PLEASE LOGIN TO KANNADANET.COM FOR REGULAR NEWS-UPDATES

ಯಾವುದೇ ಸಾಮಗ್ರಿಗಳ ಖರೀದಿ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳ ಖರೀದಿಗೆ ಗ್ರಾಹಕರು ಆದ್ಯತೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು.
     ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗವಿಸಿದ್ದೇಶ್ವರ ಪ.ಪೂ. ಕಾಲೇಜು ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗವಿಸಿದ್ದೇಶ್ವರ ಪ.ಪೂ. ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಗ್ರಾಹಕರು ಯಾವುದೇ ಉತ್ಪನ್ನ ಕೊಳ್ಳುವ ಮೊದಲು ಅದರ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು.  ಅಗ್ಗದ ದರದಲ್ಲಿ ದೊರೆಯುವ ನಕಲಿ ಉತ್ಪನ್ನಗಳನ್ನು ಖರೀದಿಸಿ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.  ಗ್ರಾಹಕರು ಉತ್ಪನ್ನಗಳ ಬಗ್ಗೆ ಮಾರಾಟಗಾರರಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.  ಯಾವುದೇ ಉತ್ಪನ್ನಗಳ ಗುಣಮಟ್ಟವನ್ನು ಖಾತ್ರಿ ಪಡಿಸಲು ಐಎಸ್‍ಐ ಅಥವಾ ಅಗ್‍ಮಾರ್ಕ್ ಗುರುತು ಇಂತಹ ಪ್ರಮಾಣೀಕೃತ ಚಿಹ್ನೆ ಇರುವುದನ್ನು ನೋಡಿಕೊಂಡು, ಗ್ರಾಹಕರು ಉತ್ಪನ್ನಗಳನ್ನು ಖರೀದಿಸಬೇಕು.  ಐಎಸ್‍ಐ, ಆಗ್‍ಮಾರ್ಕ್ ಇವುಗಳು ಉತ್ತಮ ಗುಣಮಟ್ಟವನ್ನು ಪ್ರಮಾಣೀಕರಿಸಲು ಸರ್ಕಾರ ನಿಗದಿಪಡಿಸಿರುವ ಸಂಸ್ಥೆಗಳಾಗಿದ್ದು, ವಿದ್ಯುತ್ ಉಪಕರಣಗಳು ಸೇರಿದಂತೆ ಕೆಲವು ಉತ್ಪನ್ನಗಳು ಐಎಸ್‍ಐ ಪ್ರಮಾಣೀಕರಣ ಹೊಂದುವುದು ಕಡ್ಡಾಯವಾಗಿದೆ.  ಆಹಾರ, ಔಷಧಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಪಾಕೆಟ್‍ಗಳ ಮೂಲಕ ಮಾರಾಟ ಮಾಡುವವರು ಅದರಲ್ಲಿ ಗರಿಷ್ಠ ಮಾರಾಟ ದರ, ತಯಾರಿಕಾ ದಿನಾಂಕ, ಅವಧಿ ಮೀರುವ ದಿನಾಂಕ, ಉತ್ಪನ್ನದಲ್ಲಿರುವ ಅಂಶಗಳ ಬಗ್ಗೆ ನಮೂದಿಸುವುದು ಕಡ್ಡಾಯವಾಗಿರುತ್ತದೆ.  ಗ್ರಾಹಕರು ಯಾವುದೇ ಉತ್ಪನ್ನಗಳನ್ನು ಕೊಳ್ಳುವಾಗ, ಇವೆಲ್ಲವನ್ನು ಪರಿಶೀಲಿಸಿಯೇ ಖರೀದಿಸಬೇಕು.  ಅನ್ಯಾಯಕ್ಕೆ ಅಥವಾ ವಂಚನೆಗೆ ಒಳಗಾದವರು, ಮಾರಾಟಗಾರರಿಂದ ನ್ಯಾಯ ದೊರೆಯದಿದ್ದಲ್ಲಿ, ಗ್ರಾಹಕರ ವೇದಿಕೆಯ ಮೊರೆ ಹೋಗಲು ಕಾನೂನಿನಲ್ಲಿ ಅವಕಾಶವಿದೆ.  ಗ್ರಾಹಕರ ಹಿತಕಾಯುವ ಸಲುವಾಗಿ 1986 ರ ಡಿಸೆಂಬರ್ 24 ರಂದು ಗ್ರಾಹಕರ ಹಿತರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದರಿಂದ, ಡಿ. 24 ಅನ್ನು ರಾಷ್ಟ್ರೀಯ ಗ್ರಾಹಕರ   ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು.
     ಗ್ರಾಹಕರ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ವಕೀಲ ವಿ.ಎಂ. ಭೂಸನೂರ ಮಠ ಅವರು ಮಾತನಾಡಿ, ಸಾರ್ವಜನಿಕರಿಗೆ ದೈನಂದಿನ ಬದುಕಿನಲ್ಲಿ ಕಾನೂನು ವಿಷಯ ಹಾಸು ಹೊಕ್ಕಾಗಿದೆ.  ವಿದ್ಯಾರ್ಥಿಗಳು ಗ್ರಾಹಕರ ಹಿತರಕ್ಷಣೆಗಾಗಿ ಜಾರಿಯಲ್ಲಿರುವ ಕಾಯ್ದೆಯ ಬಗ್ಗೆ ಅರಿವು ಹೊಂದಿದಲ್ಲಿ, ಮಾರಾಟಗಾರರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ.  ರೈತರು ಬೀಜ, ಗೊಬ್ಬರ, ಕೀಟನಾಶಕ ಸೇರಿದಂತೆ ಕೃಷಿ ಚಟುವಟಿಕೆಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದಾಗ, ಅದಕ್ಕೆ ಸಂಬಂಧಿಸಿದ ಬಿಲ್ ಅಥವಾ ರಸೀದಿಯನ್ನು ಕಡ್ಡಾಯವಾಗಿ ಪಡೆದು, ಸಂರಕ್ಷಿಸಿ ಇಟ್ಟುಕೊಳ್ಳಬೇಕು.  ಒಂದು ವೇಳೆ ಖರೀದಿಸಿದ ಸಾಮಗ್ರಿಗಳು ಕಳಪೆ ಗುಣಮಟ್ಟ ಇದ್ದಲ್ಲಿ, ಪರಿಹಾರಕ್ಕಾಗಿ ಗ್ರಾಹಕರ ವೇದಿಕೆಗೆ ಮೊರೆ ಹೋಗಲು ಅವಕಾಶವಿದೆ.  2 ಲಕ್ಷ ರೂ.ಗಳ ವರೆಗಿನ ಸಾಮಗ್ರಿ ಖರೀದಿಗೆ ಸಂಬಂಧಿಸಿದಂತೆ ವಂಚನೆಗೆ ಒಳಗಾದವರು ವಕೀಲರ ನೆರವಿಲ್ಲದೆ, ನೇರವಾಗಿ  ತಾವೇ ಗ್ರಾಹಕರ ವೇದಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ.  ವೈದ್ಯಕೀಯ ಸೇವೆ, ಶಿಕ್ಷಣ, ಜೀವ ವಿಮೆ ಅಲ್ಲದೆ ವಕೀಲರ ಸೇವೆಯೂ ಸಹ ಗ್ರಾಹಕರ ಹಿತರಕ್ಷಣಾ ಕಾಯ್ದೆ ವ್ಯಾಪ್ತಿಗೆ ಸೇರುತ್ತದೆ.  ಅನ್ಯಾಯಕ್ಕೆ ಒಳಗಾದವರು ಜಿಲ್ಲಾ ಮಟ್ಟದಲ್ಲಿರುವ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗಳಿಗೆ ಮನವಿಯನ್ನು ಸಲ್ಲಿಸಿ, ಸೇವಾ ನ್ಯೂನತೆಗೆ ಪರಿಹಾರ, ಖರೀದಿ ವಸ್ತುಗಳ ಬದಲಾವಣೆ, ನಷ್ಟ ಪರಿಹಾರ ಸೇರಿದಂತೆ ನ್ಯಾಯ ಪಡೆಯಲು ಸಾಧ್ಯವಿದೆ.  ಇತ್ತೀಚೆಗೆ ಆನ್‍ಲೈನ್ ಮೂಲಕವೂ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
     ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಜಯಕುಮಾರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಸುಕುಮಾರ್, ಗವಿಸಿದ್ದೇಶ್ವರ ಪ.ಪೂ. ಕಾಲೇಜು ಪ್ರಾಚಾರ್ಯ ಪರೀಕ್ಷಿತರಾಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಸ್ವಾಗತಿಸಿದರು, ಸಾವಿತ್ರಿ ಮುಜುಂದಾರ್ ನಿರೂಪಿಸಿದರು

Advertisement

0 comments:

Post a Comment

 
Top