ಕನಕಗಿರಿ ಇದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಒಂದು ಗ್ರಾಮ 'ಕಣ್ಣಿದ್ದವರಿಗೆ ಕನಕಗಿರಿ-ಕಾಲಿದ್ದವರಿಗೆ ಹಂಪಿ' ಇದು ಈ ಭಾಗದ ಅತ್ಯಂತ ಜನಜನಿತ ನಾಣ್ನುಡಿ. ಕನಕಗಿರಿಯ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನ, ನರಸಿಂಹಸ್ವಾಮಿ ದೇವಸ್ಥಾನ, ವೆಂಕಟಪ್ಪನ ಬಾವಿ, ಈ ಎಲ್ಲ ದೇವಾಲಯಗಳಲ್ಲಿನ ಶಿಲ್ಪಕಲೆ, ಚಿತ್ರಕಲೆಯನ್ನು ಆಧರಿಸಿಯೇ ಈ ನಾಣ್ನುಡಿ ಜನಪದರಲ್ಲಿ ಹರಿದು ಬಂದಿರುವುದಾಗಿ ಹೇಳಬಹುದಾಗಿದೆ.
ಕನಕಮುನಿ ಎಂಬ ಮಹಾ ತಪಸ್ವಿಯ ಪ್ರಭಾವದಿಂದ ಸುವರ್ಣದ (ಬಂಗಾರ/ಕನಕ) ಮಳೆ ಸುರಿಯಿತೆಂದೂ, ಇದಕ್ಕಾಗಿಯೇ, ಈ ಭಾಗಕ್ಕೆ ಕನಕಗಿರಿ ಎಂಬ ಹೆಸರು ಬಂದಿದೆ ಎಂಬ ಐತಿಹ್ಯವಿದೆ. ಕ್ರಿ.ಶ. ೧೪೩೬ ರಿಂದ ೧೯೪೮ ರವರೆಗೂ ಕನಕಗಿರಿ ಸಂಸ್ಥಾನದ ಸುಮಾರು ಹನ್ನೆರಡು ದೊರೆಗಳು ಆಳ್ವಿಕೆ ನಡೆಸಿದ್ದು, ಈ ಪೈಕಿ ಮೊದಲ ಒಂಭತ್ತು ದೊರೆಗಳು ಕನಕಗಿರಿಯನ್ನು ತಮ್ಮ ರಾಜಧಾನಿಯನ್ನಾಗಿಸಿಕೊಂಡು, ಉಳಿದ ಮೂವರು ದೊರೆಗಳು ಹುಲಿಹೈದರ್ ನಿಂದ ಆಳ್ವಿಕೆ ನಡೆಸಿದ್ದಾರೆ. ಇತಿಹಾಸದಲ್ಲಿ ಸುವರ್ಣ ಯುಗವೆಂದೇ ಬಣ್ಣಿಸಲ್ಪಿಟ್ಟಿರುವ ವಿಜಯನಗರ ಸಾಮ್ರಾಜ್ಯಕ್ಕೂ ಕನಕಗಿರಿಗೂ ಅವಿನಾಭಾವ ಸಂಬಂಧವಿದೆ. ವಿಜಯನಗರ ಸಾಮ್ರಾಜ್ಯದ ಪ್ರಮುಖ ದೊರೆಗಳಲ್ಲೊಬ್ಬರಾದ ಪ್ರೌಢದೇವರಾಯನ ಕಾಲದಲ್ಲಿ, ಕನಕಗಿರಿ ನಾಯಕರಿಗೆ ಉತ್ತಮ ಪ್ರಾತಿನಿಧ್ಯವಿತ್ತು. ತನ್ನ ಬಲಭಾಗದಲ್ಲಿ ಕನಕಗಿರಿ ನಾಯಕರು ಆಸೀನರಾಗಲು ಅವಕಾಶ ಕೊಟ್ಟಿದ್ದರೆಂದರೆ, ಕನಕಗಿರಿ ನಾಯಕರ ಪ್ರಭಾವವನ್ನು ಇಲ್ಲಿ ಊಹಿಸಿಕೊಳ್ಳಬಹುದಾಗಿದೆ. ವಿಜಯನಗರ ಸಾಮ್ರಾಜ್ಯದ ಪರವಾಗಿ ಬೇಹುಗಾರಿಕೆ ದಳದ ಮುಖ್ಯಸ್ಥರಾಗಿಯೂ ಕನಕಗಿರಿ ನಾಯಕರು ಕಾರ್ಯ ನಿರ್ವಹಿಸಿದ್ದರೆಂಬುದಾಗಿ ಇತಿಹಾಸ ತಿಳಿಸುತ್ತದೆ. ವಿಜಯನಗರ ಸಾಮ್ರಾಜ್ಯದ ಪ್ರಮುಖ ದೊರೆಗಳು ಕನಕಗಿರಿಯ ಶ್ರೀ ಕನಕಾಚಲಪತಿಯ ಪರಮ ಭಕ್ತರಾಗಿದ್ದು, ಖುದ್ದು ಶ್ರೀಕೃಷ್ಣದೇವರಾಯನೇ ಸ್ವರಚಿತ 'ಅಮುಕ್ತಾಮೌಲ್ಯ' ಗ್ರಂಥದಲ್ಲಿ ಕನಕಾಚಲಪತಿ ದೇವರ ಮಹಿಮೆಯನ್ನು ಬಣ್ಣಿಸಿದ್ದಾನೆ.
ಪ್ರಸಿದ್ಧ ಕನಕಾಚಲನಪತಿ ದೇವಾಲಯ : ಕನಕಗಿರಿಯ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ಕನಕಾಚಲಪತಿ ದೇವಾಲಯ. ಕನಕಾಚಲಪತಿ ದೇವಾಲಯದ ಗರ್ಭಗುಡಿಯನ್ನು ಸಂಸ್ಥಾನದ ಮೂಲಪುರುಷ ಪರಸಪ್ಪ ಉಡುಚನಾಯಕ ನಿರ್ಮಿಸಿದ್ದು, ನವಾಬ ಉಡುಚನಾಯಕರು ಈ ದೇವಾಲಯದ ಮಧ್ಯರಂಗಮಂಟಪ ಕಟ್ಟಿಸಿದರೆ, ಕೆಲವಡಿ ಉಡುಚನಾಯಕ ದೇವಾಲಯದ ಗಾರೆ ಶಿಲ್ಪ ಸೇರಿದಂತೆ ಪ್ರಮುಖ ಮೂರು ಬೃಹತ್ ಮುಖ್ಯ ಗೋಪುರ ಹಾಗೂ ಪ್ರಾಂಗಣ ನಿರ್ಮಾಣ ಮಾಡಿದನು. ಕನಕಾಚಲಪತಿ ದೇವಾಲಯದಲ್ಲಿ ಸುಮಾರು ಒಂದೂಕಾಲು ಅಡಿ ಎತ್ತರದ ಶ್ರೀ ಲಕ್ಷ್ಮೀನರಸಿಂಹ ದೇವರು ಉದ್ಭವಿಸಿದ್ದು, ಸಾಲಿಗ್ರಾಮ ರೂಪದ ದೇವರಿಗೆ ಲೋಹದ ಕಿರೀಟವಿದೆ. ಸನಿಹದಲ್ಲಿಯೇ ಸಂಜೀವಮೂರ್ತಿಯ (ಆಂಜನೇಯ) ಸುಂದರ ವಿಗ್ರಹವಿದೆ. ಕನಕಾಚಲಪತಿ ದೇವಾಲಯವು ದ್ವಾರಮಂಟಪ, ರಂಗಮಂಟಪ, ಸಭಾಮಂಟಪ, ಆಕರ್ಷಕ ಕಂಬಗಳು, ಗರ್ಭಗುಡಿ, ಪಂಚಶಿಖರ ಮತ್ತು ದೀಪಸ್ತಂಭಗಳನ್ನು ಒಳಗೊಂಡಿದೆ. ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ದೇವಾಲಯದ ಪ್ರಾಂಗಣ ಸುಮಾರು ೨೦೦ ಅಡಿ ಉದ್ದ ೧೦೦ ಅಡಿ ಅಗಲವಿದೆ. ದೇವಾಲಯದ ಪ್ರಾಕಾರದಲ್ಲಿ ಸರಸ್ವತಿ ಮತ್ತು ಲಕ್ಷ್ಮೀನಾರಾಯಣರ ಮಂಟಪ ಸೇರಿದಂತೆ ಕನಕಗಿರಿ ಸಂಸ್ಥಾನದ ಕೆಲವು ಪ್ರಮುಖ ನಾಯಕರ ಕಲ್ಲಿನ ಪ್ರತಿಮೆಗಳೂ ಇವೆ.
ಕನಕಗಿರಿ ಎಂದರೆ ದೇವಾಲಯಗಳ ಊರು ಎಂದೇ ಪ್ರಸಿದ್ಧವಾಗಿದ್ದು, ರಾಮೇಶ್ವರ, ಜಕ್ಕಮ್ಮ, ರಂಗನಾಥ, ತೇರಿನ ಹನುಮಪ್ಪ, ದುರ್ಗಾದೇವಿ, ಕಾಳಿಕಾದೇವಿ, ಅಂಬಾ, ತೇರಿನ ಹನುಮಪ್ಪ, ವೀರಭದ್ರೇಶ್ವರ, ಹಿರೇಹಳ್ಳದ ಬಸವೇಶ್ವರ, ಈಶ್ವರ ವೀರಭದ್ರೇಶ್ವರ, ಲಕ್ಷ್ಮೀದೇವಾಲಯ, ಮಲ್ಲಿಕಾರ್ಜುನ, ನಗರೇಶ್ವರ ಸೇರಿದಂತೆ ಹಲವಾರು ದೇವಾಲಯಗಳು ಈ ಭಾಗದಲ್ಲಿವೆ.
- ತುಕಾರಾಂರಾವ್ ಬಿ.ವಿ., ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ
0 comments:
Post a Comment
Click to see the code!
To insert emoticon you must added at least one space before the code.