PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಅ.: ಲಂಚ ತೆಗೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದ ಕೆಜಿಎಫ್ ಶಾಸಕ ವೈ.ಸಂಪಂಗಿ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ಲಂಚ ಪ್ರಕರಣದಲ್ಲಿ ಜಾಮೀನು ನೀಡುವ ವೇಳೆ ಕೋರ್ಟ್ ವಿಧಿಸಿದ್ದ ಷರತ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಾಸಕ ಸಂಪಂಗಿಯನ್ನು ನ್ಯಾಯಾಂಗ ಬಂಧನದ ವಶಕ್ಕೆ ಒಪ್ಪಿಸಿ ಲೋಕಾಯುಕ್ತ ವಿಶೇಷ ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ದೂರುದಾರ ಫಾರೂಕ್ ಹಾಗೂ ಸಾಕ್ಷಿ ಅರುಣ್ ಕುಮಾರ್ ಎಂಬವರಿಗೆ ಸಂಪಂಗಿ ಕೊಲೆ ಬೆದರಿಕೆ ಹಾಕಿರುವುದು ಮತ್ತು ಸಾಕ್ಷಗಳ ನಾಶಕ್ಕೆ ಯತ್ನಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, 2 ವರ್ಷಗಳ ಹಿಂದೆ ನೀಡಿದ್ದ ಜಾಮೀನನ್ನು ಸಿಆರ್‌ಪಿಸಿ ಸೆಕ್ಷನ್ 439(2)ರಡಿ ರದ್ದುಗೊಳಿಸಿದ ನ್ಯಾ.ಎನ್.ಕೆ.ಸುಧೀಂದ್ರ ರಾವ್, ಸಾಕ್ಷಿಗಳ ವಿಚಾರಣೆ ಅಂತ್ಯಗೊಳ್ಳುವವರೆಗೆ ಸಂಪಂಗಿಯನ್ನು ನ್ಯಾಯಾಂಗ ಬಂಧನದ ವಶಕ್ಕೆ ಒಪ್ಪಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿದರು.
ಇದರೊಂದಿಗೆ ಬಿಜೆಪಿಯ ಮತ್ತೊಬ್ಬ ಶಾಸಕ ಜೈಲು ಸೇರಿದಂತಾಗಿದ್ದು, ಸಂಪಂಗಿ ಜೈಲು ಸೇರಿರುವುದರಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ‘ವಿಐಪಿ’ಗಳ ಸಂಖ್ಯೆ ಏರಿದೆ. ಅಲ್ಲದೆ, ಭೂ ಹಗರಣದ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಂಪಂಗಿ ಸಾಥ್ ನೀಡಿದಂತಾಗಿದೆ. ‘ವೈ’.ಸಂಪಂಗಿಗೆ ಜೈಲು: ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ವೇಳೆ ಜಾಮೀನಿಗಾಗಿ ಸಂಪಂಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಜಾಮೀನು ಮಂಜೂರು ಮಾಡುವಾಗ ‘ಯಾವುದೇ ಕಾರಣಕ್ಕೂ ಪ್ರತ್ಯಕ್ಷವಾಗಲಿ ಅಥವಾ ಪರೋಕ್ಷವಾಗಲಿ ದೂರುದಾರ ಹಾಗೂ ಸಾಕ್ಷಿದಾರನನ್ನು ಸಂಪರ್ಕಿಸಬಾರದು. ಅವರನ್ನು ಬೆದರಿಸುವ, ಒತ್ತಡ ಹೇರುವ ಮತ್ತು ಮಾನಸಿಕ ಅಥವಾ ದೈಹಿಕ ಕಿರುಕುಳ ನೀಡುವ ಪ್ರಯತ್ನ ಮಾಡಬಾರದು ಎಂದು ಕೋರ್ಟ್ ಸಂಪಂಗಿಗೆ ಷರತ್ತು ವಿಧಿಸಿತ್ತು.ಅಗ್ರಹಾರಕ್ಕೆ ಶಾಸಕ ಸಂಪಂಗಿ
ಆದರೆ, ಸಂಪಂಗಿಯ ದೂರನ್ನು ಹಿಂಪಡೆಯುವಂತೆ ದೂರುದಾರ ಹುಸೇನ್ ಮುಈನ್ ಫಾರೂಕ್ ಮತ್ತ ಸಾಕ್ಷಿದಾರ ಅರುಣ್ ಕುಮಾರ್‌ರ ಮೇಲೆ ಒತ್ತಡ ಹೇರುತ್ತಿದ್ದು, ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಕೋರ್ಟ್‌ನ ಷರತ್ತುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ ನ್ಯಾಯಾಧೀಶರು, ಸಂಪಗಿಗೆ ಈ ಹಿಂದೆ ನೀಡಿದ್ದ ಜಾಮೀನು ರದ್ದುಗೊಳಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಿದರು.
ನಾಳೆ ಸಾಕ್ಷಿಗಳ ವಿಚಾರಣೆ: ಪ್ರಕರಣದ ಸಾಕ್ಷಿಗಳ ವಿಚಾರಣೆಯ ಅಂತ್ಯದವರೆಗೆ ಸಂಪಂಗಿಯನ್ನು ಜೈಲಿಗೆ ಕಳುಹಿಸಿರುವ ನ್ಯಾಯಾಧೀಶರು, ನಾಳೆ ದೂರುದಾರ ಹುಸೇನ್ ಮುಈನ್ ಫಾರೂಕ್ ಮತ್ತು ಸಾಕ್ಷಿದಾರ ಅರುಣ್ ಕುಮಾರ್‌ರ ವಿಚಾರಣೆ ನಡೆಸಲಿದ್ದಾರೆ. ಪ್ರಕರಣದ ಸಂಬಂಧ ಅವರಿಂದ ಹೇಳಿಕೆ ಪಡೆದು ಕೊಳ್ಳಲಿದ್ದು, ಸಂಪಂಗಿಯ ಪರ ವಕೀಲರು ದೂರುದಾರನ್ನು ಪ್ರಕರಣದ ಕುರಿತು ಪ್ರಶ್ನಿಸಲಿದ್ದಾರೆ.
ಸಂಪಂಗಿ ವಿರುದ್ಧ ಫಾರೂಕ್ ಆರೋಪ: 
 ಶುಕ್ರವಾರ ಬೆಳಗ್ಗೆ ವಿಚಾರಣೆ ಪ್ರಾರಂಭವಾದಾಗ ದೂರುದಾರ ಫಾರೂಕ್, ಸಂಪಂಗಿಯ ಜಾಮೀನು ರದ್ದತಿ ಕೋರಿ ಅರ್ಜಿ ಸಲ್ಲಿಸಿದರು. ಸಂಪಂಗಿಯ ದೂರನ್ನು ಹಿಂಪಡೆಯುವಂತೆ ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ದೂರು ಹಿಂಪಡೆಯದಿದ್ದಲ್ಲಿ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ದಿನ ನಿತ್ಯವೂ ಒಂದಲ ಒಂದು ರೀತಿಯಲ್ಲಿ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಬ್ರೈನ್ ಟ್ಯೂಮರ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳುತ್ತಿದ್ದ ತನ್ನ ತಾಯಿ-ತಂದೆ ಸಂಪಂಗಿಯ ಕಿರುಕುಳದಿಂದ ಸಾವನ್ನಪ್ಪಿದ್ದಾರೆ. ಸಚಿವ ರೇಣುಕಾಚಾರ್ಯ ಕೂಡ ತನ್ನನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದರು.
ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ರಕ್ಷಣೆ ಒದಗಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅವರಿಗೆ ಹೈಕೋರ್ಟ್‌ನ ಆದೇಶದ ಮೇರೆಗೆ 6 ತಿಂಗಳಿಂದ ರಕ್ಷಣೆ ಒದಗಿಸಲಾಗಿದೆ. ಇದರ ಬಳಿಕವೂ ಬೆದರಿಕೆ ಮುಂದುವರಿದ ಕಾರಣ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದರ ಜೊತೆಗೆ ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್‌ರಿಗೂ ಫಾರೂಕ್ ಪತ್ರ ಬರೆದಿದ್ದರು. ತಾನು ಕೋರ್ಟ್‌ಗೆ ಹಾಜರಾಗುವುದನ್ನು ತಪ್ಪಿಸಲು ತನ್ನ ವಿರುದ್ದ ರಾಬರ್ಟ್‌ಸನ್ಸ್ ಪೋಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲು ಮಾಡಲಾಗಿದೆ. ಯಾವ ಕ್ಷಣದಲ್ಲಿ ಯಾವ ಅಪಾಯ ಸಂಭವಿಸುತ್ತದೆಯೋ ಎಂದು ತಾನು ಹಾಗೂ ತನ್ನ ಕಟುಂಬದ ಸದಸ್ಯರು ಪ್ರತಿಕ್ಷಣ ಭಯದಿಂದ ಜೀವಿಸುತ್ತಿದ್ದೇವೆ.ಇದರಿಂದ ಸಂಪಂಗಿಯ ಜಾಮೀನು ರದ್ದುಗೊಳಿಸಬೇಕೆಂದು ಫಾರೂಕ್ ಕೋರ್ಟನ್ನು ಕೋರಿದ್ದರು.
ಸದನ ಸಮಿತಿಯ ವಿರುದ್ದ ದೂರು ದಾಖಲು:   ದೂರು ದಾಖಲಾದನಂತರ ಈ ಸಂಬಂಧ ವಿಚಾರಣೆಗೆ ರಚಿಸಿದ ವಿಧಾನಸಭೆಯ ಸದನ ಸಮಿತಿಯು ತನ್ನನ್ನು ಸತತವಾಗಿ ವಿಚಾರಣೆಗೆ ಒಳಪಡಿಸಿತು. ಅಲ್ಲದೆ ಕೋರ್ಟ್‌ನಲ್ಲಿ ಪ್ರಮಾಣದ ಪತ್ರ ಸಲ್ಲಿಸಿ ದೂರನ್ನು ಹಿಂಪಡೆಯುವಂತೆ ಸಮಿತಿ ಒತ್ತಾಯಿಸಿತ್ತು. ಪ್ರಕರಣ ವಿಚಾರಣೆಯು ಕೋರ್ಟ್‌ನಲ್ಲಿ ಬಾಕಿಯಿದ್ದರೂ ಹಾಗೂ ದೋಷಾರೋಪ ಪಟ್ಟಿ ಸಲ್ಲಿಸಿದರೂ ಆರೋಪಿ ಸಂಪಂಗಿಗೆ ಕ್ಲೀನ್ ಚಿಟ್ ನೀಡಿತು. ಈ ಹಿನ್ನೆಲೆಯಲ್ಲಿ ಸದನ ಸಮಿತಿಯ ವಿರುದ್ಧ ಖಾಸಗಿ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ಫಾರೂಕ್ ವಿನಂತಿಸಿದರು.
ಪ್ರಕರಣವೇನು?: ಕೆಜಿಎಫ್ ಮೂಲದ ಫಾರೂಕ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ನಿಂದ ಅವರ ಹೆಸರು ಕೈಬಿಡವಂತೆ ಪೋಲೀಸ್ ಅಧಿಕಾರಿ ಪಾಷಾರನ್ನು ಮನವೊಲಿಸಲು ಮತ್ತು ವ್ಯವಾರಹದಲ್ಲಿ ತಲೆದೋರಿದ್ದ ಸಮಸ್ಯೆ ಪರಿಹರಿಸಲು ಸಂಪಂಗಿ ರೂ. 5 ಲಕ್ಷ ಲಂಚ ಕೇಳಿದ್ದರು. ಈ ಸಂಬಂಧ 50 ಸಾವಿರ ನಗದು ಹಾಗೂ ಉಳಿದ ಮೊತ್ತದ ಚೆಕ್ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೋಲೀಸರು ಸಂಪಗಿಯನ್ನು ಬಂಧಿಸಿದ್ದರು
28 Oct 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top