ಕೊಪ್ಪಳ ಮೇ.೨೯: ರಾಜ್ಯ ಸರ್ಕಾರವು ಪ್ರತಿ ವರ್ಷ ನೀಡುವ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ವಿವಿಧ ಪತ್ರಿಕಾ ಸಂಘಟನೆಗಳು ಹಾಗೂ ಮಾಧ್ಯಮ ಸಂಸ್ಥೆಗಳಿಂದ ಅರ್ಹ ಪತ್ರಕರ್ತರ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.
ಟೀಯೆಸ್ಸಾರ್ ಸ್ಮಾರಕ ಪ್ರಶಸ್ತಿಯನ್ನು ಕನ್ನಡ ಪತ್ರಿಕೋದ್ಯಮ ಕ್ಷೇತ್ರಕ್ಕೆ ಹಾಗೂ ಕನ್ನಡ ಭಾಷೆಗೆ ವಿಶಿಷ್ಟ ಕೊಡುಗೆ ನೀಡಿ, ಜೀವಮಾನದ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡಲಾಗುತ್ತದೆ. ಕನಿಷ್ಠ ಮೂವತ್ತು ವರ್ಷ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮ ಅಥವಾ ಈ ಎರಡೂ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ.
ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಾವುದೇ ಕನ್ನಡ ಪತ್ರಿಕೆಯನ್ನು ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಹಾಗೂ ಪ್ರವೃತ್ತಿಯಲ್ಲಿ ಪತ್ರಕರ್ತರಾಗಿ ವೃತ್ತಿಯಲ್ಲಿ ಪತ್ರಿಕಾ ಸಮೂಹದ ಮಾಲೀಕರಾಗಿ, ಆಡಳಿತಗಾರರಾಗಿ ಕನಿಷ್ಠ ೩೦ ವರ್ಷಗಳ ಅನುಭವ ಹೊಂದಿರುವವರನ್ನು ಪರಿಗಣಿಸಲಾಗುತ್ತದೆ.
ಭಾರತೀಯ ಪತ್ರಿಕಾ ಮಂಡಳಿಯಿಂದ ಛೀಮಾರಿ ಅಥವಾ ದಂಡ ಹಾಕಿಸಿಕೊಂಡಲ್ಲಿ, ಯಾವುದೇ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿದ್ದಲ್ಲಿ, ಅಂತಹ ಪತ್ರಕರ್ತರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ಮರಣೋತ್ತರ ಪ್ರಶಸ್ತಿ ಅವಕಾಶವಿರುವುದಿಲ್ಲ.
ಈ ಎರಡೂ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರ ಪರಿಚಯ, ಸಾಧನೆಯ ಮಾಹಿತಿಯನ್ನು ಶಿಫಾರಸು ಪತ್ರಗಳನ್ನು ಪತ್ರಿಕಾ ಸಂಘಟನೆಗಳು ಹಾಗೂ ಮಾಧ್ಯಮ ಸಂಸ್ಥೆಗಳು ನಿರ್ದೇಶಕರು, ವಾರ್ತಾ ಇಲಾಖೆ , ನಂ. ೧೭, ಭಗವಾನ್ ಮಹಾವೀರ ರಸ್ತೆ, ವಾರ್ತಾ ಸೌಧ, ಬೆಂಗಳೂರು-೫೬೦ ೦೦೧ ಇವರಿಗೆ ಜೂನ್ ೩, ೨೦೧೪ರೊಳಗಾಗಿ ಕಳುಹಿಸುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ
0 comments:
Post a Comment
Click to see the code!
To insert emoticon you must added at least one space before the code.