ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿರುವ ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಜ್ ಎಸ್ ತಂಗಡಗಿ ಅವರು ತೃಪ್ತಿ ವ್ಯಕ್ತಪಡಿಸಿದರು.
ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಡಾ. ಕೆ. ಮಲ್ಲಿಕಾರ್ಜುನ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮೊದಲ ಹಂತವನ್ನು ೨೦೦೯-೧೦ ರಿಂದ ಹಾಗೂ ಎರಡನೆ ಹಂತವನ್ನು ೨೦೧೦-೧೧ ರಿಂದ ಪ್ರಾರಂಭಿಸಲಾಗಿದೆ. ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯ ಮೊದಲ ಹಂತದಲ್ಲಿ ಒಟ್ಟು ೩೫೧೪ ಹೆಕ್ಟೇರ್ ಪ್ರದೇಶವನ್ನು ಹಾಗೂ ಎರಡನೆ ಹಂತದಲ್ಲಿ ೪೯೩೬ ಹೆಕ್ಟೇರ್ ಪ್ರದೇಶವನ್ನು ೩-೫ ವರ್ಷಗಳ ಯೋಜನಾ ಅವಧಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ ಮೊದಲ ಹಂತದಲ್ಲಿ ೭ ಕಿರು ಜಲಾನಯನಗಳಲ್ಲಿ ೭ ಗ್ರಾಮಗಳಾದ ದೇವಲಾಪುರ, ಚಿಕ್ಕವಡ್ರಕಲ್, ಗೌರಿಪುರ, ಬಸರಿಹಾಳ, ಬೈಲಕ್ಕಂಪುರ, ಕನಕಾಪುರ, ಹಾಗೂ ಕನಕಗಿರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಎರಡನೆ ಹಂತದಲ್ಲಿ ೧೨ ಕಿರು ಜಲಾನಯನಗಳಲ್ಲಿ ೮ ಹಳ್ಳಿಗಳಾದ ಲಾಯದುಣಸಿ, ಹುಲಿಹೈದರ, ಶಿರವಾಳ, ಹನುಮನಾಳ, ವರ್ಣಖೇಡ್, ಹೊಸಗುಡ್ಡ, ಕನಕಗಿರಿ ಹಾಗೂ ಬೈಲಕ್ಕಂಪುರ ಒಳಗೊಂಡಿವೆ. ಸದರಿ ಯೋಜನೆಯಡಿಯಲ್ಲಿ ಕೃಷಿ, ಅರಣ್ಯ ಮತ್ತು ತೋಟಗಾರಿಕೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಬದು ನಿರ್ಮಾಣ, ಕೃಷಿಹೊಂಡ, ತಡೆಆಣೆಕಟ್ಟು, ಜಿನುಗುಕೆರೆ, ನಾಲಾಬದು ಇತ್ಯಾದಿ ನೀರು ಸಂಗ್ರಹಣಾ ವಿನ್ಯಾಸಗಳನ್ನು ನಿರ್ಮಿಸಲಾಗುವುದು. ಜಲಾನಯನ ಗ್ರಾಮಗಳಲ್ಲಿ ಪಶು ಸಂಗೋಪನೆ ಅಭಿವೃದ್ಧಿಗಾಗಿ ಪಶು ಚಿಕಿತ್ಸಾ ಶಿಬಿರಗಳನ್ನು ವರ್ಷದಲ್ಲಿ ೨ ಸಲ ಏರ್ಪಡಿಸಲಾಗುವುದು. ಸೃಜಿಸಿದ ನೀರು ಸಂಗ್ರಹಣಾ ವಿನ್ಯಾಸಗಳಲ್ಲಿ ಮೀನು ಮರಿಗಳನ್ನು ಬಿಟ್ಟು ರೈತನ ಆರ್ಥಿಕ ಆದಾಯ ವೃದ್ಧಿಸುವ ಯೋಜನೆ ಕೂಡಾ ಇದೆ. ಇದಲ್ಲದೆ, ಜಲಾನಯನ ಗ್ರಾಮಗಳಲ್ಲಿ ಸ್ವಸಹಾಯ ಗುಂಪು, ಬಳಕೆದಾರರ ಗುಂಪುಗಳನ್ನು ಸೃಜಿಸಲಾಗಿದ್ದು, ಶೇಣಿಕೃತ ಸ್ವಸಹಾಯ ಗುಂಪುಗಳಿಗೆ ಸುತ್ತುನಿಧಿಯನ್ನು ಕೂಡ ಜಲಾನಯನ ಮೇಳ ಏರ್ಪಡಿಸಿ ಚೆಕ್ ಮೂಲಕ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಜಲಾನಯನ ಅಭಿವೃದ್ಧಿ ಇಲಾಖೆ ತಾಂತ್ರಿಕ ಅಧಿಕಾರಿ ವಿ.ಕೆ. ಕಮತರ್ ಅವರು ಮಾತನಾಡಿ, ಈಗಾಗಲೇ ಸರ್ಕಾರೇತರ ಸಂಸ್ಥೆಗಳ ಮೂಲಕ ಜಲಾನಯನ ಗ್ರಾಮಗಳಲ್ಲಿ ಜನಜಾಗೃತಿಗಾಗಿ ಅರಿವು ಮೂಡಿಸುವ ಗ್ರಾಮಸಭೆ, ಜಾಥಾ, ಬೀದಿ ನಾಟಕ ಇತ್ಯಾದಿ ಕಾರ್ಯಕ್ರಮಗಳನ್ನು ಯಶಸ್ವಿ ರೀತಿಯಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು. ತಾಲ್ಲೂಕ ಜಲಾನಯನ ಅಭಿವೃದ್ಧಿ ಅಧಿಕಾರಿ ವೆಂಕಪ್ಪ ಅತ್ತಾರ ಹಾಗೂ ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.
0 comments:
Post a Comment
Click to see the code!
To insert emoticon you must added at least one space before the code.