ಕೊಪ್ಪಳ ಆ. ೨೯ (ಕ.ವಾ): ಕೊಪ್ಪಳ ಜಿಲ್ಲೆಯಲ್ಲಿನ ಬಾಲಕಾರ್ಮಿಕರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಲು ಹಾಗೂ ಸೇತುಬಂಧ ಶಿಕ್ಷಣ ನೀಡುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶವನ್ನಿಟ್ಟುಕೊಂಡು ಸೆ. ೨ ರಿಂದ ೯ ರವರೆಗೆ ೮ ದಿನಗಳ ಕಾಲ ಜಿಲ್ಲೆಯಲ್ಲಿ ಬಾಲಕಾರ್ಮಿಕರನ್ನು ಗುರುತಿಸುವ ಸಮೀಕ್ಷಾ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
ಬಾಲಕಾರ್ಮಿಕರ ಸಮೀಕ್ಷಾ ಕಾರ್ಯಕ್ಕಾಗಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಸಮುದಾಯ ಸಂಘಟಕರು ಮತ್ತು ಸ್ವಯಂ ಸೇವಕರನ್ನು ಒಳಗೊಂಡ ತಂಡವನ್ನು ತಾಲೂಕುವಾರು ಆಯ್ಕೆ ಮಾಡಲಾಗಿದ್ದು, ಸೆ. ೧೦ ರ ಒಳಗಾಗಿ ಸಮೀಕ್ಷಾ ವರದಿಯನ್ನು ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಸಮೀಕ್ಷಾ ತಂಡದ ವಿವರ ಇಂತಿದೆ. ಈಲ್ಲಾ ಕಾರ್ಮಿಕ ಅಧಿಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸಮೀಕ್ಷಾ ತಂಡದ ಮುಖ್ಯಸ್ಥರಾಗಿರುತ್ತಾರೆ. ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ೧೯೮೬ ಕಲಂ ೧೭ರ ಅಡಿ ನೇಮಕವಾದ ಎಲ್ಲಾ ನಿರೀಕ್ಷಕರು, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ತರಬೇತಿ ಸಂಯೋಜಕರು, ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕರು ಸಮೀಕ್ಷಾ ತಂಡದ ಕ್ಷೇತ್ರ ಪರಿಶೀಲಕರಾಗಿರುತ್ತಾರೆ. ತಾಲೂಕು ಸಂಯೋಜಕರನ್ನಾಗಿ ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ತರಬೇತಿ ಸಂಯೋಜಕರು, ಬಾಲಕಾರ್ಮಿಕ ಯೋಜನಾ ಸಂಘದ ಕ್ಷೇತ್ರಾಧಿಕಾರಿಗಳನ್ನು ನೇಮಿಸಲಾಗಿದೆ. ಅಲ್ಲದೆ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ೮೦ ಜನ ಸಮುದಾಯ ಸಂಘಟಕರು, ಪ್ರತಿ ಗ್ರಾಮ ಪಂಚಾಯತಿಗೆ ಒಬ್ಬರಂತೆ ೧೩೪, ಪಟ್ಟಣದ ವಾರ್ಡ್‌ಗೆ ಒಬ್ಬರಂತೆ ೬೬ ಜನ ಹಾಗೂ ೧೨೦ ಸ್ವಯಂ ಸೇವಕರನ್ನು ಸಮೀಕ್ಷೆದಾರರನ್ನಾಗಿ ನಿಯೋಜಿಸಲಾಗಿದೆ.
ಸಮೀಕ್ಷಾ ತಂಡದಲ್ಲಿ ಭಾಗವಹಿಸುವ ಎಲ್ಲಾ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಎಲ್ಲಾ ಸಮುದಾಯ ಸಂಘಟಕರು, ಸ್ವಯಂ ಸೇವಕರಿಗೆ ಸೆ. ೨ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಸಂಬಂಧಪಟ್ಟ ಎಲ್ಲರೂ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.