PLEASE LOGIN TO KANNADANET.COM FOR REGULAR NEWS-UPDATES



  ಸಕಾಲ ಇಂದು ನಾಳೆ ಇನ್ನಿಲ್ಲ, ಹೇಳಿದ ಸಮಯಕ್ಕೆ ತಪ್ಪೊಲ. ಇದು  ಕರ್ನಾಟಕದ ನಾಗರಿಕರಿಗೆ ಸೇವೆಗಳ ಅಧಿನಿಯಮವನ್ನು (೨೦೧೧) ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ಇದರ ಘೋಷವಾಕ್ಯ.  ಅಂದರೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳಿಗೆ ಸರ್ಕಾರ ಕಾಲಮಿತಿ ನಿಗದಿಪಡಿಸಿದೆ.  ಇಂತಹ ಯೋಜನೆಯು ಕೊಪ್ಪಳ ಜಿಲ್ಲೆಯಲ್ಲಿ ಏ. ೦೨ ರಿಂದ ಜಾರಿಗೆ ಬರಲಿದೆ.
  ಸರ್ಕಾರ ಜನಸಾಮಾನ್ಯರ ಒಳಿತಿಗಾಗಿ ಜಾರಿಗೆ ತಂದಿರುವ ಈ ಕಾನೂನು ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಸರಕಾರಿ ಸೇವೆಗಳನ್ನು ನಿಗದಿತಾವಧಿಯಲ್ಲಿ ಪಡೆಯಲು ಅನುಕೂಲ ಕಲ್ಪಿಸಲಿದೆ.
  ಸದಾಕಾಲ ಜನಸಾಮಾನ್ಯರಿಗೆ ನಿಗದಿತ ಕಾಲ ಮಿತಿಯೊಳಗೆ ಸೇವೆ ನೀಡುವ ಖಾತರಿಯನ್ನು ಈ ಕಾನೂನು ಒದಗಿಸಿದೆ. ಸರಕಾರಿ ಸಿಬ್ಬಂದಿಗಳು ಅನವಶ್ಯಕ ವಿಳಂಬ ಮಾಡದೇ ಕಾರ್ಯತತ್ಪರರಾಗಲು ಆದೇಶಿಸಿರುವುದು ಇಲ್ಲಿ ಗಮನಾರ್ಹ. ಒಂದು ವೇಳೆ ವಿಳಂಬ ಮಾಡಿದ್ದೇ ಆದರೆ ದಂಡ ಕೂಡ ವಿಧಿಸಲಾಗುವುದು. ಅದನ್ನು ಸಂಬಂಧಪಟ್ಟ ಅಧಿಕಾರಿ/ಸಿಬ್ಬಂದಿಯ ವೇತನದಲ್ಲಿ ಕಟಾಯಿಸಲಾಗುವುದು.
ಸದ್ಯದ ಮಟ್ಟಿಗೆ ೧೧ ಇಲಾಖೆಗಳ ಒಟ್ಟು ೧೫೧ ಸೇವೆಗಳಿಗೆ ಖಾತರಿ ಒದಗಿಸಲಾಗಿದೆ.
೧೧ ಇಲಾಖೆಗಳ ವಿವರ:  ಸ್ಥಳೀಯ ಪ್ರಾಧಿಕಾರ, ಸಾರಿಗೆ ಇಲಾಖೆ, ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಒಳಾಡಳಿತ ಇಲಾಖೆ (ಪೊಲೀಸ್), ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ಇಲಾಖೆ, ಕಾರ್ಮಿಕ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಹಣಕಾಸು ಇಲಾಖೆ. 
  ನಗರಸಭೆ/ಪುರಸಭೆ/ಪಟ್ಟಣ ಪಂಚಾಯತಿ ಇಲಾಖೆಗಳು- ಜನನ ಮರಣ, ಪ್ರಮಾಣಪತ್ರಗಳನ್ನು ನೀಡುವುದು, ಕಟ್ಟಡಗಳಿಗೆ ಲೈಸೆನ್ಸ್ ನೀಡುವುದು, ಖಾತಾ ಉದ್ಧೃತ ಪ್ರಮಾಣಪತ್ರ, ಕಟ್ಟಡ ಯೋಜನೆಗೆ ಮಂಜೂರಾತಿ ಸೇರಿದಂತೆ ಒಟ್ಟು ೦೫ ಬಗೆಯ ಸೇವೆಗಳು ನಾಗರಿಕ ಸೇವಾ ಖಾತ್ರಿ ಅಧಿನಿಯಮದ ವ್ಯಾಪ್ತಿಗೊಳಪಡಲಿವೆ.  ಸಾರಿಗೆ ಇಲಾಖೆ- ಕಲಿಕಾ ಲೈಸೆನ್ಸ್, ಚಾಲನಾ ಲೈಸೆನ್ಸ್, ವಾಹನಗಳ ನೋಂದಣಿ, ಸೇರಿದಂತೆ ಒಟ್ಟು ೯ ಬಗೆಯ ಸೇವೆಗಳಿವೆ.  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ- ಪಡಿತರ ಚೀಟಿ ನೀಡುವುದು, ಆಹಾರಧಾನ್ಯಗಳ ವ್ಯಾಪಾರಿಗಳಿಗೆ ಲೈಸೆನ್ಸ್ ನೀಡುವುದು, ಸಗಟು ಮತ್ತು ಚಿಲ್ಲರೆ ಮಾರಾಟಗಾರರಿಗೆ ಲೈಸೆನ್ಸ್ ನೀಡುವುದು, ಸೇರಿದಂತೆ ಒಟ್ಟು ೦೪ ಬಗೆಯ ಸೇವೆ.  ಕಂದಾಯ ಇಲಾಖೆ- ಹಕ್ಕುಗಳ ಪ್ರಮಾಣ ಪತ್ರದ ದಾಖಲೆ, ಕೃಷಿ ಭೂಮಿಯಿಂದ ಕೃಷಿಯೇತರ ಉದ್ದೇಶದ ಪರಿವರ್ತನೆ, ಜಾತಿ/ ಆದಾಯ ಪ್ರಮಾಣಪತ್ರ, ಸಿಂಧುತ್ವ ಪ್ರಮಾಣಪತ್ರ, ಭೂಸ್ವಾಧಿನ ಪರಿಹಾರದ ಸಂದಾಯ ಸೇರಿದಂತೆ ಒಟ್ಟು ೨೪ ಬಗೆಯ ಸೇವೆಗಳನ್ನು ಒದಗಿಸಲು ಕಾಲಮಿತಿ ನಿಗದಿಪಡಿಸಲಾಗಿದೆ.  ಒಳಾಡಳಿತ (ಪೊಲೀಸ್)- ಫಿರ್ಯಾದುದಾರರಿಗೆ ಎಫ್‌ಐಆರ್ ಪ್ರತಿ ಒದಗಿಸುವುದು, ಸೌಂಡ್‌ಸಿಸ್ಟಂಗಾಗಿ ಲೈಸೆನ್ಸ್, ಅಮ್ಯೂಜ್‌ಮೆಂಟ್‌ಗೆ ಲೈಸೆನ್ಸ್, ಶಾಂತಿಯುತ ಸಭೆ, ಮೆರವಣಿಗೆಗೆ ಅನುಮತಿ, ಪಾಸ್‌ಪೋರ್ಟ್ ಸತ್ಯಾಪನೆ, ನಿರಾಕ್ಷೇಪಣಾ ಪತ್ರ, ಶಸ್ತ್ರಾಸ್ತ್ರಗಳ ಲೈಸೆನ್ಸ್ ಸೇರಿದಂತೆ ಒಟ್ಟು ೧೩ ಬಗೆಯ ಸೇವೆಗಳಿವೆ.  ಶಿಕ್ಷಣ ಇಲಾಖೆ- ಉತ್ತರ ಪತ್ರಿಕೆಗಳ ಫೋಟೋಪ್ರತಿ ಪಡೆಯುವುದು, ಮೌರು ಎಣಿಕೆ, ಮರು ಮೌಲ್ಯಮಾಪನ, ಡೂಪ್ಲಿಕೇಟ್ ಅಂಕಪಟ್ಟಿ ನೀಡುವುದು, ಹೊಸ ಶೈಕ್ಷಣಿಕ ಸಂಸ್ಥೆಗಳ ನೊಂದಣಿಗೆ ಅರ್ಜಿ ವಿಲೇವಾರಿ ಸೇರಿದಂತೆ ಒಟ್ಟು ೦೬ ಬಗೆಯ ಸೇವೆಗಳಿವೆ.  ಆರೋಗ್ಯ ಇಲಾಖೆ- ವಿವಿಧ ಪ್ರಮಾಣಪತ್ರ ನೀಡುವುದು ಸೇರಿದಂತೆ ೦೪ ಬಗೆಯ ಸೇವೆಗಳು, ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ- ಈ ಇಲಾಖೆಯಲ್ಲಿ ಆಯಾ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕರ ನಿರ್ಧರಣ ಪಟ್ಟಿ ಬದಲಾವಣೆ, ಕಟ್ಟಡ ಲೈಸೆನ್ಸ್, ಕುಡಿಯುವ ನೀರಿನ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ಗ್ರಾಮ ನೈರ್ಮಲ್ಯ ಸೇರಿದಂತೆ ಒಟ್ಟು ೧೦ ಬಗೆಯ ಸೇವೆಗಳನ್ನು ಒದಗಿಸಲು ಸರ್ಕಾರ ಈ ಯೋಜನೆಯಡಿ ಕಾಲಮಿತಿ ನಿಗದಿಪಡಿಸಿದೆ.
  ಈ ಕಾಲಮಿತಿ ಮೀರಿ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾದಲ್ಲಿ ಅಂತಹ ಅಧಿಕಾರಿ/ಸಿಬ್ಬಂದಿಯು ಪ್ರತಿ ದಿನಕ್ಕೆ ೨೦ ರೂ.ಗಳಂತೆ ಗರಿಷ್ಠ ೫೦೦ ರೂ.ಗಳವರೆಗಿನ ಪರಿಹಾರವನ್ನು ದಂಡ ರೂಪದಲ್ಲಿ ಪಾವತಿಸಬೇಕು.  ಅದೂ ಅವರದೇ ವೇತನದಲ್ಲಿ. 
ವಿಳಂಬಕ್ಕೆ  ದಂಡ: ಸರಕಾರಿ ಸಿಬ್ಬಂದಿಗಳು ಕಾರ್ಯ ನಿರ್ವಹಣೆಯಲ್ಲಿ ವಿಳಂಬ ಮಾಡಿದರೆ ಇಲ್ಲವೆ ತಪ್ಪು ಮಾಹಿತಿ ನೀಡಿದ್ದು ರುಜುವಾತಾದರೆ ಪ್ರತಿಯೊಂದು ಸೇವೆಗೆ ದಿನವೊಂದರ ವಿಳಂಬಕ್ಕೆ  ಕನಿಷ್ಠ ೨೦ ರೂ.ನಿಂದ ಗರಿಷ್ಠ ೫೦೦ ರೂ.ಗಳ ವರೆಗೆ ಆಯಾ ಸಿಬ್ಬಂದಿಗಳ ವೇತನದಿಂದ ಭರಿಸಿಕೊಡಲಾಗುವುದು. ಅಲ್ಲದೆ, ಯಾವುದೇ ಅಧಿಕಾರಿ ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದರೆ ಸೇವಾ ದಾಖಲಾತಿ ಪುಸ್ತಕದಲ್ಲಿ ಕಪ್ಪುಚುಕ್ಕೆ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ, ವಿಳಂಬದ ದಂಡದ ಹಣವನ್ನು ದೂರುದಾರರಿಗೆ ನೇರವಾಗಿ ನೀಡಲಾಗುವುದು.
  ಈಗಾಗಲೆ ರಾಜ್ಯದ ಮಂಗಳೂರು ಜಿಲ್ಲೆಯ ಪುತ್ತೂರು, ಬೀದರ್ ಜಿಲ್ಲೆಯ ಔರಾದ್, ಧಾರವಾಡ ಜಿಲ್ಲೆಯ ಧಾರವಾಡ ತಾಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲೂಕು ಗಳಲ್ಲಿ ಜಾರಿಯಲ್ಲಿದ್ದು, ಏ. ೦೨ ರಿಂದ ಇಡೀ ರಾಜ್ಯಾದ್ಯಂತ ಜಾರಿಗೆ ಬರಲಿದೆ.  ಸಾರ್ವಜನಿಕರು ಸರಕಾರ ಒದಗಿಸಿರುವ  ಅಗತ್ಯ ಸೌಲಭ್ಯಗಳನ್ನು ತ್ವರಿತವಾಗಿ ಪಡೆಯಲು ಈ ಕಾಯ್ದೆ ಸಹಕಾರಿಯಾಗಿದೆ.
  ಸೇವಾಖಾತ್ರಿ ಮಸೂದೆಯು ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಬಲ ಅಸ್ತ್ರವಾಗಲಿದ್ದು, ಇನ್ನು ಮುಂದೆ ಸರ್ಕಾರದಿಂದ ಕೆಲಸ, ಆಗಲಿದೆ ಬಲು ಸುಲಭ.  ಜನಸಾಮನ್ಯರಿಗಿದು ಸುವರ್ಣಾವಕಾಶ! ತಡವಿಲ್ಲದೆ ತಮ್ಮ ಹಕ್ಕು ಚಲಾಯಿಸಲು ಸನ್ನದ್ಧರಾಗಿ. ಸರಕಾರಿ ಸವಲತ್ತುಗಳನ್ನು ತ್ವರಿತಗತಿಯಲ್ಲಿ ಪಡೆಯಿರಿ. ಸರಕಾರಿ ಸಿಬ್ಬಂದಿಗಳು ತಮ್ಮೊಂದಿಗೆ ಸಕಾಲದಲ್ಲಿ ಸಹಕರಿಸುವುದರೊಂದಿಗೆ ಸೇವೆ ನೀಡಲು ಸಜ್ಜಾಗಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಭರದ ಸಿದ್ಧತೆ : ಸಾರ್ವಜನಿಕರಿಗೆ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ನಿಗದಿತ ಕಾಲಮಿತಿಯ ಅವಧಿಯಲ್ಲಿ ಒದಗಿಸುವ ಕರ್ನಾಟಕ ನಾಗರಿಕ ಸೇವಾ ಖಾತ್ರಿ ಅಧಿನಿಯಮದ ಸಕಾಲ ಯೋಜನೆ ಏ. ೦೨ ರಿಂದ ಜಾರಿಗೆ ಬರಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ.  ಈಗಾಗಲೆ ಇದಕ್ಕಾಗಿ ಅಗತ್ಯವಿರುವ ಐಟಿ ಕನ್ಸಲ್ಟೆಂಟ್ ಗಳನ್ನು ನೇಮಿಸಿಕೊಳ್ಳುವುದು, ಅಧಿನಿಯಮದಡಿ ಬರುವ ಆಯಾ ಇಲಾಖೆಯ ಸೇವೆಗಳು ಹಾಗೂ ಇವುಗಳಿಗೆ ನಿಗದಿಪಡಿಸಿರುವ ಕಾಲಮಿತಿಯ ವಿವರವುಳ್ಳ ಪ್ರಚಾರ ಫಲಕಗಳನ್ನು ಸಂಬಂಧಪಟ್ಟ ಕಚೇರಿಗಳ ಬಳಿ ಸಾರ್ವಜನಿಕರ ಗಮನಕ್ಕೆ ಬರುವ ರೀತಿಯಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗಿದೆ.  ಅಲ್ಲದೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಯೋಜನೆ ಜಾರಿ ಕುರಿತಂತೆ ತರಬೇತಿ ನೀಡಲಾಗುತ್ತಿದೆ.  ಸಾರ್ವಜನಿಕರ ಅರ್ಜಿಗಳನ್ನು ಆಯಾ ಇಲಾಖಾ ಕಚೇರಿಯಲ್ಲಿ ಪಡೆಯಲು ಅನುಕೂಲವಾಗುವಂತೆ ಕಂಪ್ಯೂಟರ್ ಸಹಿತದ ಸಿಬ್ಬಂದಿಯನ್ನು ನಿಯೋಜಿಸಿ, ಅವರಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ.
  ಯಾವುದೇ ಒಂದು ಕಚೇರಿಯಿಂದ ನಿಗದಿತ ಅವಧಿಯೊಳಗೆ ತಮ್ಮ ಕೆಲಸ ಕಾರ್ಯಗಳು ಪೂರ್ಣಗೊಂಡಲ್ಲಿ, ಸರ್ಕಾರದ ಉದ್ದೇಶ ಸಫಲಗೊಂಡಂತಾಗುತ್ತದೆ.  ಕರ್ನಾಟಕ ನಾಗರಿಕ ಸೇವಾ ಖಾತ್ರಿ ಯೋಜನೆಯ ಸದುದ್ದೇಶಗಳ ಬಗ್ಗೆ ಗ್ರಾಮೀಣ ಮಟ್ಟದಿಂದ, ಜಿಲ್ಲಾ ಮಟ್ಟದವರೆಗಿನ ಎಲ್ಲ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಜಾಗೃತಿ ಹೊಂದುವುದು ಅಗತ್ಯವಾಗಿದೆ.  ಇದಕ್ಕಾಗಿ ಎಲ್ಲ ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು, ಸರ್ಕಾರಿ ನೌಕರರ ಸಹಕಾರ ಅತ್ಯಗತ್ಯ.


                                                     -             ತುಕಾರಾಂ ರಾವ್ ಬಿ.ವಿ.
                                                                     ಜಿಲ್ಲಾ ವಾರ್ತಾಧಿಕಾರಿ,
                                                                           ಕೊಪ್ಪಳ.

Advertisement

0 comments:

Post a Comment

 
Top