PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲಾ ಪಂಚಾಯತಿಯ ಸಾಮಾನ್ಯ ಸಭೆ ಹಾಗೂ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಗಳಿಗೆ ಅಧಿಕಾರಿಗಳು ಆಯಾ ಇಲಾಖೆಯ ಪ್ರಗತಿ ವರದಿಯ ಜೊತೆಗೆ ಫಲಾನುಭವಿಗಳ ಪಟ್ಟಿ ಹಾಗೂ ಕಾಮಗಾರಿಗಳ ವಿವರವನ್ನು ಸಹ ತಪ್ಪದೆ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ಅಥವಾ ಕೆ.ಡಿ.ಪಿ ಸಭೆ ಸೇರಿದಂತೆ ಯಾವುದೇ ಪ್ರಗತಿ ಪರಿಶೀಲನಾ ಸಭೆಗಳಿಗೆ, ವರದಿ ಸಲ್ಲಿಸುವ ಅಧಿಕಾರಿಗಳು, ಕೇವಲ ಅಂಕಿ-ಅಂಶಗಳನ್ನು ಮಾತ್ರ ನೀಡುವುದರಿಂದ, ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆ ವಿವರಗಳು ಲಭ್ಯವಾಗುತ್ತಿಲ್ಲ.  ಫಲಾನುಭವಿಗಳ ಆಯ್ಕೆ ಅಥವಾ ಕಾಮಗಾರಿಗಳ ವಿವರ ಲಭ್ಯವಾಗದೇ ಇದ್ದಲ್ಲಿ, ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆ ಮಾಹಿತಿ ದೊರೆಯದಂತಾಗಿದೆ.  ಪ್ರತಿ ಸಭೆಗಳಲ್ಲೂ ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರೂ, ಇದುವರೆಗೂ ಸಂಪೂರ್ಣ ವರದಿಗಳು ಸಿಗುತ್ತಿಲ್ಲ, ಜಿಲ್ಲಾ ಪಂಚಾಯತಿಯ ಸದಸ್ಯರಾಗಿದ್ದರೂ, ವಿವಿಧ ಇಲಾಖೆಗಳ ಯೋಜನೆಗಳು ಗೊತ್ತಾಗುತ್ತಿಲ್ಲ ಎಂದು ಜಿ.ಪಂ. ಸದಸ್ಯ ಈರಪ್ಪ ಕುಡಗುಂಟಿ, ವಿಜಯಲಕ್ಷ್ಮಿ ರಾಮಕೃಷ್ಣ ಸೇರಿದಂತೆ ವಿವಿಧ ಸದಸ್ಯರುಗಳು ಅಸಮಾಧಾನ ವ್ಯಕ್ತಪಡಿಸಿದರು.  ಇದಕ್ಕೆ ಸ್ಪಂದಿಸಿದ ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಅವರು ಮಾತನಾಡಿ,  ಇನ್ನು ಮುಂದೆ ಸಾಮಾನ್ಯ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆಗಳಿಗೆ, ಇಲಾಖೆಗಳಿಂದ ವಿವಿಧ ಯೋಜನೆಗಳ ಅನುಷ್ಠಾನದ ವರದಿಯ ಜೊತೆಗೆ ಆಯ್ಕೆಯಾದ ಫಲಾನುಭವಿಗಳ ಪಟ್ಟಿ ಅಥವಾ ಆಯಾ ಕಾಮಗಾರಿಗಳ ಸಂಪೂರ್ಣ ವಿವರಗಳ ಪಟ್ಟಿಯನ್ನು ತಪ್ಪದೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುದ್ಧ ಕುಡಿಯುವ ನೀರು ಘಟಕ : ಜಿಲ್ಲೆಯಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವ ಹಲವಾರು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ (ಆರ್.ಓ ಪ್ಲಾಂಟ್) ಗಳನ್ನು ಅಳವಡಿಸಲಾಗುತ್ತಿದ್ದು, ಈ ಕುರಿತು ಆಯಾ ಕ್ಷೇತ್ರದ ಸದಸ್ಯರಿಗೆ ಮಾಹಿತಿ ಇಲ್ಲ.  ಜಿಲ್ಲಾ ಪಂಚಾಯತಿ ಅಥವಾ ಸರ್ಕಾರದ ಅನುದಾನದಿಂದ ಶುದ್ಧ ನೀರು ಘಟಕಗಳನ್ನು ಅಳವಡಿಸಲಾಗುತ್ತಿದ್ದರೂ, ಕೆಲವೆಡೆ ಖಾಸಗಿ ಏಜೆನ್ಸಿಗಳು, ತಾವೇ ಉಚಿತವಾಗಿ ಇದನ್ನು ಅಳವಡಿಸುತ್ತಿದ್ದೇವೆ ಎಂಬುದಾಗಿ ಹೇಳಿಕೆ ನೀಡುತ್ತಿರುವುದು ಗಮನಕ್ಕೆ ಬಂದಿದೆ.  ಅಲ್ಲದೆ ಇಂತಹ ಘಟಕಗಳಿಗೆ ಸೂಕ್ತ ಕೊಳವೆಬಾವಿಯ ಸಂಪರ್ಕ ಕಲ್ಪಿಸದೆ, ಅವೈಜ್ಞಾನಿಕವಾಗಿ ಬಹುದೂರದಿಂದ ಪೈಪ್‍ಲೈನ್ ಅಳವಡಿಸುವ ಮೂಲಕ ಸರ್ಕಾರದ ಹಣವನ್ನು ಪೋಲು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.  ಶುದ್ಧ ಕುಡಿಯುವ ನೀರು ಘಟಕಗಳನ್ನು ಅಳವಡಿಸಲು ಸ್ಥಳದ ಆಯ್ಕೆ ಮಾಡುವಾಗ ಜಿ.ಪಂ. ಸದಸ್ಯರ ಗಮನಕ್ಕೆ ತಂದಲ್ಲಿ, ಇದಕ್ಕೆ ಸಮರ್ಪಕ ವ್ಯವಸ್ಥೆ ಮಾಡಲು ಸಹಕರಿಸುವುದಾಗಿ ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ, ಸದಸ್ಯ ಪಿಲ್ಲಿ ಕೊಂಡಯ್ಯ ಮುಂತಾದವರು ಆಕ್ಷೇಪ ವ್ಯಕ್ತಪಡಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು, ಜಿಲ್ಲೆಯಲ್ಲಿ ಸುಮಾರು 174 ಗ್ರಾಮಗಳು ಫ್ಲೋರೈಡ್ ತೊಂದರೆ ಅನುಭವಿಸುತ್ತಿವೆ.  ಇಂತಹ ಗ್ರಾಮಗಳಲ್ಲಿ ಆರ್.ಓ. ಪ್ಲಾಂಟ್ ಗಳನ್ನು ಅಳವಡಿಸಲಾಗುತ್ತಿದ್ದು, ಈಗಾಗಲೆ ಕಾರ್ಯ ಪ್ರಗತಿಯಲ್ಲಿದೆ.  ಅಲ್ಲದೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಆರ್.ಓ ಪ್ಲಾಂಟ್‍ಗಳನ್ನು ಉಚಿತವಾಗಿ ಅಳವಡಿಸಲು ಮುಂದೆ ಬಂದಿದ್ದು, ಈ ಕುರಿತು ಜಿ.ಪಂ. ಸದಸ್ಯರ ಸಹಕಾರ ಪಡೆದು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಂಗನವಾಡಿ ಅಕ್ರಮ ನೇಮಕ ತನಿಖೆ : ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಅಕ್ರಮವಾಗಿ 27 ಅಂಗನವಾಡಿ ಕಾರ್ಯಕರ್ತೆಯರ ನೇಮಕವಾಗಿದ್ದು, ಈ ಪೈಕಿ ಕೆಲವು ನ್ಯಾಯಾಲಯದ ಆದೇಶ ಪಡೆದು, ಮರು ನೇಮಕಗೊಂಡಿದ್ದಾರೆ.  ಅಕ್ರಮ ನೇಮಕಾತಿ ಕುರಿತಂತೆ ನಿವೃತ್ತ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ತನಿಖೆ ಪ್ರಗತಿಯ ಹಂತದಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು ಸಭೆಗೆ ವಿವರ ನೀಡಿದರು.  ಅಕ್ರಮವಾಗಿ ಅಂಗನವಾಡಿ ಕಾರ್ಯಕರ್ತೆಯರ ನೇಮಕ, ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡು ಕ್ರಮ ಜರುಗಿಸಲು ಜಿ.ಪಂ. ಸದಸ್ಯರುಗಳು ಒತ್ತಾಯಿಸಿದರು.  ತಾವೇ ಖುದ್ದು ತನಿಖೆ ಕೈಗೊಂಡು ವರದಿ ಸಲ್ಲಿಸುವುದಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಗೆ ಭರವಸೆ ನೀಡಿದರು.
  ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ ವೇದಿಕೆ ಮೇಲೆ ಉಪಸ್ಥಿತರಿದ್ದರು.  ಜಿಲ್ಲಾ ಪಂಚಾಯತಿಯ ಸದಸ್ಯರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top