PLEASE LOGIN TO KANNADANET.COM FOR REGULAR NEWS-UPDATES

ವಿದೇಶಗಳಲ್ಲಿರುವ ಕಪ್ಪು ಹಣವನ್ನು ವಾಪಸ್ ತರಲು ಸರಕಾರ ಮುಂದಾಗಿರುವಂತೆಯೇ, ವಿದೇಶಿ ನೆಲಗಳಲ್ಲಿ ಅಕ್ರಮ ಸಂಪತ್ತು ಹೊಂದಿರುವ ವ್ಯಕ್ತಿಗಳೂ ಸುಮ್ಮನೆ ಕುಳಿತಿಲ್ಲ. ತಮ್ಮ ಅಕ್ರಮ ಸಂಪತ್ತನ್ನು ಸಕ್ರಮವಾಗಿಯೇ ಭಾರತಕ್ಕೆ ತರಲು ಪ್ರಯತ್ನಗಳನ್ನು ಅವರು ನಡೆಸುತ್ತಿದ್ದಾರೆ.
ಕುಟಿಲ ರಫ್ತುಗಳ ಮೂಲಕ ವಿದೇಶಗಳಲ್ಲಿರುವ ಕಪ್ಪು ಹಣವನ್ನು ಬಿಳಿ ಮಾಡಿ ವಾಪಸ್ ತರುವ 2,700 ಕೋಟಿ ರೂ. ಮೊತ್ತದ ಹಗರಣವೊಂದನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಪತ್ತೆಹಚ್ಚಿದೆ.
ಈ ದಂಧೆಯಲ್ಲಿ ನಿರತವಾಗಿರುವ ಕಂಪೆನಿಗಳು ‘ಸಂಶಯಾಸ್ಪದ’ ರಫ್ತುದಾರರು ಎಂಬುದನ್ನು ನಿರ್ದೇಶನಾಲಯ ಪತ್ತೆಹಚ್ಚಿದೆ. ಈ ರಫ್ತು ಕಂಪೆನಿಗಳು ಪ್ರಭಾವಿಗಳ ಹವಾಲಾ ವ್ಯವಹಾರಗಳ ಮುಖವಾಗಿ ಕೆಲಸ ಮಾಡುತ್ತಿರಬಹುದು ಎಂಬ ಶಂಕೆಯನ್ನು ಇದು ಹುಟ್ಟುಹಾಕಿದೆ. ದಿಲ್ಲಿಯಲ್ಲಿರುವ ಒಳನಾಡಿನ ಬಂದರುಗಳಲ್ಲಿರುವ ಹಲವಾರು ಕಸ್ಟಮ್ಸ್ ಅಧಿಕಾರಿಗಳ ‘ಸಕ್ರಿಯ ಪಾಲುದಾರಿಕೆ’ಯಿಂದ ಈ ವ್ಯವಹಾರ ನಡೆಯುತ್ತಿದೆ ಎಂದೂ ಅದು ಹೇಳಿದೆ. ಪ್ರಸಕ್ತ ಹಣಕಾಸು ವರ್ಷದ 10 ತಿಂಗಳ ಅವಧಿಯಲ್ಲೇ 2,700 ಕೋಟಿ ರೂ.ಗೂ ಅಧಿಕ ವೌಲ್ಯದ ‘ಕೈಯಿಂದ ನಿರ್ಮಿತ ರತ್ನಗಂಬಳಿ’ಯ 500ಕ್ಕೂ ಅಧಿಕ ಕಂಟೇನರ್‌ಗಳನ್ನು ಯುಎಇ ಮತ್ತು ಮಲೇಶ್ಯಗಳಿಗೆ ರಫ್ತು ಮಾಡಿರುವುದು ಗಮನಕ್ಕೆ ಬಂದಿದೆ. ಅವುಗಳನ್ನು ದಿಲ್ಲಿಯ ಕೇವಲ ಎರಡೇ ಬಂದರುಗಳಾದ ಪತ್‌ಪರ್‌ಗಂಜ್ ಐಸಿಡಿ ಮತ್ತು ತುಘಲಕಾಬಾದ್ ಐಸಿಡಿಗಳಿಂದ ಮುಂಬೈಯ ನವ ಶೇವ ಮೂಲಕ ರಫ್ತು ಮಾಡಲಾಗಿದೆ. ನಿರ್ದೇಶನಾಲಯ ನಡೆಸಿದ ದಾಳಿಗಳ ವೇಳೆ, ಈ ‘ದುಬಾರಿ ಕೈಯಿಂದ ಮಾಡಿದ ರತ್ನಗಂಬಳಿ’ಗಳು ಅಗ್ಗದ ಹೊದಿಕೆಗಳಾಗಿ ಮಾರ್ಪಟ್ಟಿವೆ.
ನಿರ್ದೇಶನಾಲಯದ ಅಧಿಕಾರಿಗಳ ಗಮನ ಸೆಳೆದ ಅಂಶವೆಂದರೆ, ಹಿಂದೆಂದೂ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಕೈಯಿಂದ ನಿರ್ಮಿತ ರತ್ನಗಂಬಳಿಗಳು ದೇಶದಿಂದ ರಫ್ತಾಗಿಲ್ಲ ಹಾಗೂ ಇಷ್ಟೊಂದು ಪ್ರಮಾಣದ ಭಾರತೀಯ ಉತ್ಪನ್ನದ ಆಮದನ್ನು ಯುಎಇ ನೋಡಿಲ್ಲ.
 ಕಳೆದ ಐದು ವರ್ಷಗಳಲ್ಲಿ ಭಾರತದಿಂದಾದ ಕೈಯಿಂದ ಮಾಡಿದ ರತ್ನಗಂಬಳಿಗಳ ಒಟ್ಟು ರಫ್ತು 4,000-5,000 ಕೋಟಿ ರೂ. ಹಾಗೂ ಆ ಪೈಕಿ 60 ಶೇ. ಅಮೆರಿಕ ಮತ್ತು ಯುರೋಪ್‌ಗಳಿಗೆ ಹೋಗಿದೆ. ಭಾರೀ ಪ್ರಮಾಣದಲ್ಲಿ ಶಂಕಿತ ಸರಕುಗಳು ತಲುಪಿರುವ ಯುಎಇ ಭಾರತದಿಂದ ರತ್ನಗಂಬಳಿಗಳನ್ನು ಆಮದು ಮಾಡುವ ದೇಶಗಳ ಅಗ್ರ 20ರ ಪಟ್ಟಿಯಲ್ಲೂ ಇಲ್ಲ. ಈ ಹಿನ್ನೆಲೆಯಲ್ಲಿ ನಿರ್ದೇಶನಾಲಯ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ‘‘ನೆಲಕ್ಕೆ ಹಾಸುವ ಕೈಯಿಂದ ನಿರ್ಮಿತ ನಾರು’’ ಎಂಬ ಘೋಷಿತ ಹೆಸರಿನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 50 ಕಂಟೇನರ್‌ಗಳನ್ನು ವಿವಿಧ ಬಂದರುಗಳಲ್ಲಿ ಪರಿಶೀಲನೆ ನಡೆಸಿತು. ಇವುಗಳಲ್ಲಿ ಸಾಗಿಸಲಾಗುತ್ತಿದ್ದ ನಿಜವಾದ ಸರಕು ಅಗ್ಗದ ಹೊದಿಕೆಗಳು ಎಂಬುದಾಗಿ ದಾಳಿಯ ವೇಳೆ ಬಯಲಾಯಿತು.
30 Jan 2015

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top