PLEASE LOGIN TO KANNADANET.COM FOR REGULAR NEWS-UPDATES


ಮುಗಿಲು ಮುಟ್ಟಿದೆ ಪ್ರಚಾರದ ಭರಾಟೆ * ರಣರಂಗವಾಗಿರುವ ಕೊಪ್ಪಳ - ಗೆಲುವಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ರಣತಂತ್ರ  *ಇಂದು ಬಹಿರಂಗ ಪ್ರಚಾರ ಅಂತ್ಯ

ಕೊಪ್ಪಳ, ಸೆ.23: ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕೇವಲ ಮೂರು ದಿನ ಬಾಕಿ ಉಳಿದಿದೆ. ಗೆಲುವಿಗಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ರಣತಂತ್ರ ರೂಪಿಸಿದ್ದು, ಪಕ್ಷದ ಪ್ರಚಾರದ ಭರಾಟೆ ಕೂಡಾ ಮುಗಿಲು ಮುಟ್ಟಿದೆ. ಮೂರೂ ಪಕ್ಷಗಳು ಚುನಾವಣೆ ಯನ್ನು ಪ್ರತಿಷ್ಠೆಯಾಗಿ ತೆಗೆದು ಕೊಂಡಿರುವುದರಿಂದ ಪಕ್ಷದ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದು, ಕೊಪ್ಪಳವಂತೂ ರಣರಂಗ ದಂತೆ ಭಾಸವಾಗುತ್ತಿದೆ. ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಶಾಸಕ ಕರಡಿ ಸಂಗಣ್ಣ, ‘ಆಪರೇಷನ್ ಕಮಲ’ದ ಮೂಲಕ ಬಿಜೆಪಿಯ ಪಾಲಾದ ಹಿನ್ನೆಲೆಯಲ್ಲಿ ಉಪಚುನಾವಣೆ ಏರ್ಪಟ್ಟಿದ್ದು, ಸಂಗಣ್ಣನವರ ಗೆಲುವಿಗಾಗಿ ಬಿಜೆಪಿ ಸರಕಾರವೇ ಟೊಂಕ ಕಟ್ಟಿ ನಿಂತಿದೆ.  ಇನ್ನೊಂದೆಡೆ ಕಾಂಗ್ರೆಸ್ ನಾಯಕರ ದಂಡೇ ಕೊಪ್ಪಳ ದಲ್ಲಿ ಬೀಡುಬಿಟ್ಟಿದ್ದು, ತಮ್ಮ ಪಕ್ಷದ ಅಭ್ಯರ್ಥಿ ಬಸವರಾಜ ಹಿಟ್ನಾಳ್‌ರ ಗೆಲುವಿಗಾಗಿ ಹಗಲಿರುಳು ಪ್ರಚಾರದಲ್ಲಿ ನಿರತರಾಗಿದ್ದಾರೆ.
ಮತ್ತೊಂದೆಡೆ ಪಕ್ಷಕ್ಕೆ ಸಡ್ಡು ಹೊಡೆದು ಬಿಜೆಪಿ ಸೇರಿ ರುವ ಸಂಗಣ್ಣನವರ ವಿರುದ್ಧ ಜಯ ಗಳಿಸುವ ಮೂಲಕ ಮತ್ತೆ ಕ್ಷೇತ್ರವನ್ನು ಪಕ್ಷದ ತೆಕ್ಕೆಗೆ ಸೇರಿಸಿಕೊಳ್ಳಲು ಜೆಡಿಎಸ್ ನಾಯಕರು ತಮ್ಮ ಪಕ್ಷದ ಅಭ್ಯರ್ಥಿ ಪ್ರದೀಪ್ ಗೌಡರ ಪರ ಗೆಲುವಿಗಾಗಿ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ.
ಪ್ರಮುಖ ಪಕ್ಷಗಳ ನಾಯಕರಿಂದ ರೋಡ್ ಶೋ
ನಾಳೆ ಚುನಾವಣಾ ಬಹಿರಂಗ ಪ್ರಚಾರ ಕೊನೆಗೊಳ್ಳ ಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರೋಡ್ ಶೋ ನಡೆಸಿ ಮತ ಯಾಚಿಸಿದರು.
ಬಿಜೆಪಿ ಅಬ್ಬರದ ರೋಡ್ ಶೋ ನಡೆಸಿದ್ದು, ಈ ರೋಡ್ ಶೋನಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಂಸದ ಅನಂತ ಕುಮಾರ್ ಸೇರಿದಂತೆ ಹೆಚ್ಚಿನ ಸಚಿವರೆಲ್ಲರೂ ಪಾಲ್ಗೊಂಡಿದ್ದರು. ಪ್ರಚಾರದ ವೇಳೆ ಅಬಕಾರಿ ಸಚಿವ ರೇಣುಕಾಚಾರ್ಯರ ಡ್ಯಾನ್ಸ್ ಎಲ್ಲರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸದಾನಂದ ಗೌಡ, ತಮ್ಮ ಪಕ್ಷದ ಅಭ್ಯರ್ಥಿ ಕರಡಿ ಸಂಗಣ್ಣ ನನ್ನು ಗೆಲುವು ನಿಶ್ಚಿತ. ಅವರ ವಿರುದ್ಧವಾಗಿ ಏನೇ ಅಪಪ್ರಚಾರ ಮಾಡಿದರೂ, ಕೊಪ್ಪಳದ ಜನ ಕುರಿಗಳಲ್ಲ. ಅವರಿಗೆ ಸತ್ಯ ಏನೆಂಬುದು ಗೊತ್ತಿದೆ. ಜನರೇ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ಗಳಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಕಾಂಗ್ರೆಸ್‌ನ ಅಗ್ರಗಣ್ಯರು ಕೂಡಾ ರೋಡ್ ಶೋ ನಡೆಸಿ ಬಸವರಾಜ ಹಿಟ್ನಾಳ್ ಪರ ಮತ ಯಾಚಿಸಿದರು. ಈ ಭಾಗದ ಪ್ರಚಾರದಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಧರ್ಮ ಸಿಂಗ್, ಸಿ.ಎಂ.ಇಬ್ರಾಹೀಂ ಸೇರಿದಂತೆ ಹಲವರು ತೊಡಗಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಕೂಡಾ ತಮ್ಮ ಅಭ್ಯರ್ಥಿಯ ಪರ ಬೀದಿ ಬೀದಿಗಳಲ್ಲಿ ಚುನಾ ವಣಾ ಪ್ರಚಾರ ಕಾರ್ಯ ನಡೆಸುತ್ತಿದೆ. ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಸ್.ಬಂಗಾರಪ್ಪ, ರೇವಣ್ಣ, ಝಮೀರ್ ಅಹ್ಮದ್ ಖಾನ್, ಬಸವರಾಜ ಹೊರಟ್ಟಿ, ಇಂದು ಕೊಪ್ಪಳ ನಗರದಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದರು.
ಪ್ರಮುಖ ಸಮುದಾಯದಾ ಓಲೈಕೆಗೆ ಕಸರತ್ತು
ಕುರುಬ, ನಾಯಕ, ಲಿಂಗಾಯಿತ, ಮುಸ್ಲಿಂ, ಪಂಚಮಶಾಲಿ, ರೆಡ್ಡಿ ಸೇರಿದಂತೆ ಪ್ರಮುಖ ಸಮುದಾಯಗಳ ಮತದಾರರ ಓಲೈಕೆಯಲ್ಲಿ ಮೂರೂ ಪಕ್ಷಗಳ ನಾಯಕರು ತೊಡಗಿದ್ದಾರೆ. ಬಿಜೆಪಿ ಲಿಂಗಾಯಿತ ಮುಖಂಡರಾದ ಮಾಜಿ ಸಿಎಂ ಯಡಿಯೂ ರಪ್ಪ, ಕುರುಬ ಸಮುದಾಯದ ಈಶ್ವರಪ್ಪ, ನಾಯಕ ಸಮುದಾಯದ ಸಚಿವ ರಾಜೂ ಗೌಡರನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮತದಾರರ ಓಲೈಕೆಗೆ ಮುಂದಾಗಿದೆ.
ಕಾಂಗ್ರೆಸ್ ಸಿದ್ದರಾಮಯ್ಯ, ಡಾ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಸಿ.ಎಂ.ಇಬ್ರಾಹೀಂ, ಇಕ್ಬಾಲ್ ಅನ್ಸಾರಿ ಮತ್ತಿತರರನ್ನು ಚುನಾವಣಾ ಪ್ರಚಾರದ ಅಖಾಡಕ್ಕಿಳಿಸಿ, ಕುರುಬ, ಮುಸ್ಲಿಂ, ನಾಯಕ, ಲಿಂಗಾಯಿತ ಸಮುದಾಯಗಳ ಮತದಾರರನ್ನು ತನ್ನತ್ತ ಸೆಳೆಯುವ ರಣತಂತ್ರ ನಡೆಸಿದೆ. ಇನ್ನೊಂದೆಡೆ ಜೆಡಿಎಸ್ ಕೂಡಾ ವಿವಿಧ ಸಮುದಾಯಗಳ ಮತದಾರರನ್ನು ಓಲೈಸುವಲ್ಲಿ ಹಿಂದೆ ಬಿದ್ದಿಲ್ಲ. ಕುಮಾರಸ್ವಾಮಿ, ಬಸವನ ಗೌಡ ಯತ್ನಾಳ್, ಬಸವರಾಜ ಹೊರಟ್ಟಿ, ಝಮೀರ್ ಅಹ್ಮದ್ ಖಾನ್, ಬಂಗಾರಪ್ಪ ರನ್ನು ಪ್ರಚಾರದಲ್ಲಿ ತೊಡಗಿಸಿಕೊಂಡಿದೆ.
ಬಿಜೆಪಿ ಅಭ್ಯರ್ಥಿಯ ಪರ ‘ಸರಕಾರದ ಪ್ರಚಾರ’
17ಕ್ಕೂ ಹೆಚ್ಚು ಕಡೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಈ ಹಿಂದೆ ನಡೆದು ಕೊಂಡು ಬಂದಂತೆ, ಈ ಬಾರಿಯೂ ಸರಕಾರದ ಪ್ರಾಯೋಜಕತ್ವದಲ್ಲಿಯೇ ಚುನಾವಣೆಯನ್ನು ಎದುರಿಸುತ್ತಿದೆ. ರಾಜ್ಯ ಸರಕಾರದ ಬಹುತೇಕ ಸಚಿವರೆಲ್ಲರೂ ಕಳೆದ ಹಲವು ದಿನಗಳಿಂದ ಆಡಳಿತ ನಡೆಸುವುದನ್ನು ಬಿಟ್ಟು ಕೊಪ್ಪಳದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಕರಡಿ ಸಂಗಣ್ಣ ನವರ ಪರ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಸಚಿವರು ಕಾಣಿಸುತ್ತಿರುವುದೇ ಅಪರೂಪವಾಗಿದೆ. ಕೊಪ್ಪಳ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಶತಾಯುಗತಾಯ ಗೆಲ್ಲಲೇ ಬೇಕೆಂಬ ಹಠದಲ್ಲಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳದ ಬೀದಿ ಬೀದಿಗ ಳಲ್ಲಿ ಸಚಿವರ ದಂಡೇ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ಸದಾನಂದ ಗೌಡ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬೆನ್ನಲ್ಲೆ ಯಡಿಯೂರಪ್ಪ ಹಾಗೂ ಅವರ ಆಪ್ತ ಸಚಿವರೆಲ್ಲರೂ ಕೊಪ್ಪಳದಲ್ಲಿಯೇ ಬೀಡು ಬಿಟ್ಟಿದ್ದು, ಚುನಾವಣಾ ಪ್ರಚಾರದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಈ ಮಧ್ಯೆ ಬಿಜೆಪಿ ಸಚಿವರು, ನಾಯಕರು ತಮ್ಮ ಅಭ್ಯರ್ಥಿಯ ಪರ ಪ್ರಚಾರ ನಡೆಸುವಲ್ಲೆಲ್ಲ ಮತದಾರರಿಗೆ ನೋಟಿನ ಕಂತೆ ಹಂಚುತ್ತಿದ್ದಾರೆ. ಜೊತೆಗೆ ಇಡೀ ಸರಕಾರವನ್ನೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಕಣದಲ್ಲಿರುವ ಅಭ್ಯರ್ಥಿಗಳ ವಿವರ
ಚುನಾವಣೆಗೆ ಒಟ್ಟು 19 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಐವರು ನಾಮಪತ್ರ ಹಿಂತೆಗೆದುಕೊಂಡ ಕಾರಣ 14 ಮಂದಿ ಅಂತಿಮ ಕಣದಲ್ಲಿದ್ದಾರೆ. ಕರಡಿ ಸಂಗಣ್ಣ(ಬಿಜೆಪಿ), ಪ್ರದೀಪ್ ಗೌಡ(ಜೆಡಿಎಸ್), ಬಸವರಾಜ ಹಿಟ್ನಾಳ್(ಕಾಂಗ್ರೆಸ್), ಶರಣಪ್ಪ ಗೌಡ(ಆರ್‌ಪಿಐ), ಎಹಸಾನುಲ್ಲಾ ಪಟೇಲ್ (ಪಕ್ಷೇತರ), ನಿರ್ಮಲಾ ಮಲ್ಲಿಕಾರ್ಜುನ(ಪ), ಕರಡಿ ಬಸವರಾಜ(ಪ), ಮನ್ಸೂರ್ ಬಾಷಾ(ಪ), ಕರಾಟೆ ವೌನೇಶ್(ಪ), ಯಮನೂರಪ್ಪ ಮರಿಯಪ್ಪ(ಪ), ರಾಮುಲು(ಪ), ವಿಠ್ಠಪ್ಪ ಗೋರಂಟ್ಲಿ(ಪ), ಸಣ್ಣ ವೌಲಸಾಬ(ಪ) ಹಾಗೂ ಹಿರೇಮಠ(ಪ).

ಕ್ಷೇತ್ರದ ವಿವರ

ಕೊಪ್ಪಳ ಕ್ಷೇತ್ರದಲ್ಲಿ ಒಟ್ಟು 1,88,196 ಮತದಾರರಿದ್ದಾರೆ. ಈ ಪೈಕಿ 95,467 ಪುರುಷ ಮತದಾರರು ಹಾಗೂ 92,779 ಮಹಿಳಾ ಮತದಾರರಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆಯ 18 ಪ್ರಕರಣ ದಾಖಲು
ಕೊಪ್ಪಳ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ, ಹೇಗಾದರೂ ಗೆಲ್ಲಲೇ ಬೇಕೆಂಬ ಹಠದಿಂದ ಚುನಾವಣಾ ನೀತಿ ಸಂಹಿತೆಗೆ ಬೆಲೆಯೇ ನೀಡುತ್ತಿಲ್ಲ ಎಂಬ ಆರೋಪ ದಟ್ಟವಾಗಿದೆ. ಒಟ್ಟು 18 ಪ್ರಕರಣಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ದಾಖಲಾಗಿದ್ದು, ಈ ಪೈಕಿ ಹೆಚ್ಚಿನ ಪ್ರಕರಣಗಳು ಬಿಜೆಪಿ ನಾಯಕರ ವಿರುದ್ಧವೇ ದಾಖಲಾಗಿವೆ. ಯಡಿಯೂರಪ್ಪ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರಿಗೆ ನಗದು ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರೆ, ಮತ್ತೊಂದೆಡೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸರಕಾರಿ ಶಾಲಾ ಶಿಕ್ಷಕರ ಸಭೆ ನಡೆಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಮತದಾರರನ್ನು ಓಲೈಸಲು ಮದ್ಯ ವಿತರಣೆ ಮಾಡಿದ್ದು, ನಗದು ಹಣ ನೀಡಿರುವ ಪ್ರಕರಣಗಳು ದಾಖಲಾಗಿವೆ.
14 ಮಂದಿ ಅಂತಿಮ ಕಣದಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ, ಕಾಂಗ್ರೆಸ್‌ನ ಬಸವರಾಜ ಹಿಟ್ನಾಳ್, ಜೆಡಿಎಸ್‌ನ ಪ್ರದೀಪ್ ಗೌಡ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತದಾರರ ಓಲೈಕೆಗೆ ಕಸರತ್ತು
ಕುರುಬ, ನಾಯಕ, ಲಿಂಗಾಯತ, ಮುಸ್ಲಿಂ, ಪಂಚಮಶಾಲಿ, ರೆಡ್ಡಿ ಸೇರಿದಂತೆ ಪ್ರಮುಖ ಸಮುದಾಯಗಳ ಮತದಾರರ ಓಲೈಕೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಂದ ಕಸರತ್ತು.
ಸುಪ್ರೀಂ ಆದೇಶಕ್ಕೆ ಸರಕಾರ ಬದ್ಧ: ಸಿಎಂ
ಕೊಪ್ಪಳ, ಸೆ.23: ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ಕುರಿತು ಸಿಬಿಐ ತನಿಖೆಗೆ ಸಿಇಸಿ ಸುಪ್ರಿಂ ಕೋರ್ಟಿಗೆ ಶಿಫಾರಸು ಮಾಡಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸುಪ್ರಿಂ ಕೋರ್ಟ್ ನೀಡುವ ಆದೇಶಕ್ಕೆ ಸರಕಾರ ಬದ್ಧವಾಗಿರುತ್ತದೆ ಎಂದಿದ್ದಾರೆ.

Advertisement

0 comments:

Post a Comment

 
Top