ರಾಜ್ಯದ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕೇತರ ಸಿಬ್ಬಂದಿಗಳ ಭರ್ತಿಗೆ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಹೇಳಿದರು.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ವರ್ಷ ಒಟ್ಟು ೨೯೦೦ ಶಿಕ್ಷಕರು ವಯೋ ನಿವೃತ್ತಿ ಹೊಂದಲಿದ್ದು, ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಶಿಕ್ಷಕರು ನಿವೃತ್ತಿಯಾಗುವುದರಿಂದ, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎನ್ನುವ ಸದುದ್ದೇಶ ಇಟ್ಟುಕೊಂಡು, ಇಂತಹ ಶಿಕ್ಷಕರ ಸೇವೆಯನ್ನು ೨೦೧೪ ರ ಮಾರ್ಚ್ ೩೧ ರವರೆಗೆ ವಿಸ್ತರಿಸಲಾಗಿದೆ. ಕೊಪ್ಪಳ ಜಿಲ್ಲೆಯ ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯಾಗಿದ್ದು, ೧೬ನೇ ಸ್ಥಾನ ಪಡೆದುಕೊಂಡಿದೆ. ಯಾವುದೇ ಕಾರಣಕ್ಕೂ ನಕಲು ಮಾಡುವುದನ್ನು ಪ್ರೋತ್ಸಾಹಿಸಿ, ಫಲಿತಾಂಶದ ಮಟ್ಟ ಸುಧಾರಣೆ ಮಾಡುವ ಅಗತ್ಯವಿಲ್ಲ. ಇದರಿಂದ ಶಿಕ್ಷಣದ ಗುಣಮಟ್ಟ ಕುಸಿಯಲಿದ್ದು, ಬೋಧನೆಯ ಗುಣಮಟ್ಟ ಉತ್ತಮಗೊಳಿಸಬೇಕು. ಅದೇ ರೀತಿ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಿ, ಫಲಿತಾಂಶದ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದರು.
ಕಳೆದ ೧೦ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ೧ನೇ ತರಗತಿಯಲ್ಲಿ ದಾಖಲಾದ ಮಕ್ಕಳ ಸಂಖ್ಯೆ, ೦೭ ವರ್ಷಗಳ ನಂತರ ೦೭ನೇ ತರಗತಿಗೆ ದಾಖಲಾದ ಒಟ್ಟು ಮಕ್ಕಳ ಸಂಖ್ಯೆ ಹಾಗೂ ೧೦ ವರ್ಷಗಳ ನಂತರ ಎಸ್‌ಎಸ್‌ಎಲ್‌ಸಿ ತರಗತಿಗೆ ದಾಖಲಾದ ಒಟ್ಟು ಮಕ್ಕಳ ಸಂಖ್ಯೆ, ಅದರಲ್ಲಿ ಪ್ರಾಥಮಿಕ ಹಂತದಿಂದ ಪ್ರೌಢ ಶಿಕ್ಷಣ ಹಂತದವರೆಗೆ ಬಿಟ್ಟು ಹೋದ ಮಕ್ಕಳ ಸಂಖ್ಯೆಯ ಸಮಗ್ರ ವಿವರವನ್ನು ಸಿದ್ಧಪಡಿಸಿ ಸಲ್ಲಿಸಬೇಕು. ಆಟದ ಮೈದಾನ ಇಲ್ಲದೆ ಇರುವಂತಹ ಶಾಲೆಗಳ ಪ್ರಾರಂಭಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಅದೇ ರೀತಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯ ಇಲ್ಲದೆ ಇರುವ ಶಾಲೆಗಳ ವಿವರ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ವಿವರವಾದ ವರದಿಯನ್ನು ಕೂಡಲೆ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಅವರಿಗೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಸೂಚನೆ ನೀಡಿದರು.
ಡಿಡಿಪಿಐ ಜಿ.ಹೆಚ್. ವೀರಣ್ಣ ಅವರು ಜಿಲ್ಲೆಯಲ್ಲಿನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಸ್ಥಿತಿ-ಗತಿಗಳ ಕುರಿತು ಸಭೆಗೆ ವಿವರಣೆ ನೀಡಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಾನಂದ ಕಡಪಟ್ಟಿ ಅವರು ಕಾಲೇಜು ಶಿಕ್ಷಣಕ್ಕೆ ಸಂಬಂಧಿಸಿದ ವಿವರಗಳನ್ನು ನೀಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು. ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆ ಇನ್ನಷ್ಟು ಉತ್ತಮ ಸಾಧನೆ ಮಾಡುವ ಅಗತ್ಯವಿದೆ ಎಂದರು. ಪ್ರಾಚಾರ್ಯರ ಸಂಘದ ಅಧ್ಯಕ್ಷ ಹಾಗೂ ಕೊಪ್ಪಳದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ವಿ.ಬಿ. ರಡ್ಡೇರ್ ಅವರು ಮಾತನಾಡಿ, ರಾಜ್ಯದಲ್ಲಿ ಪ.ಪೂ. ಕಾಲೇಜು ಹಾಗೂ ಸಂಯುಕ್ತ ಪ.ಪೂ. ಕಾಲೇಜುಗಳಲ್ಲಿನ ಪ್ರಾಚಾರ್ಯರು ಮತ್ತು ಉಪಪ್ರಾಚಾರ್ಯರಿಗೆ ಸಂಬಂಧಿಸಿದಂತೆ ಇರುವ ಆಡಳಿತಾತ್ಮಕ ತೊಂದರೆಗಳನ್ನು ನಿವಾರಿಸುವಂತೆ ಹಾಗೂ ಕಾಲೇಜಿಗೆ ಹೆಚ್ಚಿನ ಕೊಠಡಿ ಮತ್ತು ಸೌಲಭ್ಯ ಒದಗಿಸುವಂತೆ ಮನವಿ ಮಾಡಿದರು.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಜಿ.ಪಂ. ಅಧ್ಯಕ್ಷ ಜನಾರ್ಧನ ಹುಲಿಗಿ, ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.