PLEASE LOGIN TO KANNADANET.COM FOR REGULAR NEWS-UPDATES

ಕೃಪೆ : ಕನ್ನಡಪ್ರಭ ವಾರ್ತೆ , 

ವೈದ್ಯಕೀಯ ರಂಗದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದೇವೆ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತಿರುವಾಗಲೇ ಸೂಕ್ತ ಚಿಕಿತ್ಸೆ ದೊರಕದೆ ಮೂರು ತಿಂಗಳ ಅವಧಿಯಲ್ಲಿ 173 ಶಿಶುಗಳು ಮೃತಪಟ್ಟಿವೆ. ಅಂದರೆ, ಪ್ರತಿದಿನ ಸರಾಸರಿ ಎರಡು ಶಿಶುಗಳ ಸಾವು!
ಇಂಥದೊಂದು ಆಘಾತಕಾರಿ ಅಂಶ ಹೊರ ಬಿದ್ದಿದ್ದು ಕೊಪ್ಪಳ ಜಿಲ್ಲೆಯಲ್ಲಿ. ಇದು ಯಾರೋ ಮಾಡಿದ ಆರೋಪ ಅಲ್ಲ. ಸರ್ಕಾರದ ಅಂಗವೇ ಆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ವರದಿಯಲ್ಲಿ ಈ ಮಾಹಿತಿ ಅಡಕವಾಗಿದೆ. ಇನ್ನೊಂದು ವಿಷಾದದ ಅಂಶವೆಂದರೆ ಮೂರು ತಿಂಗಳ ಅವಧಿಯಲ್ಲಿ 8 ತಾಯಂದಿರೂ ಮರಣವಪ್ಪಿದ್ದಾರೆ.
ಇಂಥ ಗಂಭೀರ ವಿಷಯ ಬುಧವಾರ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪವಾದಾಗ ಸ್ವತಃ ಜಿಲ್ಲಾಧಿಕಾರಿ ಮೋಹನ್‌ರಾಜ್ ಬೆಚ್ಚಿ ಬಿದ್ದರೆ, ಸಂಸದ ಶಿವರಾಮಗೌಡ ಆತಂಕ ವ್ಯಕ್ತಪಡಿಸಿದ್ದಾರೆ. ದುರಂತವೆಂದರೆ ಕೇವಲ 5ರಿಂದ 6 ನಿಮಿಷ ಮಾತ್ರ ಚರ್ಚೆ ಮಾಡಿ ಶಿಶು ಹಾಗೂ ತಾಯಿ ಮರಣ ವಿಷಯವನ್ನು ಅಲ್ಲಿಗೇ ಕೈ ಬಿಟ್ಟಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹದೇವಸ್ವಾಮಿ ಅವರನ್ನು 'ಕನ್ನಡಪ್ರಭ' ಮಾತನಾಡಿಸಿದಾಗ, 'ಜಿಲ್ಲಾದ್ಯಂತ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಸರಿಯಾದ ಚಿಕಿತ್ಸೆ ಮತ್ತು ಸುರಕ್ಷೆ ನೀಡಲು ಸಾಧ್ಯವಾಗಿಲ್ಲ. ಆದರೂ ರಾಷ್ಟ್ರೀಯ ಅಂಕಿ, ಸಂಖ್ಯೆಗೆ ಹೋಲಿಸಿದರೆ ಮರಣ ಪ್ರಮಾಣ ಕಡಿಮೆ ಇದೆ' ಎಂದು ಹೇಳಿದ್ದಾರೆ.                     
ಯಾವಾಗ? ಎಷ್ಟೆಷ್ಟು?: ಏಪ್ರಿಲ್‌ನಿಂದ ಜೂನ್ ನಡುವಿನ ಮೂರು ತಿಂಗಳ ಅವಧಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 173 ಶಿಶುಗಳ ಸಾವನ್ನಪ್ಪಿದ್ದರೆ, 8 ತಾಯಿಯಂದಿರು ಮರಣ ಹೊಂದಿದ್ದಾರೆ. ಅದರಲ್ಲೂ ಗಂಗಾವತಿ ತಾಲೂಕಿನಲ್ಲಿ 61, ಕುಷ್ಟಗಿಯಲ್ಲಿ 40, ಕೊಪ್ಪಳದಲ್ಲಿ 39 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 33 ಶಿಶುಗಳು ಸಾವನ್ನಪ್ಪಿವೆ. ಗಂಗಾವತಿ ತಾಲೂಕಿನಲ್ಲಿಯೇ ಅತ್ಯಧಿಕ ಶಿಶುಗಳು ಮರಣ ಹೊಂದುತ್ತಿವೆ. 173 ಶಿಶುಗಳ ಪೈಕಿ ಪರಿಶಿಷ್ಟ ಜಾತಿಯ 46 ಹಾಗೂ ಪರಿಶಿಷ್ಟ ಪಂಗಡದ 15 ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದವರ 112 ಶಿಶುಗಳಿವೆ.
ಕಾರಣ ಏನು?
ಇದಕ್ಕೆ ಪ್ರಮುಖ ಕಾರಣ ಕೊಪ್ಪಳ ಜಿಲ್ಲೆಯ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ. ಅದರಲ್ಲೂ ಗ್ರಾಮೀಣ ಪ್ರದೇಶದ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ. ನಗರ ಪ್ರದೇಶದ ಆಸ್ಪತ್ರೆಯಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಶೇ.50ರಿಂದ 60ರಷ್ಟು ವೈದ್ಯರ ಕೊರತೆಯಿದ್ದರೆ, ಕೆಲವರು ದೀರ್ಘಾವಧಿ ರಜೆ ಮೇಲೆ ಹೋಗಿದ್ದಾರೆ. ಎಲ್ಲ ಆಸ್ಪತ್ರೆಗಳು ವೈದ್ಯರಿಲ್ಲದೆ ಕಾಂಪೌಂಡರ್, ನರ್ಸ್‌ಗಳ ಮೇಲೆ ನಡೆಯುತ್ತವೆ. ಹೀಗಾಗಿ, ಗ್ರಾಮೀಣ ಪ್ರದೇಶದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಆಸ್ಪತ್ರೆಗೆ ಬಂದರೂ ಅಲ್ಲಿ ಸೂಕ್ತ ಚಿಕಿತ್ಸೆ ಸಿಗುವುದಿಲ್ಲ. ಮತ್ತೊಂದು ಆಸ್ಪತ್ರೆಗೆ ಸಾಗಿಸುವುದು ಅನಿವಾರ್ಯತೆ ಇದೆ. ಬೇರೆ ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲಿಯೇ ಸಾವನಪ್ಪುತ್ತಿದ್ದಾರೆ. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹದೇವಸ್ವಾಮಿ ಅವರೇ ವೈದ್ಯರ ಕೊರತೆಯಿಂದಲೇ ಹೀಗಾಗುತ್ತಿದೆ ಎಂದು ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿಯೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ ಆದ ಶಿಶುಗಳ ಮರಣ
ಕೊಪ್ಪಳ     39
ಗಂಗಾವತಿ   61
ಕುಷ್ಟಗಿ       40
ಯಲಬುರ್ಗಾ  33
ಒಟ್ಟು    173
ಕೊಪ್ಪಳದಲ್ಲಿ ಮಾತ್ರವಲ್ಲ ಎಲ್ಲ ಕಡೆಯೂ ವೈದ್ಯರ ಸಮಸ್ಯೆ ಇದೆ. ಹೀಗಿರುವಾಗ ಇಲ್ಲಿ ಯಾಕೆ ಇಷ್ಟೊಂದು ಶಿಶುಗಳು ಮರಣ ಹೊಂದುತ್ತಿವೆ? ಇದು ಕಳವಳಕಾರಿ ಅಂಶವೇ ಸರಿ.
- ಮೋಹನ್‌ರಾಜ್, ಕೊಪ್ಪಳ ಜಿಲ್ಲಾಧಿಕಾರಿ
ಇದೊಂದು ಆತಂಕಕಾರಿ ವಿಷಯ. ಇಷ್ಟು ದೊಡ್ಡ ಪ್ರಮಾಣದಲ್ಲಿ ಶಿಶು ಹಾಗೂ ತಾಯಿ ಮರಣ ಹೊಂದುತ್ತಿದ್ದರೂ ಇಲ್ಲಿಯವರೆಗೆ ಯಾಕೆ ಕ್ರಮಕೈಗೊಂಡಿಲ್ಲ. ಇದನ್ನು ಶೀಘ್ರವೇ ತಡೆಯುವ ಪ್ರಯತ್ನವಾಗಲಿ.
- ಶಿವರಾಮಗೌಡ, ಸಂಸದ
ಜಿಲ್ಲಾದ್ಯಂತ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಸರಿಯಾದ ಚಿಕಿತ್ಸೆ ಮತ್ತು ಸುರಕ್ಷೆ ನೀಡಲು ಸಾಧ್ಯವಾಗಿಲ್ಲ. ಆದರೂ ರಾಷ್ಟ್ರೀಯ ಅಂಕಿ, ಸಂಖ್ಯೆಗೆ ಹೋಲಿಸಿದರೆ ಮರಣ ಪ್ರಮಾಣ ಕಡಿಮೆ ಇದೆ.
- ಮಹದೇವಸ್ವಾಮಿ, ಕೊಪ್ಪಳ ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿ
- ಸೋಮರಡ್ಡಿ ಅಳವಂಡಿ
31 Jul 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top