ಬಳ್ಳಾರಿ: ಗಾಯಗೊಂಡ ಪಾಲಿಕೆ ಸದಸ್ಯ ಸಂಜಯ್
ಬಳ್ಳಾರಿ: ಪಾಲಿಕೆ ಸದಸ್ಯರೊಬ್ಬರ ಭದ್ರತಾ ಸಿಬ್ಬಂದಿಯೊಬ್ಬರ ಬಂದೂಕಿನಿಂದ ಆಕಸ್ಮಿವಾಗಿ ಗುಂಡು ಹಾರಿ, 10 ಜನರಿಗೆ ಗಾಯಗಳಾದ ಘಟನೆ ನಗರದ ಮೋಕಾ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಆವರಣದಲ್ಲಿ ರಾತ್ರಿ 8.25ರ ಸುಮಾರಿಗೆ ಸಂಭವಿಸಿದೆ.
ಪಾಲಿಕೆ ಸದಸ್ಯ ಸಂಜಯ್ ಅವರ ಭದ್ರತೆಗಾಗಿ ನಿಯುಕ್ತಿಗೊಂಡಿದ್ದ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಕಾನ್‌ಸ್ಟೆಬಲ್ ಪುರುಷೋತ್ತಮ ಎಂಬುವವರ 9 ಎಂಎಂ ಸ್ಟೆನ್‌ಗನ್‌ನಿಂದ 20 ಸುತ್ತು ಗುಂಡುಗಳು ಹಾರಿದ್ದು, ಎಲ್ಲ ಗುಂಡುಗಳೂ ನೆಲಕ್ಕೆ ತಾಕಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬುಧವಾರ ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆಯಲಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ವಾಹನದಲ್ಲಿ ಆಗತಾನೇ ಬಂದ ಸಂಜಯ್ ಹಾಗೂ ಅವರೊಂದಿಗಿದ್ದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್, ಕಚೇರಿಯ ಬಾಗಿಲ ಬಳಿ ಬಂದಾಗ ದಿಢೀರ್ ಗುಂಡಿನ ಮೊರೆತವಾಯಿತು.
ಗುಂಡು ತಾಕಿದ ರಭಸಕ್ಕೆ ನೆಲದಲ್ಲಿದ್ದ ಚಿಕ್ಕಚಿಕ್ಕ ಕಲ್ಲುಗಳು ಸಿಡಿದು ಸಂಜಯ್, ವಿನೋದ್ ಒಳಗೊಂಡಂತೆ ಅಲ್ಲೇ ಇದ್ದ 10ಕ್ಕೂ ಹೆಚ್ಚು ಜನರಿಗೆ ತಾಕಿದ್ದರಿಂದ ಕಾಲು, ಎದೆ ಮತ್ತು ಬೆನ್ನುಗಳಿಗೆ ತರಚಿದ ಗಾಯಗಳಾಗಿವೆ. ಗಾಯಗೊಂಡವರೆಲ್ಲ ತಕ್ಷಣ ಸ್ವಯಂ ಆಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಇಂದೇ ನೇಮಕಗೊಂಡಿದ್ದ: ಉಪಚುನಾವಣೆ ನಾಮಪತ್ರ ಪ್ರಕ್ರಿಯೆ ಆರಂಭವಾಗುವವರೆಗೂ ಬಿ.ಶ್ರೀರಾಮುಲು ಪರ ಇದ್ದ ಪಾಲಿಕೆ ಸದಸ್ಯ ಸಂಜಯ್, ಬಿಜೆಪಿ ಅಭ್ಯರ್ಥಿ ಪಿ. ಗಾದಿಲಿಂಗಪ್ಪ ನಾಮಪತ್ರ ಸಲ್ಲಿಸಿದ ನಂತರ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಬೆಂಬಲ ಸೂಚಿಸಿ, ಬಿಜೆಪಿಯೊಂದಿಗೇ ಗುರುತಿಸಿಕೊಂಡಿದ್ದರು.
ಕಳೆದ ನಾಲ್ಕೈದು ದಿನಗಳ ಹಿಂದೆ ಭದ್ರತೆ ನೀಡುವಂತೆ ಅವರು ಪೊಲೀಸರಿಗೆ ಮೌಖಿಕವಾಗಿ ಮನವಿ ಮಾಡಿಕೊಂಡಿದ್ದರಿಂದ, ಮಂಗಳವಾರ ಸಂಜೆ 7ರ ಸುಮಾರಿಗೆ ಪುರುಷೋತ್ತಮನನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಇತ್ತೀಚೆಗಷ್ಟೇ ಶಸ್ತ್ರಾಸ್ತ್ರ ತರಬೇತಿ ಮುಗಿಸಿಕೊಂಡು ಬಂದಿದ್ದ ಪುರುಷೋತ್ತಮನ ಅಚಾತುರ್ಯದಿಂದ, ಆಕಸ್ಮಿಕವಾಗಿ ಗುಂಡು ಹಾರಿದೆ. ಘಟನೆ ಕುರಿತು ಡಿವೈಎಸ್‌ಸ್‌ಪಿ ಒಬ್ಬರನ್ನು ನಿಯೋಜಿಸಿ ತನಿಖೆಗೆ ಆದೇಶಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಘಟನಾ ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
25 ಅಡಿ ದೂರದಲ್ಲಿದ್ದವರಿಗೂ ಕಲ್ಲು ಸಿಡಿದು ಸಣ್ಣಪುಟ್ಟ ಗಾಯಗಳಾಗಿವೆ. ಒಂದೊಮ್ಮೆ ಸ್ಟೆನ್‌ಗನ್ ಅನ್ನು ನೇರವಾಗಿ ಹಿಡಿದಿದ್ದರೆ ಅನೇಕರ ಪ್ರಾಣಹಾನಿ ಸಂಭವಿಸುತ್ತಿತ್ತು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ ಹಾಗೂ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಕೆ.ರಾಮಲಿಂಗಪ್ಪ ವಿವರಿಸಿದರು.
ಘಟನಾ ಸ್ಥಳದಲ್ಲಿ 12 ಗುಂಡುಗಳು ದೊರೆತಿದ್ದು, ಪುರುಷೋತ್ತಮನಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಇದೀಗ ಆತನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಪಟಾಕಿ ಸಿಡಿದ ಸಪ್ಪಳವಾಯಿತು. ನೋಡಿದರೆ ಕೆಲವರಿಗೆ ರಕ್ತ ಬಂದಿತ್ತು. ನೆಲದಲ್ಲಿ ಗುಂಡುಗಳು ಬಿದ್ದಿದ್ದವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
0 comments:
Post a Comment
Click to see the code!
To insert emoticon you must added at least one space before the code.