ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ವ್ಯವಸ್ಥೆ ಫೆ. ೨೮ ರಿಂದ ಜಾರಿಗೆ ಬರಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಹೇಳಿದರು.
ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರ್ಮಿಕರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ವ್ಯವಸ್ಥೆಯನ್ನು ಇದೇ ಫೆ. ೨೮ ರಿಂದ ಜಾರಿಗೆ ತರಲಾಗುವುದು. ಈಗಾಗಲೆ ಫಲಾನುಭವಿಗಳ ಬ್ಯಾಂಕ್ ಖಾತೆಗಳ ದೃಢೀಕರಣ ಕಾರ್ಯ ಪೂರ್ಣಗೊಂಡಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬ್ಯಾಂಕ್ ಖಾತೆಗಳನ್ನು ದೃಢೀಕರಿಸಿ ವರದಿ ಸಲ್ಲಿಸಲಾಗಿದೆ. ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆ ತ್ವರಿತವಾಗಿ ಬ್ಯಾಂಕ್ ಖಾತೆಗಳನ್ನು ದೃಢೀಕರಿಸುವ ಕಾರ್ಯದಲ್ಲಿ ೫ನೇ ಸ್ಥಾನದಲ್ಲಿದೆ. ಗ್ರಾಮ ಪಂಚಾಯತಿಯಲ್ಲಿ ಅನುದಾನದ ಕೊರತೆ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲು e-ಜಿms ತಂತ್ರಾಂಶವನ್ನು ಜಾರಿಗೆ ತರಲಾಗಿದೆ. ಈ ವ್ಯವಸ್ಥೆ ಜಾರಿಗೊಂಡಲ್ಲಿ ಉದ್ಯೋಗಖಾತ್ರಿ ಯೋಜನೆ ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕವಾಗಲಿದೆ. ಕೂಲಿ ಹಣ ಪಾವತಿಯಲ್ಲಿ ಉಂಟಾಗುತ್ತಿದ್ದ ಅನಗತ್ಯ ವಿಳಂಬ, ಮದ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಯೋಜನೆಯ ಮಾರ್ಗಸೂಚಿಯನ್ವಯ ಕೂಲಿಕಾರರು ಕೆಲಸ ನಿರ್ವಹಿಸಿದ ೧೫ ದಿನದೊಳಗಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಎಂ.ಎನ್.ಆರ್.ಇ.ಜಿ.ಎಸ್. ನಿರ್ದೇಶನಾಲಯದ ಚೇತನ್ ವಾಲಿ, ಇಎಫ್‌ಎಂಎಸ್ ತಂಡದ ಪ್ರಾಜೆಕ್ಟ್ ಎಕ್ಸಿಕ್ಯೂಟೀವ್ ಸಿದ್ದರಾಮೇಶ್ವರ ಎಂ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ ಬೆಂಗಳೂರಿನ ಸುರೇಶ ಬೆಳ್ಳುಬ್ಬಿ ಅವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಗ್ರಾ.ಪಂ. ಅಧ್ಯಕ್ಷರು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು, ಕಂಪ್ಯೂಟರ್ ಆಪರೇಟರ್‌ಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಎಲ್ಲ ಗಣ್ಯರು ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿದರು.
0 comments:
Post a Comment
Click to see the code!
To insert emoticon you must added at least one space before the code.