PLEASE LOGIN TO KANNADANET.COM FOR REGULAR NEWS-UPDATES


  ಕೊಪ್ಪಳ ಜಿಲ್ಲಾ ಪಂಚಾಯತಿಯ ೨೦೧೨-೧೩ ನೇ ಸಾಲಿನ ವಿವಿಧ ಯೋಜನೆಗಳ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವ ಕುರಿತಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರವೇ ಅನುಮೋದನೆಗೆ ಸಭೆ ಏರ್ಪಡಿಸುವಂತೆ ಜಿಲ್ಲಾ ಪಂಚಾಯತಿಯ ಸದಸ್ಯರುಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ  ವಿಶೇಷ ಸಭೆಯನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರು ಪ್ರಕಟಿಸಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
  ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳು ಸಭೆಯ ಆರಂಭದಲ್ಲಿ ಮಾತನಾಡಿ, ೨೦೧೨-೧೩ನೇ ಸಾಲಿಗೆ ಜಿಲ್ಲೆಯ ಯೋಜನಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯತಿಗಾಗಿ ರೂ. ೬೭. ೯೪ ಕೋಟಿ, ತಾಲೂಕಾ ಪಂಚಾಯತಿಗೆ ರೂ. ೪೯. ೫೫ ಕೋಟಿ ಹಾಗೂ ಗ್ರಾಮ ಪಂಚಾಯತಿಗಳಿಗೆ ರೂ. ೨೪. ೮೦ ಕೋಟಿ ಸೇರಿದಂತೆ ಒಟ್ಟು ೧೪೨. ೩೦ ಕೋಟಿ ರೂ.ಗಳಿಗೆ ಸರ್ಕಾರ ಅನುದಾನ ನಿಗದಿಪಡಿಸಿದೆ.  ಈ ಪೈಕಿ ಜಿಲ್ಲಾ ಪಂಚಾಯತಿಯ ಕಾರ್ಯಕ್ರಮಗಳಿಗೆ ೬೭. ೯೪ ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.  ಇದರಲ್ಲಿ ರಾಜ್ಯದ ಪಾಲಿನ ಮೊತ್ತ ೫೯. ೪೧ ಕೋಟಿ ರೂ. ಗಳಾದರೆ, ಕೇಂದ್ರದ ಪಾಲು ೮. ೫೨ ಕೋಟಿ ರೂ.ಗಳಾಗಿದೆ.  ಸರ್ಕಾರದ ಮಾರ್ಗಸೂಚಿಯನ್ವಯ ಜಿಲ್ಲಾ ಪಂಚಾಯತಿ ಕಾರ್ಯಕ್ರಮಗಳಿಗೆ ಇಲಾಖಾವಾರು ಕ್ರಿಯಾ ಯೋಜನೆ ತಯಾರಿಸಲಾಗಿದೆ.  ಕ್ರಿಯಾ ಯೋಜನೆಯನ್ನು ಸಂಬಂಧಿಸಿದ ಸ್ಥಾಯಿ ಸಮಿತಿಗಳಲ್ಲಿ ಮತ್ತು ಜಿಲ್ಲಾ ಯೋಜನಾ ಸಮಿತಿಯಲ್ಲಿ ಮಂಡಿಸಬೇಕಾಗಿತ್ತು.  ಆದರೆ ಸ್ಥಾಯಿ ಸಮಿತಿ ಮತ್ತು ಜಿಲ್ಲಾ ಯೋಜನಾ ಸಮಿತಿ ಅಸ್ತಿತ್ವದಲ್ಲಿ ಇಲ್ಲದ ಕಾರಣ ಈ ವಿಶೇಷ ಸಭೆಯಲ್ಲಿ ಅನುಮೋದನೆಗಾಗಿ ಮಂಡಿಸಲಾಗಿದೆ ಎಂದು ತಿಳಿಸಿ, ಇಲಾಖಾವಾರು ವಿವರವನ್ನು ಸಭೆಗೆ ವಿವರಿಸಲು ಸಜ್ಜಾಗುತ್ತಿದ್ದಂತೆಯೇ, ಜಿಲ್ಲಾ ಪಂಚಾಯತಿ ಸದಸ್ಯರುಗಳು ಆಕ್ಷೇಪ ವ್ಯಕ್ತಪಡಿಸಿ, ಕ್ರಿಯಾ ಯೋಜನೆಯ ವರದಿಯನ್ನು ತಯಾರಿಸುವಾಗ, ಸದಸ್ಯರ ಗಮನಕ್ಕೆ ತಾರದಂತೆ ಸಿದ್ಧಪಡಿಸಲಾಗಿದೆ.  ಆದ್ದರಿಂದ ಆಯಾ ತಾಲೂಕುವಾರು ವರದಿಯನ್ನು ಪರಿಶೀಲಿಸಬೇಕಾಗಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಚರ್ಚಿಸಿ, ಕ್ರಿಯಾ ಯೋಜನೆಗೆ ಮಂಡಿಸುವಂತೆ ಬಹುತೇಕ ಸದಸ್ಯರು ಒತ್ತಾಯಿಸಿದರು.  ಜಿಲ್ಲಾ ಪಂಚಾಯತಿ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇದಕ್ಕೆ ಸಮ್ಮತಿ ಸೂಚಿಸಿ ತಾಲೂಕುವಾರು ಚರ್ಚೆಗೆ ಸಭೆಯ ದಿನಾಂಕವನ್ನು ನಿಗದಿಪಡಿಸಿದರು.  
  ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿಗೆ ಸಂಬಂಧಿಸಿದಂತೆ ಸಭೆಯನ್ನು ಜೂ. ೨೦ ರಂದು ಕ್ರಮವಾಗಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಾಗೂ ಕೊಪ್ಪಳ ಮತ್ತು ಗಂಗಾವತಿ ತಾಲೂಕಿಗೆ ಸಂಬಂಧಿಸಿದಂತೆ ಜೂ. ೨೧ ರಂದು ಕ್ರಮವಾಗಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಸಭಾಂಗಣದಲ್ಲಿ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.  ಈ ಸಭೆಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆಯಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆಗೆ ಹಾಜರಾಗಬೇಕು, ತಪ್ಪಿದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಎಚ್ಚರಿಕೆ ನೀಡಿದರು.
  ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಡಾ. ಸೀತಾ ಗೂಳಪ್ಪ ಹಲಗೇರಿ, ಉಪಕಾರ್ಯದರ್ಶಿ ಅನ್ನದಾನಯ್ಯ ಸೇರಿದಂತೆ ಜಿಲ್ಲಾ ಪಂಚಾಯತಿಯ ಸದಸ್ಯರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

16 Jun 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top