ಜಿಲ್ಲೆಯ ಯಾವುದೇ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ, ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ತಾಲೂಕಿನ ಪಿಆರ್‌ಇಡಿ ವಿಭಾಗದ ಸಹಾಯಕ ಇಂಜಿನಿಯರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಎಚ್ಚರಿಕೆ ನೀಡಿದರು.
೧೬೬ ಗ್ರಾಮಗಳ ಸಮಸ್ಯೆಗೆ ಪರಿಹಾರ : ಜಿಲ್ಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ತೊಂದರೆ ಸಂಭವಿಸಬಹುದಾದ ಒಟ್ಟು ೧೬೬ ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿ, ಕಾರ್ಯ ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಪೈಕಿ ಕೊಪ್ಪಳ- ೨೭, ಕುಷ್ಟಗಿ-೨೯, ಯಲಬುರ್ಗಾ-೩೫, ಗಂಗಾವತಿ-೨೧ ಹಾಗೂ ಕನಕಗಿರಿ ಕ್ಷೇತ್ರದಲ್ಲಿನ ೩೪ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗಳನ್ನು ಕೊಳವೆಬಾವಿ, ಫ್ಲಶಿಂಗ್ ಹೀಗೆ ವಿವಿಧ ವಿಧಾನಗಳ ಮೂಲಕ ಪರಿಹರಿಸಲಾಗಿದೆ. ಕೊಪ್ಪಳ ತಾಲೂಕಿನ ಬಿಕನಳ್ಳಿ ಗ್ರಾಮದಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಸಭೆಗೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವ ಕುಡಿಯುವ ನೀರಿನ ಘಟಕಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ಎರಡ್ಮೂರು ದಿನಗಳ ಒಳಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಕಂಡುಬರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದುರ್ಗಮ್ಮನ ಹಳ್ಳ ಸ್ವಚ್ಛಗೊಳಿಸಲು ನಿರ್ಧಾರ : ಗಂಗಾವತಿ ನಗರದಲ್ಲಿನ ದುರ್ಗಮ್ಮನ ಹಳ್ಳ ಹೂಳು ಹಾಗೂ ತ್ಯಾಜ್ಯದಿಂದ ತುಂಬಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ಇದೆ. ಸುಮಾರು ೨೫ ವರ್ಷಗಳಿಂದಲೂ ಈ ಹಳ್ಳ ಇದೇ ಸ್ಥಿತಿಯಲ್ಲಿಯೇ ಉಳಿದಿದೆ. ಇನ್ನಾದರೂ ಇದನ್ನು ಸ್ವಚ್ಛಗೊಳಿಸುವಂತಹ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಬೇಕಿದೆ. ಮಳೆಗಾಲ ಪ್ರಾರಂಭಕ್ಕೂ ಮುನ್ನ ಇದನ್ನು ಸ್ವಚ್ಛಗೊಳಿಸುವಂತಾಗಲು ಇನ್ನೊಂದು ವಾರದೊಳಗೆ ದುರ್ಗಮ್ಮನಹಳ್ಳ ಸ್ವಚ್ಛತೆಯ ಕಾಮಗಾರಿಯನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಗಂಗಾವತಿ ನಗರಸಭೆ ಪೌರಾಯುಕ್ತರಿಗೆ ಸಚಿವರು ಸೂಚನೆ ನೀಡಿದರು.
ಕೃಷಿ ಬೆಳೆ ಹಾನಿಗೆ ಪರಿಹಾರ : ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಮಳೆಗೆ ಕೃಷಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ಸರ್ಕಾರ ಈಗಾಗಲೆ ಪರಿಹಾರವನ್ನು ಬಿಡುಗಡೆ ಮಾಡಿದ್ದು, ಈಗಾಗಲೆ ನಷ್ಟ ಅನುಭವಿಸಿದ ರೈತರ ಪಟ್ಟಿ ಆಯಾ ತಾಲೂಕು ತಹಸಿಲ್ದಾರರ ಕಚೇರಿಯಲ್ಲಿ ಲಭ್ಯವಿದೆ. ಕೂಡಲೆ ನಿಯಮಾನುಸಾರ ಪರಿಹಾರ ಮೊತ್ತವನ್ನು ರೈತರಿಗೆ ಪಾವತಿಸಲು ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಸಚಿವರು ಸೂಚನೆ ನೀಡಿದರು. ಈ ಕುರಿತು ವಿವರಣೆ ನೀಡಿದ ಜಂಟಿಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್ ಅವರು, ಆಲಿಕಲ್ಲು ಮಳೆಯಿಂದ ಬೆಳೆ ಹಾನಿ ಅನುಭವಿಸಿದ ಜಿಲ್ಲೆಯ ಒಟ್ಟು ೧೬೩೭ ರೈತರಿಗೆ ಪರಿಹಾರ ನೀಡಬೇಕಿದೆ. ಕೊಪ್ಪಳ ತಾಲೂಕಿನಲ್ಲಿ ೧೯. ೮ ಹೆ. ಬೆಳೆಹಾನಿಯಾಗಿದ್ದು, ೮೯೦೦೦ ರೂ. ಪರಿಹಾರ ಬಂದಿದೆ. ಕುಷ್ಟಗಿ ತಾಲೂಕಿನಲ್ಲಿ ೮೪೩. ೫ ಹೆ. ಹಾನಿಗೆ ೩೭. ೯೬ ಲಕ್ಷ. ಯಲಬುರ್ಗಾ ತಾಲೂಕಿನಲ್ಲಿ ೩೦೨.೫ ಹೆ. ಹಾನಿಗೆ ೧೫. ೦೫ ಲಕ್ಷ ಮತ್ತು ಗಂಗಾವತಿ ತಾಲೂಕಿನಲ್ಲಿ ೩. ೪ ಹೆ. ಹಾನಿಗೆ ೩೧೦೦೦ ರೂ.ಗಳ ಪರಿಹಾರ ಮೊತ್ತ ವಿತರಿಸಬೇಕಿದೆ ಎಂದು ವಿವರ ನೀಡಿದರು.
ಇಲಾಖಾವಾರು ಕಡತ ವಿಲೇವಾರಿ ಪರಿಶೀಲನೆ : ಜಿಲ್ಲೆಯಲ್ಲಿ ಕಂದಾಯ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಡತಗಳ ವಿಲೇವಾರಿಯಲ್ಲಿ ಬಹಳಷ್ಟು ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಇದರಿಂದಾಗಿ ವಿವಿಧ ಯೋಜನೆಗಳ ಜಾರಿಯೂ ಸೇರಿದಂತೆ ಸಾರ್ವಜನಿಕರ ಕೆಲಸ ಕಾರ್ಯಗಳೂ ವಿನಾಕಾರಣ ವಿಳಂಬವಾಗುತ್ತಿವೆ. ಯಾವುದೇ ತಹಸಿಲ್ದಾರರ ಕಚೇರಿಯನ್ನು ನೋಡಿದರೂ, ನಿತ್ಯವೂ ನೂರಾರು ಜನ ಗುಂಪು ಗುಂಪಾಗಿ ಅಲೆದಾಡುವುದನ್ನು ಕಾಣಬಹುದಾಗಿದೆ. ತಹಸಿಲ್ದಾರರ ಕಚೇರಿಗಳಲ್ಲಿ ಪ್ರತಿಯೊಂದು ಸಣ್ಣ ಕೆಲಸಕ್ಕೂ ಏಜೆಂಟರುಗಳು ಸೃಷ್ಟಿಯಾಗುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳೂ ಆಕಸ್ಮಿಕವಾಗಿ ತಹಸಿಲ್ದಾರರ ಕಚೇರಿಗೆ ಭೇಟಿ ನೀಡಿ, ಅಲ್ಲಿನ ಸಾರ್ವಜನಿಕರೊಂದಿಗೆ ವಿಚಾರಣೆ ನಡೆಸಿದಲ್ಲಿ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಲಿದೆ. ಮಳೆಗಾಲ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಯಾವುದೇ ಗ್ರಾಮದಲ್ಲಿ ಗಾಳಿ, ಮಳೆಯಿಂದ ಯಾವುದೇ ನಷ್ಟ ಸಂಭವಿಸಿದಲ್ಲಿ, ಸಂಬಂಧಪಟ್ಟ ತಹಸಿಲ್ದಾರರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರಾಜ್ಯದ ಸಚಿವಾಲಯಗಳಲ್ಲಿ ಪ್ರತಿ ತಿಂಗಳು ಕಡತ ವಿಲೇವಾರಿಯ ಬಗ್ಗೆ ನಡೆಸುವ ಪ್ರಗತಿ ಪರಿಶೀಲನೆಯ ಮಾದರಿಯಲ್ಲಿ, ಜಿಲ್ಲೆಯಲ್ಲಿಯೂ ಪ್ರತಿ ತಿಂಗಳು ಇಲಾಖಾವಾರು, ಕಡತ ವಿಲೇವಾರಿಯ ಬಗ್ಗೆ ಪ್ರತ್ಯೇಕ ಸಭೆ ನಡೆಸಿ, ಪ್ರಗತಿ ಪರಿಶೀಲನೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಸಹಾಯಕ ಆಯುಕ್ತ ಪಿ.ಎಸ್. ಮಂಜುನಾಥ್, ಪಂಚಾಯತಿ ರಾಜ್ ಇಂಜಿನಿರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸೇರಿದಂತೆ ವಿವಿಧ ತಾಲೂಕುಗಳ ಸಹಾಯಕ ಇಂಜಿನಿಯರ್‌ಗಳು, ನಗರಸಭೆಗಳ ಪೌರಾಯುಕ್ತರು, ಪುರಸಭೆಗಳ ಮುಖ್ಯಾಧಿಕಾರಿಗಳು, ತಹಸಿಲ್ದಾರರು ಭಾಗವಹಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.