PLEASE LOGIN TO KANNADANET.COM FOR REGULAR NEWS-UPDATES


ಟಿವಿಯಲ್ಲಿ ಉತ್ತರ ಭಾರತದ ಒಂದು ಊರಿನಲ್ಲಿ ಪೊಲೀಸರು ಆರು ವರ್ಷದ ಹುಡುಗಿಯೊಬ್ಬಳ ಚಿಕ್ಕ ಕೂದಲು ಎರಡೂ ಕಡೆ ಹಿಡಿದು ಎತ್ತುತ್ತಿದ್ದಾರೆ. ಅವಳು ನೋವು ತಡೆಯಲಾರದೇ ಕಿರುಚುತ್ತಿದ್ದಾಳೆ. ಪೊಲೀಸರು ಅವಳನ್ನು ಇಳಿಸಿ ಮತ್ತೆ ಮತ್ತೆ ಎತ್ತುತ್ತಾರೆ. ಟಿವಿ ಅದನ್ನೇ ಮತ್ತೆ ಮತ್ತೆ ತೋರಿಸುತ್ತಿದೆ. ಅವಳು ಏನನ್ನೋ ಕಳವು ಮಾಡಿದ ಆರೋಪ. ಟಿವಿ ನ್ಯೂಸ್ ರೀಡರ್ ಮತ್ತೆ ಮತ್ತೆ ಕೇಳುತ್ತಿದ್ದಾಳೆ. ಅಲ್ಲಿ ಕಾನೂನು ಇಲ್ಲವಾ, ಚಿಕ್ಕ ಮಕ್ಕಳನ್ನು ಚಿತ್ರಹಿಂಸೆ ಮಾಡಬಾರದು ಅಂತ. ಕಾನೂನಿದೆ ಗೊತ್ತಿಲ್ಲವಾ ಅಂತ. ಆದರೆ ಹಿಂಸಿಸುತ್ತಿರುವವರು ಪೊಲೀಸರು. ಅವಳಿನ್ನೂ ಆರು ವರ್ಷದ ಮಗು.ನರಿ ಮುಖದ ಮುತಾಲಿಕ್ ಹೇಳುತ್ತಿದ್ದಾನೆ, ನಮ್ಮ ಭಾರತ ಸಂಸ್ಕೃತಿಗೆ ಪಬ್ ಬೇಡ. ಅವನ ಹಿಂದೆಯೇ ಶ್ರೀರಾಮ ಸೇನೆಯ ಯಾರೋ ಸಿಳ್ಳೆಕ್ಯಾತ ಹೇಳುತ್ತಿದ್ದಾನೆ, ಹುಡುಗಿಯರು ಹಾಗೆಲ್ಲಾ ಮಾಡಬಾರದು.ಮಾನವ ಹಕ್ಕು ಆಯೋಗದ ನಿರ್ಮಲಾ ವೆಂಕಟೇಶ್ ಹೇಳುತ್ತಿದ್ದಾಳೆ, ರೇಣುಕಾ ಚೌಧುರಿ ಯಾರು ನನ್ನ ಬಗ್ಗೆ ಟೀಕೆ ಮಾಡಲು. ನಾನು ನೀಡಿದ ವರದಿಯೇ ಅಂತಿಮ ಸತ್ಯ.

ಅದೇ ಸಂಜೆ ಆಫೀಸಿನಲ್ಲಿ ವರದಿಗಾರ ಫೈಲ್ ಮಾಡಿದ ಸುದ್ದಿ ನಿರ್ಮಲಾ ವೆಂಕಟೇಶ್ ಸಲ್ಲಿಸಿದ ವರದಿಯಲ್ಲಿ ಶ್ರೀರಾಮ ಸೆನೆಯ ಹೆಸರೇ ಇಲ್ಲ. ಪಬ್‌ಗೆ ಯಾಕೆ ಸೆಕ್ಯುರಿಟಿ ಇಲ್ಲ, ಹುಡುಗಿಯರು ಯಾಕೆ ಅಲ್ಲಿಗೆ ಹೋಗಬೇಕಿತ್ತು ಇತ್ಯಾದಿ. ಮೇಲ್ ನಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದ ಪಟ್ಟಾಭಿರಾಮ ಸೋಮಯಾಜಿಯವರು ಪಬ್ ಮೇಲಿನ ಆ ದಾಳಿಯನ್ನು ಖಂಡಿಸಿದ ‘‘ಅಪರಾಧ’’ಕ್ಕೆ ಅವರನ್ನು ಕೆಲಸದಿಂದ ತೆಗೆದುಹಾಕುವ ಯತ್ನದ ಬಗ್ಗೆ ಬನ್ನಿ ವಿರೋಧಿಸಿ ಅಂತ ಗೆಳತಿ ಬರೆದಿದ್ದಾಳೆ. ಯಾರೋ ಪ್ರೊಪೋಸ್ ಮಾಡಿದನಂತೆ, ಅವಳು ಒಪ್ಪದಿದ್ದಕ್ಕೆ ಅವಳ ಮುಖ್ಯಕ್ಕೆ ಆ್ಯಸಿಡ್ ಹಾಕಿದನಂತೆ.
ಹುಡುಗಿ ಒಪ್ಪದಿದ್ದರೆ ಆ್ಯಸಿಡ್ ಹಾಕುವುದು ನಮ್ಮ ಸಂಸ್ಕೃತಿ. ಮುತಾಲಿಕ್ ಅದನ್ನು ವಿರೋಧಿಸುವುದಿಲ್ಲ. ಹೆಂಗಸರ ಮೇಲೆ ಏನು ಅತ್ಯಾಚಾರ ಬೇಕಾದರೂ ನಡೆಯಬಹುದು. ಎಲ್ಲವೂ ಮುತಾಲಿಕ್‌ಗೆ ಸಹ್ಯವೇ. ತುಟಿ ಪಿಟಿಕ್ ಅನ್ನುವುದಿಲ್ಲ. ಯಾರು ಏನು ಬೇಕಾದರೂ ಮಾಡಬಹುದು. ಬೈಯುವುದಾದರೆ ಬೈಯಿರಿ ಹೆಂಗಸರನ್ನ. ಮರ್ಯಾದೆ ಮೀರಿದ್ದಕ್ಕೆ, ಸಂಸ್ಕೃತಿ ಹಾಳುಮಾಡಿದಕ್ಕೆ. ಆ್ಯಸಿಡ್ ಎಸೆಯಿರಿ, ಹೊಡೆಯಿರಿ, ಬಡಿಯಿರಿ, ಮನೆ ಬಿಟ್ಟಿ ಓಡಿಸಿ, ಕೊಲ್ಲಿರಿ, ವೇಶ್ಯಾವೃತ್ತಿಗಿಳಿಸಿ, ಆಫೀಸಿನಲ್ಲಿ ಹಿಂಸೆ ನೀಡಿ, ಮನೆಯಲ್ಲಿ ಕೂಡಿಹಾಕಿ, ಕೈ ಕಾಲಿಗೆ ಬರೆ ಇಡಿ, ಸರಪಳಿಯಲ್ಲಿ ಕಟ್ಟಿಹಾಕಿ, ನಿತ್ಯ ಅತ್ಯಾಚಾರ ಮಾಡಿ... ಎಲ್ಲದಕ್ಕೂ ಇದು ತಕ್ಕ ಬಲಿ.
ಶಿಕ್ಷಣ ಕೊಡಬೇಡಿ. ಕಲಿಸಬೇಡಿ, ಸ್ವಾವಲಂಬನೆ ಕಲಿಸಬೇಡಿ, ಹೊಟ್ಟೆ ತುಂಬ ಊಟ ಹಾಕಬೇಡಿ. ಹೊಟ್ಟೆಯಲ್ಲೇ ಮುಗಿಸಿಬಿಡಿ.ವಿದ್ಯಾವಂತರು, ಹಣವಂತರು ಉಟ್ಟು ತೊಟ್ಟು ಸಿಂಗಾರವಾದ ಹೆಣ್ಣುಗಳನ್ನು ಕುಣಿಸಿ, ಅನುಭವಿಸಿ. ಹಣ ಚೆಲ್ಲಿ. ಸೀರೆ ಸೆಳೆಯಿರಿ. ಚಿಕ್ಕ ಚಿಕ್ಕ ಚಡ್ಡಿ ತೊಡಿಸಿ ಐಟಂ ಸಾಂಗ್ ಮಾಡಿಸಿ. ಅತ್ತ ಪಬ್ಬಿನಲ್ಲಿ ಓಡಿಸಿದವರೇ ಇತ್ತ ಲಕ್ಷ ಲಕ್ಷ ಕೊಟ್ಟು ಬುಕ್ ಮಾಡಿ. ಪರದೆಯ ಮೇಲೆ ನೋಡಿ ಆನಂದಿಸಿ. ಬೇಕಾದರೆ ಕರೆಸಿಕೊಂಡು ಮಜಾ ಮಾಡಿ.ಹಣದ ಅಧಿಪತ್ಯ ಹೆಣ್ಣಿನ ಕೈಗೆ ಕೊಡಬೇಡಿ. ಬೆವರು ಸುರಿಸಿ ದುಡಿದದ್ದನ್ನೂ ಬಾಚಿಕೊಳ್ಳಿ. ಒದ್ದು ಮೂಲೆಗೆ ಸೇರಿಸಿ.
ಗಂಡಾದರೆ ಹಾದರ ಪರವಾಗಿಲ್ಲ. ಏನೀಗ? ಎಲ್ಲರೂ ಈಗ ಅದನ್ನು ಒಪ್ಪಿಕೊಂಡಿದ್ದಾರೆ. ಇಲ್ಲಿ ಎಲ್ಲವೂ ಸೈ. ಹೆಣ್ಣಾದರೆ ಸಲ್ಲದು.ಕಾಲು ಮುಟ್ಟಿ ನಮಸ್ಕರಿಸುವುದೂ ತಪ್ಪು, ಪರಪುರುಷನನ್ನು ಸೋಕುವುದೆಂದರೆ ಏನು? ಯಾರನ್ನೂ ನೋಡಬಾರದು, ಮಾತಾಡಿಸಬಾರದು.ಇನ್ನು ಪ್ರೀತಿಸುವುದಂತೂ ಹೆಣ್ಣಿಗೆ ಶಾಪ. ಎಲ್ಲವೂ ನುಚ್ಚಾಯ್ತು ನೀರ ಹೊಳಿಯಾಗ. ಅಸಲು ಪ್ರೀತಿಸಲೇ ಬಾರದು. ಆದರೂ ಬಚ್ಚಿಡಬೇಕು. ಬರೆಯಲಾಗಿದೆ ಗೋಡೆಯ ಮೇಲೆ- ಇಲ್ಲಿ ಪ್ರೀತಿ ನಿಷಿದ್ಧ. ಇಲ್ಲಿ ಈಗ ತಾಂಡವವಾಡುವುದು ದ್ವೇಷ ಮಾತ್ರ. ಮುತ್ತಿಟ್ಟರೆ ಪಾಪ. ಆದರೆ ಕೊರಳು ಕತ್ತರಿಸುವುದು ಇಲ್ಲಿ ಮಾನ್ಯ. ಪ್ರೀತಿಗೆ ಸಮ್ಮಾನವಿಲ್ಲ. ಅದು ಕಲ್ಲು ಮುಳ್ಳಿನ ಹಾದಿ, ಆದರೆ ವಂಚನೆ, ಕಪಟ, ಮೋಸಕ್ಕೆ ಸಕಲ ಮರ್ಯಾದೆ.
ಸುಳ್ಳು ಹೇಳಿರೋ, ಬದುಕಿರೋ, ಕಪಟ ನಾಯಕ ಅಂದರೆ ಸೈ ಸೈ ಅನ್ನುತ್ತಾರೆ. ಅಯ್ಯಾ ಪ್ರೀತಿ ತುಂಬಿ ಅಂದಿರುವೆ ಬೊಗಸೆಯಲ್ಲಿ ಅಂದರೆ ಹಚಾ ಹಚ್ ನಡಿ ದೂರ. ದ್ವೇಷಕ್ಕೆ ಮಣೆ. ಅದೇ ಸಾಮರ್ಥ್ಯ. ಹೊಡೆಯಬಲ್ಲೆಯಾ ನೀನು ವೈರಿಯ? ಆದರೆ ಸೈರಿಸಬೇಕು ಅಪಮಾನವನ್ನ, ಅಪನಂಬಿಕೆಯನ್ನ. ಕಣ್ಣೆದುರೇ ಕೊಳಕುಮಂಡಲಗಳು ಪೀಠವೇರಿ ಮೆರೆಯುವುದನ್ನ. ಬುದ್ಧನ ಬಗೆ ಕಾಣಿರೋ. ನಿರ್ಮಲ ಸ್ನೇಹ ಅರಿಯಿರೋ. ಆಗುವುದಿಲ್ಲ ಅವರಿಗೆ. ತಮ್ಮ ತಮ್ಮ ಸೇರುಗಳಲ್ಲಿ ಅಳೆಯುವವರಿಗೆ ನದಿಯಲ್ಲಿ ನೀರೆಷ್ಟಿದೆ ಅನ್ನುವ ಕಲ್ಪನೆಯಿಲ್ಲ. ಪ್ರೀತಿಯೇ ಮೈತಾಳಿ ಬಂದವಳನ್ನು ಅವರು ಹೇಳುತ್ತಾರೆ ಕಲಿ ನೀನೂ ನಮ್ಮಂತೆ ನಕಲಿಯಾಗು, ಟೊಳ್ಳಾಗು, ತಳವಿಲ್ಲದ ಮಡಕೆಯಾಗು, ಹಲ್ಲಿಲ್ಲದ ಹಾವಾಗು.
ಜಗತ್ತಿಗೆ ಪ್ರೀತಿ ಬೇಕಿಲ್ಲ. ಸ್ನೇಹ ಬೇಕಿಲ್ಲ. ಕ್ರೌರ್ಯವಾದರೆ ನಂಬಲು ಹೆಚ್ಚು ಸುಲಭ. ಇಲ್ಲಿ ಹಿಂಸೆಗೆ ಮರ್ಯಾದೆ. ಮೆಲುದನಿ ಓಲೈಕೆಗೆ ಬೆಲೆಯಿಲ್ಲ. ಜೋರು ಬಾಯಿಯವರು ಬಂದರೆ ದಾರಿ ಬಿಡಿ. ಒಳಗೊಳಗೆ ನೊಂದು ಕಣ್ಣಲ್ಲಿ ನೀರು ತುಂಬಿ ತುಟಿ ನಡುಗುತ್ತಾ ಅತ್ಮ ನಿವೇದಿಸಿಕೊಂಡರೆ ನಗುತ್ತಾರೆ. ಕೊನೆಯವರೆಗೂ ಒಂದು ಅಪ್ಪುಗೆ, ಒಂದು ನೇವರಿಕೆ, ಒಂದು ಕಣ್ಣೊಟ, ಒಂದು ಮೆಚ್ಚಿಕೆಯ ಮಾತು ಏನೂ ಸಿಗುವುದಿಲ್ಲ.ಜೊತೆಗೇ ತೂತ ಹಾಕುತ್ತಾರೆ. ನನ್ನ ಮಾತು, ನಡತೆ, ನೋಟ ಎಲ್ಲವನ್ನೂ ಹರಾಜಿಗಿಟ್ಟು ಸವಾಲೆಸೆಯುತ್ತಾರೆ.ಅವಳು ನಕ್ಕು ಹೇಳುತ್ತಾಳೆ.
ಅಯ್ಯಾ, ಸ್ವರ್ಗವೂ ಇದೇ, ನರಕವೂ ಇದೇ. ಮಾಡಿದ್ದನ್ನು ಉಣ್ಣುವ ಜಾಗವೂ ಇದೇ. ಈ ಜನ್ಮದಲ್ಲೇ ತೀರಿಸಬೇಕು. ಹೆಣ್ಣ ಕರುಳು ಬೆಂದರೆ, ಮನಸು ಮುರಿದರೆ, ನೆಲಕ್ಕಿಂತ ಇನ್ನೂ ಕೆಳಗೆ ತಳ್ಳಿದರೆ, ಒಲುಮೆ ಮದ್ದಿನ ಸೀಸೆ ಒಡೆದು ನಿರಾಕರಿಸಿದರೆ... ಒಲೆ ಹೊತ್ತಿ ಉರಿದರೆ ನಿಲಬಹುದಲ್ಲದೆ ಧರೆ ಹೊತ್ತಿ ಉರಿದರೆ ನಿಲಬಹುದೇ? ತಾಯಿಯ ಮೊಲೆ ಹಾಲು ನಂಜಾಗಿ ಕೊಲುವೊಡೆ ನಾರಿ ತನ್ನಯ ಮನೆ ಕಳುವಿದಡೆ... ಎಲ್ಲಿ ಅಡಗಿಕೊಳ್ಳುವಿರೋ? ನಾನು ಮುನಿದರೆ ನಿಮಗೆ ಬದುಕುಂಟೇ? ನನ್ನ ಮನ ಮುರುಟಿದರೆ ನಿಮಗೆ ನಲಿವುಂಟೇ? ಮೂರ್ಖರು ಅರಿಯರು ಪಾಪ. ಅವರನ್ನು ಕ್ಷಮಿಸು ದೇವ.
ನನ್ನ ಹಾದಿ ಬೇರೆ, ನನ್ನ ಭಾಷೆ ಬೇರೆ. ನನ್ನ ಪ್ರೀತಿಯ ರೀತಿಯೇ ಬೇರೆ. ನಿಮ್ಮಂತೆ ಸುಳ್ಳಾಡಲಾರೆ.ಬರೆಯಬಹುದೇ ನಾನು ನನ್ನ ತಲ್ಲಣಗಳ, ಬರೆಯದಿರಬಹುದೇ? ಎದುರು ನಿಂತು ಬೊಗಸೆಯೊಡ್ಡಿದಾಗಲೇ ತಿಳಿಯಲಾರದವರು ಬರೆದ ಅಕ್ಷರಗಳಲ್ಲಿ ಕಂಡುಕೊಳ್ಳುವರೇ? ಕರುಳು ಕತ್ತರಿಸುವ ನೋವು, ಬಾಯಿ ಬೇಡದ ಸಾಂತ್ವನ, ಕಣ್ಣೊಳಗೆ ತುಂಬಿದ ಹನಿ, ಚಾಚಿದ ಕೈ... ಅಪ್ಪಿಕೊಳ್ಳುವವರೇ ಇಲ್ಲ, ಕಣ್ಣೀರು ಒರೆಸುವವರೇ ಇಲ್ಲ. ಬೀಸುಗಾಲಿನಲ್ಲಿ ನಡೆಯುವವಳು ಧೀರಳೂ ಶೂರಳೂ ಎಂದು ಭ್ರಮಿಸಿ ಹತ್ತಿರ ಬರುವವರೂ ಇಲ್ಲ. ಆಗ ಕೇಳಿದರು, ಹೇಳಿದೆ ತಲ್ಲಣಿಸದಿರು ಕಂಡಯ ತಾಳು ಮನವೇ, ಎಲ್ಲರನು ಸಲಹುವನು, ಇದಕ್ಕೆ ಸಂಶಯವಿಲ್ಲ...
ಕೃಪೆ: ಶೂದ್ರ ಪ್ರಕಾಶನ
21 Apr 2012

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top