು ಕವಿಯ ಕುರಿತಾಗಿ ಮಾತನಾಡಿದರು. ವೇದಿಕೆಯ ಮೇಲೆ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ವಾಣಿಜ್ಯೋದ್ಯಮಿಗಳಾದ ಪ್ರಭು ಹೆಬ್ಬಾಳ, ಮಹೇಶ ಬಳ್ಳಾರಿ ಉಪಸ್ಥಿತರಿದ್ದರು. ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಲ್ಲಮಪ್ರಭು ಬೆಟ್ಟದೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಹೇಶ ಬಳ್ಳಾರಿಯವರ ಸ್ನೇಹಿತರು ಕುಂ.ವೀರಭದ್ರಪ್ಪ ಮತ್ತು ಮಹೇಶ ಬಳ್ಳಾರಿಯವರನ್ನು ಸನ್ಮಾನಿಸಿದರು.
ಆರಂಭದಲ್ಲಿ ವಿವೇಕಾನಂದ ಶಾಲೆಯ ಮಕ್ಕಳು ಅನಿಕೇತನ ಗೀತೆ ಹಾಡಿದರು. ಮಾನಪ್ಪ ಬೆಲ್ಲದ್ ನಿರೂಪಿಸಿದರೆ, ವೀರೇಶ ಕೊಪ್ಪಳ ವಂದಿಸಿದರು.
0 comments:
Post a Comment
Click to see the code!
To insert emoticon you must added at least one space before the code.