ಕೊಪ್ಪಳ : ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರಕಾರದ ಸಮಯದ ಫೋಟೋಗಳನ್ನು ಹಂಚಿ ಜನರಲ್ಲಿ ಗೊಂದಲ ಮೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ನ ಈ ಕುತಂತ್ರಕ್ಕೆ ಬಲಿಯಾಗಬಾರದು ಎಂದು ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾ.ಪಾಟೀಲ್ ಹೇಳಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇದೇ ೨೩ರಂದು ನಗರದಲ್ಲಿ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಅಭೂತಪೂರ್ವ ಯಶಸ್ಸು ಮತ್ತು ಜೆಡಿಎಸ್ ಗೆ ಸಿಗುತ್ತಿರುವ ಬೆಂಬಲವನ್ನು ಕಂಡು ದಿಕ್ಕೆಟ್ಟಿರುವ ಕಾಂಗ್ರೆಸ್ ಪಕ್ಷ ಜೆಡಿಎಸ್ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರೂ ಸೇರಿದಂತೆ ಎಲ್ಲರೂ ಜೆಡಿಎಸ್‌ಗೆ ಬೆಂಬಲಿಸುತ್ತಿದ್ದಾರೆ. ಜೆಡಿಎಸ್‌ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಕೆ.ಎಂ.ಸಯ್ಯದ್ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ನಾನೇ ಕಾರಣ ಎನ್ನುವ ಬಾಲಿಶ ಹೇಳಿಕೆ ನೀಡಿರುವ ಇಕ್ಬಾಲ್ ಅನ್ಸಾರಿ ಗೆ ಜಮೀರ್ ಅಹ್ಮದ್ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ತಾವು ಮಾಡಿದ್ದು ಎಂದು ಹೇಳಿಕೊಳ್ಳುತ್ತಿರುವ ಎಲ್ಲ ಅಭಿವೃದ್ದಿ ಕಾರ್‍ಯಗಳನ್ನು ಅವರು ಮಾಡಿದ್ದು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಜೆಡಿಎಸ್ ಸರಕಾರದಲ್ಲಿ ಎನ್ನುವದು ನೆನಪಿರಲಿ. ನೂರಾರು ಕೋಟಿಯ ಯೋಜನೆಗಳ ಬಗ್ಗೆ ಮಾತನಾಡುವ ಮುನ್ನ ಅವರಿಗೆ ಮಂತ್ರಿಗಿರಿ ನೀಡಿದ್ದು , ಯೋಜನೆಗಳನ್ನು ನೀಡಿದ್ದು ಇದೇ ಜೆಡಿಎಸ್ ಎನ್ನುವುದು ಮರೆತಂತಿದೆ ಎಂದು ವ್ಯಂಗ್ಯವಾಡಿದರು. ಜೆಡಿಎಸ್ ಗೆ ಅಲ್ಪಸಂಖ್ಯಾತರ ಬೆಂಬಲ ಕಂಡು ದಿಕ್ಕೆಟ್ಟಿರುವ ಅನ್ಸಾರಿ ಏನೇನೋ ಮಾತನಾಡಿ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಏನೇ ಕುತಂತ್ರ ಮಾಡಿದರೂ ಗೆಲ್ಲುವುದು ಜೆಡಿಎಸ್ ಪಕ್ಷವೇ. ಅಲ್ಪಸಂಖ್ಯಾತರು ಜೆಡಿಎಸ್ ಜೊತೆಗಿದ್ದಾರೆ. ಯಶಸ್ಸು ಶತಃಸಿದ್ದ ಎಂದು ಹೇಳಿದರು. ತಾವು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್‍ಯಕರ್ತ. ಪಕ್ಷಕ್ಕಾಗಿ ದುಡಿಯುತ್ತಿರುವವರು. ಬೇರೆ ಪಕ್ಷದವರ ಚುನಾವಣಾ ಕುತಂತ್ರಕ್ಕೆ ಮತದಾರರು ಬಲಿಯಾಗಬಾರದು. ಈ ಸಲ ಜೆಡಿಎಸ್ ಗೆದ್ದೇ ಗೆಲ್ಲುತ್ತದೆ ಎಂದರು. ಈ ಸಂದರ್ಭದಲ್ಲಿ ಸಯ್ಯದ್ ಹಜ್ಜು ಖಾದ್ರಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.