PLEASE LOGIN TO KANNADANET.COM FOR REGULAR NEWS-UPDATES


ತುಮಕೂರು/ಪಾವಗಡ, ಡಿ.30: ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ದಲಿತರು ಹೊರಳಾಡುವ ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನ ವಿವಾದ ಮಾಸುವ ಮೊದಲೇ ಪಾವಗಡ ತಾಲೂಕಿನ ನಾಗಲಮಡಿಕೆಯ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲೂ ಭಕ್ತಿಯ ಹೆಸರಿನಲ್ಲಿ ಮಡೆಸ್ನಾನ ಪೊಲೀಸರ ಸರ್ಪಗಾವಲಿನಲ್ಲಿ ಯಾವುದೇ ಎಗ್ಗಿಲ್ಲದೆ ಇಂದು ನಡೆದಿದೆ.ಶುಕ್ರವಾರ ಮಧ್ಯಾಹ್ನ ಸುಮಾರು 12:30ಕ್ಕೆ ಸುಬ್ರಹ್ಮಣ್ಯಸ್ವಾಮಿಯ ಬ್ರಹ್ಮರಥೋತ್ಸವ ಮುಕ್ತಾಯವಾದ ನಂತರ ಎಂದಿನಂತೆ ಬ್ರಾಹ್ಮಣರಿಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯದ ಸುತ್ತ ನಿರ್ಮಿಸಿರುವ ಎಂಟು ಅಡಿ ಎತ್ತರದ ಗೋಡೆಯ ಆವರಣದಲ್ಲಿ ಬ್ರಾಹ್ಮಣರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಹೊರ ಭಾಗದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ದಲಿತರು, ಹಿಂದುಳಿದ ವರ್ಗಕ್ಕೆ ಸೇರಿದ ಭಕ್ತ ಸಮೂಹ ಬ್ರಾಹ್ಮಣರು ಊಟ ಮಾಡಿದ ಮುತ್ತುಗದ ಎಲೆಗಳನ್ನು ಹೊರಲು ತುದಿಗಾಲಲ್ಲಿ ನಿಂತಿದ್ದರು. 12:45ರ ಸುಮಾರಿಗೆ ಬ್ರಾಹ್ಮಣರ ಪಂಕ್ತಿ ಊಟ ಮುಗಿದ ಕೂಡಲೇ ಹೊರ ಭಾಗದಲ್ಲಿ ಇದನ್ನೇ ಕಾಯುತ್ತಿದ್ದ ಕೆಳ ವರ್ಗದ ಜನರು ಪೊಲೀಸರನ್ನು ಲೆಕ್ಕಿಸದೆ ದೇವಾಲಯದ ಗೋಡೆಯನ್ನು ಹತ್ತಿ ಎಲೆಗಳನ್ನು ಹೊತ್ತೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.
ಕೆಲವರು ಎಂಜಲು ಎಲೆಯ ಮೇಲೆ ಹೊರಳುತ್ತಿದ್ದರೆ, ಕೆಲವರು ಕೈಗೆ ಸಿಕ್ಕ ಎಂಜಲು ಅನ್ನವನ್ನು ಎರಡು ಕೈಗಳಿಂದ ಬಾಚಿ ತಲೆಯ ಮೇಲಿಟ್ಟುಕೊಂಡು ಸ್ನಾನಕ್ಕೆ ಹೋಗುತ್ತಿದ್ದರು.ಜಿಲ್ಲೆಯಲ್ಲಿ ತೀರ ಹಿಂದುಳಿದ ಮತ್ತು ಗಡಿ ತಾಲೂಕಾಗಿರುವ ಪಾವಗಡದ ಈ ದೇವಾಲಯದಲ್ಲಿ ಹಲವು ದಶಕಗಳಿಂದ ಮಡೆಸ್ನಾನ ಪದ್ಧತಿ ಆಚರಣೆಯಲ್ಲಿದ್ದರೂ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಧಾರ್ಮಿಕ ಭಾವನೆ, ಜನರ ನಂಬಿಕೆ ಎಂಬ ನೆಪ ನೀಡಿ ಅದನ್ನು ತಡೆಯದೆ ಆಚರಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವ ಮೂಲಕ ಸರಕಾರವೇ ಇದನ್ನು ಪೋಷಿಸಿಕೊಂಡು ಬರುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಹಾಲಿ ಈ ಕ್ಷೇತ್ರದ ಶಾಸಕರಾಗಿರುವ ವೆಂಕಟರಮಣಪ್ಪಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯಾಗಿದ್ದರೂ ಬ್ರಹ್ಮ ರಥೋತ್ಸವವನ್ನು ಉದ್ಘಾಟಿಸಿ ಬ್ರಾಹ್ಮಣರು ಉಂಡ ಎಲೆಯನ್ನು ದಲಿತರು ಹೊತ್ತುಕೊಂಡು ಹೋಗುತ್ತಿದ್ದ ಮೌಢ್ಯದ ಆಚರಣೆಗೆ ಸಾಕ್ಷಿಯಾದರು. ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಪಕ್ಕದಲ್ಲಿಯೇ ಹರಿಯುವ ಉತ್ತರ ಪಿನಾಕಿನಿ ನದಿಯಲ್ಲಿ ನೀರು ದಿನೇ ದಿನೇ ಕಡಿಮೆಯಾಗಿ ಭಕ್ತರು ಸಂಪೂರ್ಣವಾಗಿ ಮುಳುಗಿ ಸ್ನಾನ ಮಾಡಲು ನೀರಿಲ್ಲ. ಭಕ್ತರಿಗೆ ಎಂಜಲು ಎಲೆ ಹೊತ್ತು ಸ್ನಾನ ಮಾಡಲು ಜಿಲ್ಲಾಡಳಿತವೇ ಪರ್ಯಾಯ ವ್ಯವಸ್ಥೆ ಮಾಡಿದ್ದು, ನದಿ ತಟದಲ್ಲಿಯೇ ಐದಾರು ಕಡೆ ದೊಡ್ಡ ತೊಟ್ಟಿಗಳನ್ನು ಮಾಡಿ ಭಕ್ತರು ಸ್ನಾನ ಮಾಡಲು ಅನುಕೂಲ ಕಲ್ಪಿಸಿತ್ತು.
ಈ ದೇವಾಲಯಕ್ಕೆ ಪಾವಗಡ ತಾಲೂಕು ಅಲ್ಲದೆ ನೆರೆಯ ಆಂಧ್ರದ ವಿವಿಧ ಜಿಲ್ಲೆಗಳ ಭಕ್ತರು ಆಗಮಿಸಿ ತಮ್ಮ ಹರಕೆ ತೀರಿಸುತ್ತಿದ್ದು, ಚಿತ್ರದುರ್ಗ, ಕೋಲಾರ, ಬಳ್ಳಾರಿ, ಬೆಂಗಳೂರು ಹೀಗೆ ನಾನಾ ಕಡೆಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ಈ ಮಡೆಸ್ನಾನದಲ್ಲಿ ಭಾಗವಹಿಸುತ್ತಿರುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಕಳೆದ 13 ವರ್ಷಗಳಿಂದಲೂ ಮಡೆಸ್ನಾನದ ಬಗ್ಗೆ ದಲಿತ ಸಂಘಟನೆಗಳು,ಪ್ರಗತಿಪರ ಚಿಂತಕರು ವಿರೋಧ ವ್ಯಕ್ತಪಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ವರ್ಷದಿಂದ ವರ್ಷಕ್ಕೆ ಪೊಲೀಸ್ ಬಂದೋಬಸ್ತ್ ಹೆಚ್ಚುತ್ತಿದ್ದು, ವಿವಾದಗಳು ಉಂಟಾದಂತೆ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಭಕ್ತರು ಮಡೆಸ್ನಾನಕ್ಕೆ ಮುಗಿ ಬೀಳುತ್ತಿರುವುದು ಕಂಡು ಬರುತ್ತಿದೆ.
30 Dec 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top