PLEASE LOGIN TO KANNADANET.COM FOR REGULAR NEWS-UPDATES

 ಶಹಬ್ಬಾಸ್... ಅಬ್ಬಾ... ಶವಾಗಾರ

       ‘ನಾನು ಕೊಡೋ ಒದೆಗೂ, ನನ್ನ ಹೈಟ್‌ಗೂ ಸಂಬಂಧಾನೇ ಇಲ್ಲ’ ಎಂದು ಹೇಳುವ ಮೂಲಕ ಎದುರಾಳಿಗಳ ಮೇಲೆ ಮುಗಿ ಬೀಳುವ ದುನಿಯಾ ವಿಜಯ್, ಶಿವಾಜಿನಗರವನ್ನು ಅಕ್ಷರಶಃ ಶವಾಗಾರ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಮಾಸ್ ಆಡಿಯನ್ಸ್ ಗಮನದಲ್ಲಿಟ್ಟಿಕೊಂಡು ಜೊತೆಗೆ ಕೌಟುಂಬಿಕ ವರ್ಗದವರನ್ನು ನಿರ್ಲಕ್ಷ್ಯ ಮಾಡದೇ ಕಥೆ ಹೆಣೆಯಲಾಗಿದೆ. ಆದರೂ ಫೈಟ್‌ಪ್ರಿಯರಿಗೆ ಶಿವಾಜಿನಗರ ಫುಲ್ ಮೀಲ್ಸ್ ಕೊಟ್ಟಿದೆ. 
       ಹೆಸರು ರಾಮ್. ಆದರೂ ಕೋಪದ ಕಣ್ಣು ತೆರೆದರೆ ರಾವಣನನ್ನೇ ಸುಟ್ಟು ಹಾಕುವ ರಾಕ್ಷಸ. ಎರಡು ಸಂಸಾರ ಸಾಗಿಸುವ ಅಪ್ಪ ೧೫ ದಿನಗಳಿಗೊಮ್ಮೆ ಮನೆಗೆ ಬಂದಾಗ, ಅಪ್ಪನ ಮೇಲಿನ ಸಿಟ್ಟನ್ನು ಚೆಂಡಿನ ಮೇಲೆ ತೋರಿಸುವ ರಾಮ್, ತಾಯಿಯೊಂದಿಗೆ ಹಣ್ಣು ತರಲು ಮಾರುಕಟ್ಟೆಗೆ ಹೋದಾಗ ಅಮ್ಮನನ್ನು ಚುಡಾಯಿಸುವ ಪಡ್ಡೆಗಳಿಗೆ ಚಿಕ್ಕವಯಸ್ಸಿನಲ್ಲೇ ಸೋಡಾ ಬಾಟಲಿಯಿಂದ ಹೊಡೆದು ನಾನು ಕೊಡೋ ಒದೆಗೂ ನನ್ನ ಹೈಟ್‌ಗೂ ಸಂಬಂಧಾನೇ ಇಲ್ಲ ಎನ್ನುತ್ತಾ ದೊಡ್ಡವನಾಗಿ ಬೆಳೆದಾತ.
      ನೋಡನೋಡುತ್ತಿದ್ದಂತೆ ಅಕ್ಕನ ಮದುವೆ. ಅಮ್ಮನಿಗಿಂತಲೂ ಮಾಮನನ್ನೇ ಹೆಚ್ಚು ಪ್ರೀತಿಸುವ ಅಕ್ಕನ ಮಕ್ಕಳು. ಕೆಲಸದ ನಿಮಿತ್ಯ ರಾಮ್‌ನ ಭಾವ ವಿದೇಶ ಪ್ರಯಾಣ. ಹಲವು ದಿನ ಕಳೆದರೂ ಅಪ್ಪ ಮನೆಗೆ ಬಾರದಿರುವುದು. ಇದನ್ನು ಮನಸಿಗೆ ಹಚ್ಚಿಕೊಂಡ ಅಮ್ಮ ಹಾಸಿಗೆ ಹಿಡಿಯುವುದು. ಹೀಗಾಗಿ ಕೊನೆಗೂ ಚಿಕ್ಕಂದಿನಿಂದಲೂ ದ್ವೇಷಿಸುತ್ತಾ ಬಂದಿರುವ ಅಪ್ಪನನ್ನು ಕರೆತರಲು ಶಿವಾಜಿನಗರದ ದೊಡ್ಡಮ್ಮನ ಮನೆಗೆ ತಾನೇ ಹೋಗುವ ರಾಮ್, ಮನೆಯೊಳಗೆ ಕಾಲಿಡದೇ, ಬೀದಿಯಲ್ಲೇ ಅಪ್ಪನನ್ನು ಹಿಗ್ಗಾಮುಗ್ಗಾ ಭೈಯುತ್ತಾನೆ. ಅಪ್ಪನ ಮೌನದಿಂದ ಕೋಪಗೊಂಡು ಎದೆ ಮೇಲೆ ಕೈ ಹಾಕುತ್ತಿದ್ದಂತೆ ಶಾಕ್... ಮನೆಯೊಳಗೆ ದೊಡ್ಡಮ್ಮನ ಶವವಿದೆ.
      ದೊಡ್ಡಮ್ಮನಿಗೆ ಮಕ್ಕಳಿಲ್ಲದ ಕಾರಣ, ರಾಮ್‌ನೇ ಅಂತಿಮ ಸಂಸ್ಕಾರ ನಡೆಸುತ್ತಾನೆ. ಎರಡು ಮನೆಗಳು ಒಂದಾಗುತ್ತವೆ. ಬಸವನಗುಡಿಯ ಬಾಡಿಗೆ ಮನೆ ಬಿಟ್ಟು ಎಲ್ಲರೂ ಶಿವಾಜಿನಗರದ ಸ್ವಂತ ಮನೆಗೆ ಬರುತ್ತಾರೆ. ತಮ್ಮ ಮನೆಯಲ್ಲಿಯೇ ಬಾಡಿಗೆ ಇರುವ ಪೂಜಾರಿಯ ಮಗಳು ಪವಿತ್ರಾ ಕೂಡಾ ರಾಮ್‌ನ ದಂಡನೆಗೆ, ಮಾತಿಗೆ, ಮರುಳಾಗಿ ಪ್ರೀತಿ ಕೋರುತ್ತಾಳೆ. ಎಲ್ಲವೂ ನೆಮ್ಮದಿ ಎನ್ನುವಷ್ಟರಲ್ಲಿ ಅಪ್ಪ, "ಮೊದಲು ಈ ಊರು ಬಿಟ್ಟು ಹೋಗು" ಎಂದು ರಾಮ್‌ನನ್ನು ಹೊರಗಡೆ ತರುತ್ತಿದ್ದಂತೆ ದೊಡ್ಡ ಗ್ಯಾಂಗ್ ಆಗಮನ. ರಾಮ್‌ನ ರೌದ್ರಾವತಾರಕ್ಕೆ ಕತ್ತಿ, ಮಚ್ಚುಗಳ ಮೊನಚು ಗ್ಯಾಂಗ್‌ನ ಹತ್ತಾರು ಹುಡುಗರ ಕುತ್ತಿಗೆ, ಹೊಟ್ಟೆ, ಬೆನ್ನು ಸೀಳುತ್ತದೆ. ಹೀಗ್ಯಾಕಾಯ್ತು ಎನ್ನುವ ಕತೆ ವಿರಾಮದ ನಂತರ ತೆರೆದುಕೊಳ್ಳುತ್ತದೆ.
       ಅಪ್ಪನಿಗೆ ಎರಡು ಮನೆ ಮೇಂಟೇನ್ ಮಾಡುವುದರ ಜೊತೆಗೆ ಇಸ್ಟೀಟ್‌ನ ಶೋಕಿ ಬೇರೆ. ಆಟದಲ್ಲಿ ಸೋತು ಮನೆಯ ಮೇಲೆ ಫಯಾಜ್‌ನಿಂದ ೨ ಲಕ್ಷ ರು. ಸಾಲ ಪಡೆದಿರುತ್ತಾನೆ. ಆ ಹಣವನ್ನೂ ಸೋತು ಮನೆಗೆ ಬಂದು ಸುಮಾರು ದಿನಗಳಾದರೂ ಮಾಡಿದ ಸಾಲ ತೀರಿಸಲಾಗುವುದಿಲ್ಲ. ಬಡ್ಡಿ ಸೇರಿ ಕೊಡಬೇಕಾದ ಮೊತ್ತ ೨೫ ಲಕ್ಷ ರೂ ಆದಾಗ ಅಪ್ಪ ತಲೆಮರೆಸಿಕೊಂಡು ಓಡಾಡುತ್ತಾನೆ. ಕೊನೆಗೆ ಪಯಾಜ್‌ನ ಹುಡುಗನೊಬ್ಬ ರಾಮ್‌ನ ಕಣ್ಮುಂದೆಯೇ ಅಪ್ಪನ ಮೇಲೆ ಕೈ ಮಾಡಿದ್ದಕ್ಕೆ ಆ ಹುಡುಗನ ಕೈ ಕಾಲು ರೀಪೇರಿ ಮಾಡಿ ಕಳಿಸಿರುತ್ತಾನೆ ರಾಮ್.
      ಅದರ ಪರಿಣಾಮ ರಾಮ್‌ನಿಗೆ ಮನೆ ಬಿಟ್ಟು ಹೋಗುವಂತೆ ಅಪ್ಪ ಬೇಡಿಕೊಳ್ಳುತ್ತಾನೆ. ಯಾಕೆಂದರೆ ಫಯಾಜ್ ದೊಡ್ಡ ಡಾನ್. ಅವನಿಗೆ ಇಡೀ ಶಿವಾಜಿನಗರವೇ ಒತ್ತೆ ಬಿದ್ದಿರುತ್ತೆ. ರಾಮ್‌ನ ಕೈ ರಕ್ತಸಿಕ್ತಗೊಂಡಿದ್ದನ್ನು ಕಂಡ ಪವಿತ್ರಳ ತಂದೆ ಪೂಜಾರಿಗೆ, ಮಗಳ ಪ್ರೀತಿ ವಿಷಯ ಗೊತ್ತಾಗಿ ಬೇರೆ ಊರಿಗೆ ಪಯಣ ಬೆಳೆಸುತ್ತಾನೆ. ಅಲ್ಲಿಗೆ ಹತ್ತಿರ ಇದ್ದವರೆಲ್ಲ ದೂರವಾಗುತ್ತಿದ್ದಾರೆ ಎನ್ನುವ ಭಾವ ರಾಮ್‌ನದ್ದು. ಅದೊಂದಿನ ಅಪ್ಪನೂ ನೇಣಿಗೆ ಶರಣಾಗುತ್ತಾನೆ. ಅಲ್ಲಿಗೆ ಬರುವ ಫಯಾಜ್, ಶವದ ಹೆಬ್ಬೆರಳಿನಿಂದ ಮನೆಯ ಅಸ್ತಿ ಪತ್ರಕ್ಕೆ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಾನೆ. ಜೊತೆಗೆ "ನಿಮ್ಮಪ್ಪನನ್ನು ಮಣ್ಣು ಮಾಡಿ ನೀವು ಎಲ್ಲಾದರೂ ಮಣ್ಣಾಗಿ ಹೋಗಿ" ಎಂದು ಮನೆಯ ಸಾಮಾನುಗಳನ್ನು ಹೊರಗೆ ಎಸೆಯುತ್ತಾನೆ. ಶವಸಂಸ್ಕಾರದವರೆಗೂ ಮೌನವಾಗಿರುವ ರಾಮ್, ಅದು ಮುಗಿಯುತ್ತಿದ್ದಂತೆ ಫಯಾಜ್ ಇದ್ದಲ್ಲಿಗೆ ಹೋಗಿ ನಡುಬೀದಿಯಲ್ಲಿ ಫಯಾಜ್‌ನ ಹೆಣ ಕೆಡವುತ್ತಾನೆ. ಮನೆ ತೆರವುಗೊಳಿಸುತ್ತಿರುವ ಫಯಾಜ್‌ನ ಭಂಟರ ಹೆಡಮುರಿ ಕಟ್ಟುತ್ತಾನೆ. ಮನೆಯ ಬೀಗ ಒಡೆದು, ಟೆರಸ್ ಮೇಲೆ ನಿಂತು ನನ್ನ ಬದುಕು ಹಿಂಗ್ಯಾಕಾಯ್ತು ಎನ್ನುವ ಫ್ಲ್ಯಾಶ್‌ಬ್ಯಾಕ್ ಮೂಲಕ ನೋಡುಗರಿಗೆ ಕಥೆ ಹೇಳುತ್ತಾನೆ.
      ಫಯಾಜ್‌ನ ಮಗ ಮುಂಬೈನ ದೊಡ್ಡ ಡಾನ್. ಅಪ್ಪನ ಸಾವಿನ ಸುದ್ದಿ ತಿಳಿದು ಬೆಂಗಳೂರಿಗೆ ಬರುವಾಗ, ಅಪ್ಪನಿಂದ ಸಹಾಯ ಪಡೆದು ಜನಪ್ರತಿನಿಧಿಯಾಗಿರುವ ಒಬ್ಬಾಕೆ, ಸುದ್ದಿವಾಹಿನಿಯೊಂದರಲ್ಲಿ ಅಪ್ಪನ ವಿರುದ್ಧವೇ ಮಾತಾಡುತ್ತಿರುವಾಗ ಸ್ಟುಡಿಯೋಗೆ ಭಂಟರನ್ನು ಕಳಿಸಿ ಗುಂಡು ಹಾರಿಸುವಷ್ಟು ಗಂಡೆದೆ ಫಯಾಜ್‌ನ ಮಗ ಅಲಿಯದ್ದು.
      ಅಲಿಗೆ ರಾಮ್‌ನ ತಲೆ ಬೇಕು. ಅದಕ್ಕೆ ಎಷ್ಟು ತಲೆಗಳನ್ನು ಹೊಡೆದುರುಳಿಸಲೂ ಅಲಿ ಸಿದ್ಧ. ಪೋಲೀಸ್ ಅಧಿಕಾರಿಗಳಾದರೂ ಸರಿ. ಕೊನೆಗೂ ರಾಮ್‌ನ ಅಕ್ಕನ ಮಗನನ್ನು ಬಲಿ ತೆಗೆದುಕೊಳ್ಳುವ ಅಲಿಯ ವಿರುದ್ಧ ಸಿಡಿದೇಳುವ ರಾಮ್, ಎಲ್ಲ ವೈರಿಗಳನ್ನು ಸಂಹಾರ ಮಾಡುವಲ್ಲಿಗೆ ಕಥೆಗೆ ಪೂರ್ಣ ವಿರಾಮ.
        ಪಾತ್ರ ಪೋಷಣೆ ಎಲ್ಲೂ ಬೋರಾಗದು. ಭಾವನ ಪಾತ್ರಕ್ಕೆ ಇನ್ನಷ್ಟೂ ಮೈಲೇಜ್ ಬೇಕಿತ್ತು ಎನಿಸುತ್ತದೆ. ಅವಿನಾಶ್. ಸುಮಿತ್ರ, ಆಶೀಷ್ ವಿದ್ಯಾರ್ಥಿ ಸೇರಿದಂತೆ ಪ್ರಮುಖ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪಾರುಲ್ ಯಾದವ್ ಹಾಡಿನಲ್ಲಷ್ಟೇ ಅಲ್ಲ, ನಟನೆಯಲ್ಲೂ ಮೋಡಿ ಮಾಡಿದ್ದಾರೆ. ಇಡೀ ಚಿತ್ರವನ್ನು ವಿಜಯ್ ಹೆಗಲ ಮೇಲೆ ಹೊತ್ತುಕೊಂಡು ಸಾಗಿದ್ದಾರೆ. "ಬದ್ಕಕ್ಕೆ ಧಮ್ ಇರ‍್ಬೇಕು" ಎನ್ನುವ ಅಡಿಬರಹ ಚಿತ್ರಕ್ಕೆ ಪೂರಕವಾಗಿದೆ. ಎಂ.ಸೇಲ್ವಂ ಛಾಯಾಗ್ರಹಣ ಚಿತ್ರವನ್ನು ಮತ್ತಷ್ಟೂ ಪರಿಣಾಮಕಾರಿ ಮಾಡಿದೆ. ಜೆಸ್ಸಿಗಿಫ್ಟ್ ಸಂಗೀತದಲ್ಲಿ ಎರಡು ಹಾಡುಗಳು ನೋಡುವಂತಿವೆ, ಒಂದು ಹಾಡು ಕೇಳುವಂತಿದೆ. ಅರ್ಜುನ್ಯ ಜನ್ಯ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ರವಿ ಶ್ರೀವತ್ಸ ಸಂಭಾಷಣೆಯಲ್ಲಿ ಇನ್ನಷ್ಟೂ ಜೋಶ್ ಬೇಕಿತ್ತು ಎನಿಸುತ್ತದೆ. ಬಹಳ ದಿನಗಳ ನಂತರ ಪಿ.ಎನ್.ಸತ್ಯ ಒಂದೊಳ್ಳೆ ಕಥೆಯನ್ನು ಚಿತ್ರವನ್ನಾಗಿಸಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಮಾಸ್‌ಗೆ ಪ್ರಾಧಾನ್ಯತೆ ಇದ್ದರೂ ಕೌಟುಂಬಿಕ ಹಿನ್ನೆಲೆಯ ಕಥೆ ಇದಾಗಿದೆ. ಹೆಣಗಳ ರಾಶಿ ಉರುಳಿಸುವ ದೃಶ್ಯಗಳು ಬಂದಾಗ ಕಣ್ಮುಚ್ಚಿಕೊಂಡರೆ ಕುಟುಂಬವೂ ಶಿವಾಜಿನಗರವನ್ನು ನೋಡಬಹುದು. ರಾಮು ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಈ ಬಾರಿ ಒಂದು ಗಟ್ಟಿ ಕಥೆಯ ಮೂಲಕ ಕಾರುಗಳನ್ನು ಪುಡಿ ಪುಡಿ ಮಾಡಿದ್ದಾರೆ.
       ದುನಿಯಾ ವಿಜಯ್ ಅಭಿಮಾನಿಗಳಂತೂ ಶಿವಾಜಿನಗರವನ್ನು ಹಬ್ಬದಂತೆ ಕಂಡರೆ, ಉಳಿದವರಿಗೂ ಚಿತ್ರ ಮೆಚ್ಚುಗೆಯಾಗುತ್ತೆ. ಎಲ್ಲೂ ಬೋರ್ ಆಗದಂತೆ ನಿರೂಪಿಸಿರುವುದು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಕೊಟ್ಟ ಹಣಕ್ಕಂತೂ ಮೋಸ ಮಾಡುವುದಿಲ್ಲ ಶಿವಾಜಿನಗರ.

-ಚಿತ್ರಪ್ರಿಯ ಸಂಭ್ರಮ್.

ಫಲಿತಾಂಶ : ೧೦೦/೭೦
---------------------------     
        

27 Feb 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top