PLEASE LOGIN TO KANNADANET.COM FOR REGULAR NEWS-UPDATES



ಹುಬ್ಬಳ್ಳಿ, ಮೇ 28: ಪ್ರಸಕ್ತ ಶೈಕ್ಷಣಿಕ ವರ್ಷದಿಂದ 5ನೆ ತರಗತಿಯಿಂದ 8ನೆ ತರಗತಿ ವರೆಗಿನ ಪಠ್ಯ ಪುಸ್ತಕ ಬದಲಾಯಿಸಲು ಮುಂದಾಗಿರುವ ಸರಕಾರ, ಹೊಸ ಪಠ್ಯ ಪುಸ್ತಕ ತರಲು ನಿರ್ಧರಿಸಿದೆ.   ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಬರುವ ವರ್ಷದಿಂದ ಇತರ ತರಗತಿಗಳ ಪಠ್ಯವನ್ನು ಬದಲಿಸಲಾಗುವುದು ಎಂದರು.ಈ ವರ್ಷದಿಂದ 5ನೆ ತರಗತಿಯಿಂದ 8ನೆ ತರಗತಿ ವರೆಗಿನ ಪಠ್ಯವನ್ನು ಬದ ಲಿಸಿ, ಹೊಸ ಪಠ್ಯ ಜಾರಿಗೊಳಿಸಲಾಗುವುದು. ಇದೇ ರೀತಿ ಮುಂದಿನ ವರ್ಷ ಇತರ ತರಗತಿಗಳ ಪಠ್ಯವನ್ನು ಬದಲಿಸಲಾಗುವುದು ಎಂದರು.ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಪಠ್ಯಕ್ರಮ ಬದಲಾಗಲಿದ್ದು, ಸಿಬಿಎಸ್‌ಸಿ ಕೇಂದ್ರೀಯ ಪಠ್ಯಕ್ರಮವನ್ನು ಜಾರಿಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪಠ್ಯಕ್ರಮ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಪಿಯುಸಿ ಉಪನ್ಯಾಸಕರಿಗೆ ಹೊಸ ಪಠ್ಯದ ಕುರಿತು ತರಬೇತಿ ಕೂಡಾ ನೀಡಲಾಗಿದೆ ಎಂದು ಕಾಗೇರಿ ಸ್ಪಷ್ಟಪಡಿಸಿದರು.ಸಿಬಿಎಸ್‌ಸಿ ಮತ್ತು ಐಸಿಎಸ್ ಶಿಕ್ಷಣ ಪಠ್ಯ ಕ್ರಮವನ್ನು ಜಾರಿಗೆ ತರುವ ಶಾಲೆಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೂ ದೂರು ಪರಿಶೀಲಿಸುವ ಅಧಿಕಾರ ನೀಡುವಂತೆ ಕೇಂದ್ರ ಸರಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ ಎಂದರು.ಗುತ್ತಿಗೆ ಆಧಾರಿತ ಶಿಕ್ಷಕರಿಗೆ ನೀಡುವ ಕಾಲ್ಪನಿಕ ವೇತನ ಹಿಂಪಡೆಯಲಾಗುವುದು ಎಂಬ ವದಂತಿ ಹರಡಿದ್ದು, ಇದನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ. ಈ ಬಗ್ಗೆ ಯಾರೂ ಕೂಡಾ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ ಎಂದರು.
ಖಾಲಿ ಇರುವ 1764 ಪಿಯು ಉಪನ್ಯಾಸಕರ ಭರ್ತಿ ಪ್ರಕ್ರಿಯೆಗಾಗಿ 95 ಸಾವಿರ ಅರ್ಜಿಗಳು ಬಂದಿವೆ. ಮುಂದಿನ ತಿಂಗಳ 12ರಿಂದ 21ರ ವರೆಗೆ ಈ ಆಯ್ಕೆ ಸಂಬಂಧ ವಿಭಾಗ ಮಟ್ಟದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಸಚಿವ ಕಾಗೇರಿ ತಿಳಿಸಿದರು.
ಜೊತೆಗೆ 3404 ಪ್ರೌಢಶಾಲಾ ಶಿಕ್ಷಕರ ಹುದ್ದೆ ಖಾಲಿ ಇದೆ. ಈ ಸಂಬಂಧ ಹುದ್ದೆಗಾಗಿ 2.25 ಲಕ್ಷ ಅರ್ಜಿಗಳು ಬಂದಿವೆ. ಈ ಹುದ್ದೆಗಳ ಭರ್ತಿಗಾಗಿ ಜೂ.23ರಿಂದ 26ರ ವರೆಗೆ ಜಿಲ್ಲಾಮಟ್ಟದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದರು.
ಜೂನ್ ಒಂದರಿಂದ ರಾಜ್ಯಾದ್ಯಂತ ಶಾಲೆಗಳು ಪ್ರಾರಂಭಗೊಳ್ಳಲಿದ್ದು, ಈ ಸಂದರ್ಭದಲ್ಲಿ ಶಾಲಾ ಪ್ರಾರಂಭೋತ್ಸವ ಆಚರಿಸಲು ಶಿಕ್ಷಕರು, ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.ಮೇ 28 ಮತ್ತು 29ರಂದು ಎಲ್ಲ ಶಾಲೆಗಳಲ್ಲಿ ಪೂರ್ವ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಮಕ್ಕಳನ್ನು ಮರೆವಣಿಗೆಯ ಮೂಲಕ ಕರೆತಂದು ಸಿಹಿ ಹಂಚಿ ಸಂಭ್ರಮಿಸುವಂತೆ ಆದೇಶ ನೀಡಲಾಗಿದೆ ಎಂದರು.
ಶಿಕ್ಷಣ ಹಕ್ಕು ಕಾಯ್ದೆ ಜಾರಿ
ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದರೆ ಒಂದರಿಂದ 8ನ ತರಗತಿಯ ವರೆಗೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಲೇಬೇಕು ಎಂದ ಕಾಗೇರಿ, 8ರಿಂದ 10ನೆ ತರಗತಿಯ ವರೆಗೂ ಈ ಕಾಯ್ದೆಯನ್ನು ವಿಸ್ತರಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.ಶಾಲೆ ಪ್ರಾರಂಭಕ್ಕೆ ಕಲವೇ ದಿನಗಳು ಬಾಕಿ ಉಳಿದಂತೆ ಶೇ.90ರಷ್ಟು ಮಕ್ಕಳ ಸಮವಸ್ತ್ರವನ್ನು ಶಾಲೆಗಳಿಗೆ ತಲುಪಿಸಲಾಗಿದೆ ಎಂದ ಕಾಗೇರಿ, ಬೆಳಗಾವಿ ವಿಭಾಗದ ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ 10 ದಿನಗೊಳಗೆ ಸಮವಸ್ತ್ರ ವಿಸರಿಸಲಾಗುವುದು ಎಂದರು.
ಆರ್‌ಇಟಿ ಕಾಯ್ದೆಯನ್ವಯ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು ಪ್ರವೇಶ ಮೀಸಲಿಡುವ ಕುರಿತಂತೆ ಹಲವು ಬಾರಿ ಚರ್ಚೆಗಳನ್ನು ನಡೆಸಲಾಗಿದ್ದು, ಈ ಸಂಬಂಧ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು. ಡೊನೇಶನ್ ಶುಲ್ಕ ಹೆಚ್ಚು ಪಡೆಯುವ ಶಾಲಾ-ಕಾಲೇಜುಗಳ ವಿರುದ್ಧ ಜಿಲ್ಲಾಧಿಕಾರಿ ಮತ್ತು ಶಿಕ್ಷಣ ಇಲಾಖೆಗೆ ದೂರು ನೀಡಿದರೆ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು

Advertisement

0 comments:

Post a Comment

 
Top