PLEASE LOGIN TO KANNADANET.COM FOR REGULAR NEWS-UPDATES


  ಜಿಲ್ಲೆಯಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಎಲ್ಲಾ ಆಯೋಜಕರು ಅಂದರೆ ವ್ಯಕ್ತಿ/ಟ್ರಸ್ಟ್/ದಾನಿಗಳು ಅಥವಾ ಸಂಘ-ಸಂಸ್ಥೆಗಳು ಅಥವಾ ದೇವಸ್ಥಾನ ಸಮಿತಿಗಳು ಜಿಲ್ಲಾ ನೋಂದಣಾಧಿಕಾರಿ ಮೂಲಕ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
  ಜಿಲ್ಲೆಯಲ್ಲಿ ಸಾಮೂಹಿಕ ಮದುವೆಗಳನ್ನು ಏರ್ಪಡಿಸುವುದರ ಮೂಲಕ ಹಲವು ಆಯೋಜಕರು ಸರಳ ವಿವಾಹಗಳಿಗೆ ಪ್ರೋತ್ಸಾಹಿಸಲಾಗುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.  ಆದರೆ ಈ ಸಾಮೂಹಿಕ ಮದುವೆಗಳಲ್ಲಿ ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಗಳು ನಡೆಯುವಂತಿಲ್ಲ. ಸಾಮೂಹಿಕ ವಿವಾಹಗಳನ್ನು ಸಮರ್ಪಕವಾಗಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಯೋಜಿಸುವ ಹಾಗೂ ಸಾಮೂಹಿಕ ವಿವಾಹಗಳಲ್ಲಿ ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ತಡೆಗಟ್ಟುವ ದೃಷ್ಠಿಯಿಂದ ಸರ್ಕಾರ ಹಲವು ಮಾರ್ಗಸೂಚಿಯನ್ನು ಹೊರಡಿಸಿದೆ.  ಅದರನ್ವಯ ಸಾಮೂಹಿಕ ಮದುವೆಗಳನ್ನು ಆಯೋಜಿಸುವವರು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಆಯೋಜಕರ ನೋಂದಣಿ : ಎಲ್ಲಾ ಆಯೋಜಕರು (ವ್ಯಕ್ತಿ, ಟ್ರಸ್ಟ್, ದಾನಿ, ಸಂಘ ಸಂಸ್ಥೆಗಳು, ದೇವಸ್ಥಾನ ಸಮಿತಿಗಳು ಇತ್ಯಾದಿ) ಕಂದಾಯ ಇಲಾಖೆಯಡಿ ಜಿಲ್ಲಾ ನೋಂದಣಾಧಿಕಾರಿ ಮುಖಾಂತರ ನೋಂದಾಯಿಸಿಕೊಳ್ಳತಕ್ಕದ್ದು, ನೋಂದಾವಣಿಯು ಒಂದು ಸಲ ಮಾತ್ರ ಆದರೆ ಪ್ರತಿ ೫ ವರ್ಷಕ್ಕೊಮ್ಮೆ ನವೀಕರಣ ಮಾಡತಕ್ಕದ್ದು, ನೋಂದಾವಣಿಯ ಸಮಯದಲ್ಲಿ ಈ ದಾಖಲೆಗಳನ್ನು ಒದಗಿಸತಕ್ಕದ್ದು. ಹೆಸರು (ವ್ಯಕ್ತಿ, ಟ್ರಸ್ಟ್, ಸಂಘ ಸಂಸ್ಥೆ ದೇವಸ್ಥಾನ ಸಮಿತಿಗಳು, ಧಾರ್ಮಿಕ ಸಂಸ್ಥೆಗಳು ಇತರೆ), ವಿಳಾಸ (ಧೃಢೀಕರಣದೊಂದಿಗೆ), ಟ್ರಸ್ಟ್ ಸಂಘ ಸಂಸ್ಥೆಗಳಾಗಿದ್ದಲ್ಲಿ ನೋಂದಾವಣಿ ಪ್ರಮಾಣ ಪತ್ರ, ಸಾಮೂಹಿಕ ವಿವಾಹ ಸಂದರ್ಭದಲ್ಲಿ ಯಾವುದೇ ಬಾಲ್ಯ ವಿವಾಹ ನಡೆಸುವುದಿಲ್ಲ ಎಂದು ಘೋಷಿಸಿರುವ ಕರಾರು ಪತ್ರ, ಯಾವುದೇ ಸಂಘ ಸಂಸ್ಥೆಯಾಗಲಿ ಅಥವಾ ವ್ಯಕ್ತಿಯಾಗಲಿ ನೋಂದಾವಣೆ ಆಗದೆ ಸಾಮೂಹಿಕ ವಿವಾಹಗಳನ್ನು ಆಯೋಜಿಸುವಂತಿಲ್ಲ, ಆಯೋಜಕರು ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಸಂದರ್ಭದಲ್ಲಿ ಅಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು ಅಂತಹ ಸಂದರ್ಭದಲ್ಲಿ ಅನುಮತಿ ಕೋರುವ ಅರ್ಜಿಯ ಜೊತೆಗೆ ನೋಂದಾವಣೆ ಪತ್ರವನ್ನು ಸಲ್ಲಿಸತಕ್ಕದ್ದು, ನೋಂದಾವಣೆ ಪತ್ರವನ್ನು ಪಡೆದ ನಂತರ ಅದರಲ್ಲಿ ಸೂಚಿಸಿರುವ ಅಂಶಗಳನ್ನು ಪಾಲಿಸದಿದ್ದಲ್ಲಿ (ಬಾಲ್ಯ ವಿವಾಹಕ್ಕೆ ಆಸ್ಪದ ನೀಡಿದರೆ) ನೋಂದಾವಣೆಯು ರದ್ದಾಗುವುದು.
ಸಾಮೂಹಿಕ ವಿವಾಹಗಳಿಗೆ ಅನುಮತಿ : ಸಾಮೂಹಿಕ ವಿವಾಹಗಳನ್ನು ಆಯೋಜಿಸುವರು ಸಂಬಂಧಿಸಿದ ತಾಲ್ಲೂಕ ತಹಶೀಲ್ದಾರರುಗಳಿಂದ ಅನುಮತಿಯನ್ನು ಪಡೆಯತಕ್ಕದ್ದು. ಅನುಮತಿ ಪಡೆಯಲು ಅರ್ಜಿಯೊಂದಿಗೆ, ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸುವ ವಧು-ವರರ ಪ್ರತ್ಯೇಕ ಭಾವಚಿತ್ರಗಳು, ಜನನ ಪ್ರಮಾಣ ಪತ್ರ, ಶಾಲೆಯಿಂದ ಪಡೆದಿರುವ ವಯಸ್ಸಿನ ಪ್ರಮಾಣ ಪತ್ರ ಅಥವಾ ಜಿಲ್ಲಾಧಿಕಾರಿಗಳ ಕಚೇರಿ ಸೂಚನೆಯಂತೆ ಪಡೆದ ವಯಸ್ಸಿನ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಪಡಿತರ ಚೀಟಿ, ಚುನಾವಣಾ ಗುರುತಿನ ಪತ್ರ, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ವಧು-ವರರ ಪಾಲಕರಿಂದ ಸಮ್ಮತಿ ಸೂಚಿಸಿ ವಧು-ವರರು ಮದುವೆಯ ವಯಸ್ಸು ಆಗಿರುವ ಬಗ್ಗೆ ಕರಾರು ಪತ್ರ ಲಗತ್ತಿಸಿ ಸಲ್ಲಿಸಬೇಕು.
ತಹಶೀಲ್ದಾರರವರಿಗೆ ಅರ್ಜಿ ಸಲ್ಲಿಸುವ ಕ್ರಮ : ಸಾಮೂಹಿಕ ವಿವಾಹಗಳಲ್ಲಿ ನೂರಕ್ಕಿಂತ ಕಡಿಮೆ ಜೋಡಿಗಳು ಭಾಗವಹಿಸುವುದಿದ್ದರೆ ಸಾಮೂಹಿಕ ವಿವಾಹದ ೨೦ ದಿವಸಗಳ ಮುಂಚಿತವಾಗಿ ಅರ್ಜಿ ಸಲ್ಲಿಸತಕ್ಕದ್ದು, ೨೦೦ ರವರೆಗಿದ್ದರೆ ೪೦ ದಿನಗಳ ಮುಂಚಿತವಾಗಿ ತಿಳಿಸಬೇಕು, ೨೦೦ ಕ್ಕಿಂತ ಹೆಚ್ಚು ಇದ್ದರೆ ೬೦ ದಿನಗಳ ಮುಂಚಿತವಾಗಿ ತಿಳಿಸಬೇಕು, ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕಾಲಾವಧಿಯ ನಂತರ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
  ಆಯೋಜಕರು ಬಾಲ್ಯ ವಿವಾಹ ನಿಷೇಧ ಮತ್ತು ಅಪರಾಧ ಎಂದು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಜಾಹೀರಾತುಗಳನ್ನು ಹಾಕತಕ್ಕದ್ದು, ಸಾಮೂಹಿಕ ವಿವಾಹಗಳಲ್ಲಿ ಆಯೋಜನೆ ಆಗುವ ಪ್ರತಿ ಮದುವೆಯನ್ನು ಕಡ್ಡಾಯವಾಗಿ ಕರ್ನಾಟಕ ವಿವಾಹಗಳ ಕಾಯ್ದೆ ೧೯೭೬ ರ ಪ್ರಕಾರ ನೋಂದಾಯಿಸತಕ್ಕದ್ದು, ಸಾಮೂಹಿಕ ವಿವಾಹ ಕಾರ್ಯಕ್ರಮದ ವಿಡಿಯೋ ಚಿತ್ರಿಕರಣ ಹಾಗೂ ಪೋಟೋಗಳನ್ನು (ಸ್ಥಿರ ಚಿತ್ರಗಳನ್ನು) ಭಾವಚಿತ್ರಗಳನ್ನು ಆಯೋಜಕರು ಸಂಬಂಧ ಪಟ್ಟ ತಾಲ್ಲೂಕು ಶಿಶು ಅಭಿವೃದ್ದಿ ಅಧಿಕಾರಿಗಳಿಗೆ ವಿವಾಹ ಕಾರ್ಯಕ್ರಮ ನಡೆದ ೧ ವಾರದೊಳಗೆ ಸಲ್ಲಿಸತಕ್ಕದ್ದು, ವಧು/ವರರ ವಯಸ್ಸು ನಿಗದಿಪಡಿಸಿದ ಯೋಗ್ಯ ವಿವಾಹ ವಯಸ್ಸಿಗಿಂತ ಕಡಿಮೆ ಇದ್ದಲ್ಲಿ ಬಾಲ್ಯ ವಿವಾಹ ವಿಶೇಷ ಅಧಿಕಾರಿಗಳು ಯಾವುದೇ ಸಂದರ್ಭದಲ್ಲಿ ಸಾರ್ವಜನಿಕ ವಿವಾಹ ಆಯೋಜಕರ ಮೇಲೆ ಸಂಬಂಧಪಟ್ಟ ಆರಕ್ಷಕ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಲಾಗುತ್ತದೆ. ಈ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.

Advertisement

0 comments:

Post a Comment

 
Top