PLEASE LOGIN TO KANNADANET.COM FOR REGULAR NEWS-UPDATES

  ಹೆಣ್ಮಕ್ಕಳಿಗೆ ಶಿವ, ಪಡ್ಡೆಗಳಿಗೆ ಪರಮಶಿವ 

        ದೃಶ್ಯ ಸಿನಿಮಾದಲ್ಲಿ ರವಿಚಂದ್ರನ್ ಮಹಿಳೆಯರನ್ನ ಥೇಟರ್ ಕಡೆ ಬರುವಂತೆ ಮಾಡಿದ್ದರು. ನಂತರ ಬಿಡುಗಡೆಯಾಗಿರುವ ಪರಮಶಿವ ಸಿನಿಮಾ ಕೂಡಾ ಅಷ್ಟೇ ಮಹಿಳೆಯರನ್ನ ಕೈ ಬೀಸಿ ಕರೆಯುತ್ತೆ. ಚಿತ್ರದ ಟೈಟಲ್ ನೋಡಿ ಇದು ಪಕ್ಕಾ ಮಾಸ್ ಸಿನಿಮಾ ಎಂದುಕೊಂಡರೆ ಕೊಂಚ ನಿರಾಸೆಯಾಗುತ್ತೆ. ಸಿನಿಮಾದಲ್ಲಿ ಮಾಸ್ ಫೀಲ್ ಇದೆ ನಿಜ, ಆದರೆ ಹೆಚ್ಚು ಹೊತ್ತು ಕಾಣೋದು ಸೆಂಟಿಮೆಂಟ್.

        ಡಾ.ಶಿವಣ್ಣ-ರಾಧಿಕಾ ಅವರ ತವರಿಗೆ ಬಾ ತಂಗಿ, ಅಣ್ಣ-ತಂಗಿ ಹಾಗೆಯೇ ಡಾ.ವಿಷ್ಣುವರ್ಧನ್ ಅವರ ಸಿಂಹಾದ್ರಿಯ ಸಿಂಹ, ಯಜಮಾನ ಸಿನಿಮಾಗಳನ್ನು ಒಳಕಲ್ಲಿನಲ್ಲಿ ಹಾಕಿ, ರುಬ್ಬಿ ತೆಗೆದ ಹಿಟ್ಟಿನಂತಿದ್ದಾನೆ ಪರಮಶಿವ. ಛಾಯಾಗ್ರಾಹಕ ಕಮ್ ನಿರ್ಮಾಪಕ ಅಣಜಿ ನಾಗರಾಜ್, ನಿರ್ದೇಶಕ ಕಮ್ ನಿರ್ಮಾಪಕ ಓಂಪ್ರಕಾಶರಾವ್‌ಗೆ ಯಾವಾಗಲೂ ಮೂರ‍್ನಾಲ್ಕು ಸಿನಿಮಾಗಳನ್ನ ಸೇರಿಸಿ ಹೊಸ ಸಿನಿಮಾ ಮಾಡುವ ಇಂಥ ಐಡಿಯಾಗಳೇ ಬರ‍್ತಾವೆ ಎನ್ನುವ ದೂರಿದೆ. ಪರಮಶಿವ ಚಿತ್ರ ನೋಡಿದ ಮೇಲೆ, ಆಣಜಿ ತಮ್ಮ ಮೇಲಿರುವ ಆಪಾಸನೆಯನ್ನು ಒಪ್ಪಿಕೊಂಡಂತೆ ಕಾಣುತ್ತಾರೆ.
        ಬಹಳ ದಿನಗಳ ನಂತರ ಅಣ್ಣ-ತಮ್ಮ, ಅಣ್ಣಂದಿರು-ತಂಗಿಯ ಸೆಂಟಿಮೆಂಟ್ ಸಿನಿಮಾ ತೆರೆ ಮೇಲೆ ಮೂಡಿದೆ. ಮನಕಲುಕುವ ಡೈಲಾಗ್‌ಗಳು, ದೃಶ್ಯಗಳು, ಪಾತ್ರಗಳಿಗೆ ಜೀವ ತುಂಬುವ ಕಲಾವಿದರು ಇದ್ದರೆ ಎಂಥವರ ಕರ್ಚೀಫು ಕೂಡಾ ಒದ್ದೆಯಾಗುತ್ತೆ ಎನ್ನುವ ಫಾರ್ಮುಲಾ ನಂಬಿ ಪರಮಶಿವ ಸಿದ್ಧಗೊಂಡಿದ್ದಾನೆ. ಬರೀ ಇಷ್ಟೆ ಕೊಟ್ಟರೆ ಪಡ್ಡೆ ಹೈಕ್ಳು ಬೇಸರ ಮಾಡ್ಕತವೇ ಅಂತ್ಹೇಳಿ ನಾಲ್ಕು ಫೈಟು, ಮೂರು ಡ್ಯುಯೆಟ್ಟುಗಳನ್ನ ಸಹ ಅಳವಡಿಸಲಾಗಿದೆ. 
         ಅಣ್ಣ ಹೇಳಿದ್ರೆ ಕಾರಣ ಕೇಳದೇ ವಿಷಾನೇ ಕುಡಿಯೋ ತಮ್ಮಂದಿರು, ತಂಗಿಗಾಗಿ ಇಡೀ ಆಸ್ತಿಯನ್ನೇ ಬರೆದುಕೊಡುವ ಅಣ್ಣಂದಿರು, ಒಮ್ಮೆ ಕೊಟ್ಟ ಮಾತನ್ನು ಯಾವ ಕ್ಷಣಕ್ಕೂ ಹಿಂತೆಗೆದುಕೊಳ್ಳದ ಅಪ್ಪ-ಮಗ ಶಿವ-ಪರಮಶಿವ, ಇದನ್ನೇ ಬಂಡವಾಳ ಮಾಡಿಕೊಂಡ ವಿಲನ್ನುಗಳು, ತಂಗಿ ಮೇಲಿನ ಪ್ರೀತಿಗಾಗಿ ಅಣ್ಣನ ತ್ಯಾಗ ಕಂಡು ಮನಸೋಲುವ ಅತ್ತಿಗೆ, ಮದುವೆಗೆ ವಿರೋಧಿಸುವ ಅತ್ತಿಗೆಯ ಅಪ್ಪ, ಜೇನುಗೂಡಿನಂಥ ಸಂಸಾರಕ್ಕೆ ಹುಳಿಹಿಂಡುವ ಪರಮಪಾಪಿಗಳು, ಚಾಡಿಮಾತಿಗೆ ಕಿವಿಗೊಟ್ಟು ಸಂಸಾರ ಒಡೆಯಲು ಹೋದ ನಾದಿನಿ, ತಮ್ಮನ ಸಲುವಾಗಿ ಮಂತ್ರಿ ಮಗನನ್ನೇ ಥಳಿಸುವ ನಾಯಕರು, ಕೊನೆಗೆ ಆ ಮನೆತನದ ಗೌರವ ಅರಿತು ಸಂಬಂಧ ಬೆಳೆಸುವ ಮಂತ್ರಿ, ಸೇಡೋಂದೇ ಪರಮಸುಖ ಎನ್ನುವ ತಂಗಿಯ ಗಂಡ ಮತ್ತು ಮಾವ, ಗಂಡನಮನೆಯವರು ಎಷ್ಟೇ ಹಿಂಸೆ ಕೊಟ್ಟರೂ ಸಹಿಸಿಕೊಂಡಿದ್ದು ಕೊನೆಗೆ ತಾಳಿಯನ್ನ ಕಿತ್ತು ಗಂಡನ ಮುಖಕ್ಕೆ ಎಸೆದು ಅಣ್ಣಂದಿರೊಂದಿಗೆ ಹೆಜ್ಜೆ ಹಾಕುವ ತಂಗಿ. -ಇದು
ಪರಮಶಿವನ ಕಥೆ.
       ಇಡೀ ಸಿನಿಮಾ ಸೆಂಟಿಮೆಂಟಿನಲ್ಲೇ ಮುಳುಗಿದೆ, ಇನ್ನೇನು ಕ್ಲೈಮ್ಯಾಕ್ಸ್ ಎನ್ನುವಷ್ಟರಲ್ಲಿ ಫ್ಲ್ಯಾಶ್‌ಬ್ಯಾಕ್‌ನಲ್ಲಿ ಬರುವ ಉದ್ದನೆಯ ಕೂದಲಿನ ಪರಮಶಿವ ಸಿಂಹಾದ್ರಿಯ ಸಿಂಹವನ್ನು ನೆನಪಿಸುತ್ತಾರೆ. ಮಾತಿಗಾಗಿ ತಲೆಯನ್ನೇ ಸಮರ್ಪಿಸುವ ಮೂಲಕ ಮಾತು ಮುತ್ತು ಹೌದು, ಮೃತ್ಯುವೂ ಹೌದು ಎಂದು ಸಾರಿ ಅಮರರಾಗುತ್ತಾರೆ. ಕೊನೆಯವರೆಗೂ ಪರಮಶಿವನ ಮಕ್ಕಳು ಕೊಟ್ಟ ಮಾತಿಗೆ ಸದಾ ಬದ್ಧರು. ಮುಂದ...
      ಇದು ಹೆಣ್ಣಮಕ್ಕಳಿಗೆ ಹೇಳಿ ಮಾಡಿದ ಸಿನಿಮಾ. ಕುಟುಂಬಸಮೇತರಾಗಿ ನೋಡುವಂಥ ಸಿನಿಮಾ ಎನ್ನುವುದರಲ್ಲಿ ಸಂಶಯವಿಲ್ಲ. ರವಿಚಂದ್ರನ್ ಮತ್ತೊಮ್ಮೆ ಮಾಗಿದ ಅಭಿನಯ ನೀಡಿದ್ದಾರೆ. ತಮ್ಮ ವಯಸ್ಸಿಗೆ ತಕ್ಕ ಪಾತ್ರ ಮಾಡಿದ್ದಾರೆ. ತಂಗಿ ಪಾತ್ರದಲ್ಲಿ ಶರಣ್ಯ ಇಷ್ಟವಾಗುತ್ತಾರೆ. ನಾಯಕಿಯಾಗಿ ಸಾಕ್ಷಿ ಶಿವಾನಂದ ಇದ್ದರೂ, ವಿಜಯ್ ರಾಘವೇಂದ್ರ ಜೋಡಿಯಾಗಿ ಜಿಂಕೆಮರಿ ರೇಖಾ ಇದ್ದರೂ ಸಿನಿಮಾದಲ್ಲಿ ಹೆಚ್ಚು ಸ್ಕೋಪ್ ಸಿಕ್ಕಿರೋದು ಶರಣ್ಯಾಗೆ. ವಿಜಯ್ ರಾಘವೇಂದ್ರ, ಯಶಸ್ ತಮ್ಮಂದಿರಾಗಿ ನಟಿಸಿದ್ದಾರೆ. ರಮೇಶಭಟ್ ಎಂದಿನಂತೆ ಭಂಟನ ಪಾತ್ರ ನಿರ್ವಹಿಸಿ ಮೆಚ್ಚುಗೆ ಗಳಿಸುತ್ತಾರೆ. ಸಾಧುಕೋಕಿಲಾ ಇಲ್ಲಿ ಬರೀ ನಗಿಸುವುದಕ್ಕಷ್ಟೇ ಮೀಸಲಾಗಿಲ್ಲ. ಅವರೂ ಸಹ ಅತ್ತಿದ್ದಾರೆ. ಇಷ್ಟವಾಗ್ತಾರೆ. ಶಂಕರ್ ಅಶ್ವತ್ಥ, ಸೃಜನ್ ಲೋಕೇಶ್ ನೇಗಿಟೀವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೃಜನ್ ವಿಲನ್ ಆಗಿ ಅಚ್ಚರಿ ಮೂಡಿಸಿದ್ದಾರೆ.
        ಅರ್ಜುನ್ ಜನ್ಯ ಸಂಗೀತ, ಕೌಟುಂಬಿಕ ಚಿತ್ರಕ್ಕಿರಬೇಕಾದ ಗುಣಮಟ್ಟವನ್ನು ಕಾಯ್ದುಕೊಂಡಿದೆ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿಯವರು ಬರೆದ ಸಾಲುಗಳು ಅರ್ಥಪೂರ್ಣವಾಗಿವೆ. ಎಂ.ಎಸ್.ರಮೇಶ ಅವರ ಲೇಖನಿ ಇನ್ನೊಂಚೂರು ಹರಿತವಾಗಿರಬೇಕಿತ್ತು ಎಂಬುದು ರವಿ ಅಭಿಮಾನಿಗಳ ಬಯಕೆ. ಮಹೇಶಬಾಬು ನಿರ್ದೇಶನದಲ್ಲಿ ಸುಸ್ತಾಗಿರುವಂಥದ್ದು ಏನು ಕಂಡಿಲ್ಲ. ಅಣಜಿ ಛಾಯಾಗ್ರಾಹಣದ ಬಗ್ಗೆ ಹೆಚ್ಚಿಗೆ ಏನೂ ಹೇಳುವಂತಿಲ್ಲ. 

ರಿವ್ಯೂ ಕ್ಲೈಮ್ಯಾಕ್ಸ್...

        ಗಂಡಮಕ್ಕಳು ಕರ್ಚೀಫು ಮರೆತು ಥೇಟರ್‌ಗೆ ಹೋಗ್ಬೇಡಿ, ಸೆಂಟಿಮೆಂಟ್ ಇಷ್ಟಪಡದ ಹೆಣ್ಮಕ್ಕಳು ಹೋಗಲೇಬೇಡಿ
                  
-ಚಿತ್ರಪ್ರಿಯ ಸಂಭ್ರಮ್.

ರೇಟಿಂಗ್ : ***
---------------------
*ನೋಡಬೇಡಿ
**ನೋಡ್ತಿರಾ?
***ನೋಡಬಹುದು. 
****ಚೆನ್ನಾಗಿದೆ.
*****ನೋಡಲೇಬೇಕು.  

Advertisement

0 comments:

Post a Comment

 
Top