ಕೊಪ್ಪಳ-ಹೊಸಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಹಿಟ್ನಾಳ್ ಬಳಿ ಜಿಎಂಆರ್ ಕಂಪನಿ ಪ್ರಾರಂಭಿಸಿರುವ ರಸ್ತೆ ಬಳಕೆ ಶುಲ್ಕ ವಸೂಲಾತಿ (ಟೋಲ್ ಸಂಗ್ರಹ) ಕೇಂದ್ರವನ್ನು ಸ್ಥಳಾಂತರಿಸಬೇಕು. ಅಲ್ಲಿಯವರೆಗೂ ಯಾವುದೇ ಸ್ಥಳೀಯ ವಾಹನಗಳಿಂದ ಶುಲ್ಕ ವಸೂಲಾತಿ ಮಾಡದಂತೆ ಜಿಲ್ಲಾಧಿಕಾರಿ
ಕೆ.ಪಿ. ಮೋಹನ್‌ರಾಜ್ ಅವರು ಜಿಎಂಆರ್ ಕಂಪನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿಟ್ನಾಳ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಎಂಆರ್ ಕಂಪನಿಯಿಂದ ವಾಹನಗಳಿಗೆ ಟೋಲ್ ಸಂಗ್ರಹ ಮಾಡುವ ಕುರಿತಂತೆ ಉಂಟಾಗಿದ್ದ ವಿವಾದ ಪರಿಹರಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕೇವಲ ಕೆಲವೇ ದೂರ ಮಾತ್ರ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಿದರೂ ಶುಲ್ಕ ಪಾವತಿಸಬೇಕಾದ ತೊಂದರೆಯನ್ನು ಈ ಭಾಗದ ಜನರು ಅನುಭವಿಸುತ್ತಿದ್ದಾರೆ. ಸಾರ್ವಜನಿಕರಿಗೆ ಇಂತಹ ಅನ್ಯಾಯ ಎಸಗುವುದು ಸರಿಯಲ್ಲ. ಕಂಪನಿಯು ಪ್ರತ್ಯೇಕ ಸರ್ವೀಸ್ ರಸ್ತೆ ನಿರ್ಮಾಣ ಮಾಡಿಕೊಡುವುದು ಅಥವಾ ಟೋಲ್ ಸಂಗ್ರಹ ಕೇಂದ್ರವನ್ನ ಬೇರೆ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವುದು ಅಥವಾ ಸ್ಥಳೀಯ ವಾಹನಗಳಿಗೆ ಶುಲ್ಕ ರಹಿತ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು, ಈ ಸಮಸ್ಯೆಗೆ ಸೂಕ್ತ ಮಾರ್ಗೋಪಾಯವಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರ ದೇವರಾಜ್ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ-೧೩ ರ ಅಭಿವೃದ್ಧಿ ಕಾಮಗಾರಿಯನ್ನು ಜಿಎಂಆರ್ ಕಂಪನಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಟೋಲ್ ಸಂಗ್ರಹ ಕಾರ್ಯ ಮಾಡುತ್ತಿದೆ. ಹಿಟ್ನಾಳ್ ಬಳಿ ಟೋಲ್ ಸಂಗ್ರಹ ಕೇಂದ್ರ ಸ್ಥಾಪನೆಗೆ ಆಯ್ಕೆ ಮಾಡಿಕೊಂಡಿರುವ ಸ್ಥಳ ಸೂಕ್ತವಾಗಿಲ್ಲ ಎಂಬುದು ಮನವರಿಕೆಯಾಗಿದೆ. ಈ ಕುರಿತ ಸಮಗ್ರ ವರದಿಯನ್ನು ಹೆದ್ದಾರಿ ಪ್ರಾಧಿಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಿ, ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಎಂಆರ್ ಕಂಪನಿಯ ಜನರಲ್ ಮ್ಯಾನೇಜರ್ ಪಿ.ವಿ. ಚಲಪತಿರಾವ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕಂಪನಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಈಗಾಗಲೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಿ, ನಿಯಮಗಳಂತೆಯೇ ಟೋಲ್ ಸಂಗ್ರಹ ಕಾರ್ಯವನ್ನು ಪ್ರಾರಂಭಿಸಿದೆ. ಇಲ್ಲಿನ ಸ್ಥಳೀಯ ಸಮಸ್ಯೆಯನ್ನು ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ, ವಕೀಲ ಪೀರಾ ಹುಸೇನ್ ಹೊಸಳ್ಳಿ, ಪಂಪಾಪತಿ ಸೇರಿದಂತೆ ವಿವಿಧ ಗಣ್ಯರು, ಸಾರ್ವಜನಿಕರು ಈ ಸಂದರ್ಭದಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.
0 comments:
Post a Comment
Click to see the code!
To insert emoticon you must added at least one space before the code.