PLEASE LOGIN TO KANNADANET.COM FOR REGULAR NEWS-UPDATES

 : ಜಿಲ್ಲೆಯಲ್ಲಿ ಜುಲೈ ೩ ರಿಂದ ೧೨ ರವರೆಗೆ ಜರುಗುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
  ಪಿಯುಸಿ ಪೂರಕ ಪರೀಕ್ಷೆ ಜಿಲ್ಲೆಯ ೦೬ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು ೫೧೭೭ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.  ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಸೂಕ್ತ ಕೊಠಡಿ ಹಾಗೂ ಆಸನ ವ್ಯವಸ್ಥೆ ಸಮರ್ಪಕವಾಗಿರಬೇಕು,  ಯಾವುದೇ ಅಕ್ರಮ ಹಾಗೂ ನಕಲಿಗೆ ಅವಕಾಶ ನೀಡದಂತೆ, ವಿಚಕ್ಷಣ ದಳದವರು ಜಾಗರೂಕತೆ ವಹಿಸಬೇಕು.  ಪದವಿಪೂರ್ವ ಶಿಕ್ಷಣ ಇಲಾಖೆಯ ಸೂಚನೆಯಂತೆ ಪರೀಕ್ಷಾ ಮೇಲ್ವಿಚಾರಣೆಗೆ ಪ್ರೌಢಶಾಲಾ ಶಿಕ್ಷಕರನ್ನು, ಅದರಲ್ಲೂ ಖಾಯಂ ಶಿಕ್ಷಕರನ್ನು ಮಾತ್ರ ನಿಯೋಜಿಸಬೇಕು.  ಆಯಾ ವಿಷಯಗಳ ಪರೀಕ್ಷೆಗಳಿಗೆ ಅದೇ ವಿಷಯಗಳ ಶಿಕ್ಷಕರು ಪರೀಕ್ಷಾ ಮೇಲ್ವಿಚಾರಣೆ ಕರ್ತವ್ಯ ನಿರ್ವಹಿಸದಂತೆ, ನಿಯೋಜನಾ ಕಾರ್ಯ ನಡೆಸಬೇಕು ಎಂದರು.
  ಪರೀಕ್ಷೆ ಪ್ರಾರಂಭಕ್ಕೆ ಮುನ್ನ ಮಾತ್ರ ಮಾಧ್ಯಮದವರು ಪರೀಕ್ಷಾ ಕೇಂದ್ರದಲ್ಲಿ ಫೋಟೋ ಹಾಗೂ ವಿಡಿಯೋ ತೆಗೆಯಲು ಅವಕಾಶವಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಪರೀಕ್ಷೆ ಪ್ರಾರಂಭವಾದ ನಂತರ ಯಾವುದೇ ಮಾಧ್ಯಮದವರಿಗೆ ಪರೀಕ್ಷಾ ಕೊಠಡಿಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ.  ಪರೀಕ್ಷೆಗಳಲ್ಲಿನ ಅಕ್ರಮ ತಡೆಗಟ್ಟಲು ಶಿಕ್ಷಣ ಇಲಾಖೆ ನಿಯೋಜಿಸಿರುವ ವಿಚಕ್ಷಣ ದಳದ ಜೊತೆಗೆ, ಜಿಲ್ಲಾಡಳಿತದಿಂದ ಆಯಾ ತಾಲೂಕು ಮಟ್ಟದಲ್ಲಿ ತಹಸಿಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಒಳಗೊಂಡ ವಿಚಕ್ಷಣ ದಳ ನೇಮಿಸಲಾಗಿದೆ.  ಪರೀಕ್ಷಾ ದಿನದಂದು, ಪರೀಕ್ಷಾ ಕೇಂದ್ರದ ೨೦೦ ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಅಲ್ಲದೆ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಚಟುವಟಿಕೆಯನ್ನು ನಿಯಂತ್ರಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು.  ಒಟ್ಟಾರೆಯಾಗಿ ಪರೀಕ್ಷೆಯಲ್ಲಿ ಯಾವುದೇ ಅಹಿತಕರ ಪ್ರಕರಣಗಳು ನಡೆಯದಂತೆ ಪರೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಾನಂದ ಕಡಪಟ್ಟಿ ಅವರು ಮಾತನಾಡಿ, ಪಿಯುಸಿ ಪೂರಕ ಪರೀಕ್ಷೆಯು ಜಿಲ್ಲೆಯ ೦೬ ಕೇಂದ್ರಗಳಲ್ಲಿ ಜರುಗಲಿವೆ.  ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ೯೩೬ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.  ಅದೇ ರೀತಿ ಕೊಪ್ಪಳದ ಬಾಲಕಿಯರ ಪ.ಪೂ. ಕಾಲೇಜು- ೬೭೧, ಯಲಬುರ್ಗಾದ ಸರ್ಕಾರಿ ಪ.ಪೂ. ಕಾಲೇಜು- ೮೦೫, ಕುಷ್ಟಗಿಯ ಬಾಲಕರ ಸರ್ಕಾರಿ ಪ.ಪೂ. ಕಾಲೇಜು- ೬೯೦, ಗಂಗಾವತಿಯ ಬಾಲಕರ ಸರ್ಕಾರಿ ಪ.ಪೂ. ಕಾಲೇಜು- ೧೨೫೩ ಮತ್ತು ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ೮೨೨ ಅಭ್ಯರ್ಥಿಗಳು ಸೇರಿದಂತೆ ಒಟ್ಟು ೫೧೭೭ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ವಿವರಿಸಿದರು.
  ಸಭೆಯಲ್ಲಿ ಡಿಡಿಪಿಐ ಜಿ.ಹೆಚ್. ವೀರಣ್ಣ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾಲೇಜುಗಳ ಪ್ರಾಚಾರ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

27 Jun 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top