ಬೆಂಗಳೂರು, ಆ.25: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ರಾಜ್ಯದ ನ್ಯಾಯಾಲಯಗಳು ಒಂದರ ಮೇಲೊಂದರಂತೆ ಆಘಾತ ನೀಡುತ್ತಿದ್ದು, ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಅವರು ಸಲ್ಲಿಸಿದ್ದ ಮಧ್ಯಾಂತರ ಮನವಿಯನ್ನು ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. ಯಡಿಯೂರಪ್ಪನವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಅಜಿತ್ ಗುಂಜಾಲ್ ಮತ್ತು ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಮಧ್ಯಾಂತರ ತಡೆಯಾಜ್ಞೆಗೆ ನಿರಾಕರಿಸಿತು. ಈ ನಡುವೆ ಡಿನೋಟಿಫಿಕೇಶನ್ ಪ್ರಕರಣದ ಸಂಬಂಧ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಖುದ್ದು ಹಾಜರಾಗುವಂತೆ ಯಡಿಯೂರಪ್ಪ ನವರಿಗೆ ಆದೇಶಿಸಿದೆ. ವಿಚಾರಣೆಗೆ ಹಾಜರಾದರೆ ಯಡಿಯೂರಪ್ಪ ನವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಅವಕಾಶವಿದೆ.
ತನ್ನ ಘನತೆ ಹಾಗೂ ಈ ಹಿಂದೆ ತಾನು ಅಲಂಕರಿಸಿದ್ದ ಸ್ಥಾನಗಳನ್ನು ಪರಿಗಣಿಸಿ ಖುದ್ದು ಹಾಜರಾತಿಗೆ ವಿನಾಯ್ತಿ ನೀಡುವಂತೆ ಅವರು ಮಾಡಿಕೊಂಡ ಮನವಿಯನ್ನು ವಿಭಾಗೀಯಪೀಠ ತಳ್ಳಿಹಾಕಿತು. ಈ ನಡುವೆ ಸರಕಾರವನ್ನು ಪ್ರತಿವಾದಿಯಾಗಿ ಮಾಡಿ ಸಲ್ಲಿಸಿದ್ದ ತಿದ್ದುಪಡಿ ಅರ್ಜಿಯನ್ನು ಅದು ವಿಚಾರಣೆಗೆ ಅಂಗೀಕರಿಸಿತು. ಇದರೊಂದಿಗೆ ಆ.27ರಂದು ವಿಶೇಷ ನ್ಯಾಯಾಲಯದ ವಿಚಾರಣೆಗೆ ಖುದ್ದು ಹಾಜರಾಗುವುದು ಯಡಿಯೂರಪ್ಪರಿಗೆ ಅನಿವಾರ್ಯವಾಗಿದ್ದು, ಪ್ರಕರಣ ತೀವ್ರ ಕತೂಹಲ ಕೆರಳಿಸಿದೆ. ಯಡ್ಡಿ ಪರ ರಾಮ್‌ಜೇಠ್ಮಲಾನಿ ವಾದ: ಯಡಿಯೂರಪ್ಪರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವ ವೇಳೆ, ರಾಜ್ಯ ಸಚಿವ ಸಂಪುಟದ ಅಭಿಪ್ರಾಯ ಸಂಗ್ರಹಿಸಬೇಕಾಗಿತ್ತು. ಆದರೆ ರಾಜ್ಯಪಾಲರು ಸಚಿವ ಸಂಪುಟದ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ, ರಾಜ್ಯಪಾಲ ಭಾರದ್ವಾಜ್ ರಾಜ್ಯಪಾಲರಾಗಿ ಬರುವುವವರೆಗೂ ರಾಜ್ಯದಲ್ಲಿ ಎಲ್ಲವೂ ಸರಿಯಾಗಿತ್ತು. ಭಾರದ್ವಾಜ್ ಅವರು ರಾಜ್ಯಕ್ಕೆ ಬಂದದ್ದು ಈ ಹಿಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ಎಂಬ ಕಾರಣಕ್ಕೆ ಎಂದು ಯಡಿಯೂರಪ್ಪರ ಪರ ಸುಂಪ್ರೀಂಕೋರ್ಟ್ ಹಿರಿಯ ವಕೀಲ ರಾಮ್‌ಜೇಠ್ಮಲಾನಿ ವಾದ ಮಂಡಿಸಿದರು.
ಸನ್ನಡತೆ ಆಧಾರದ ಮೇಲೆ ಸುಮಾರು 100 ಜೈಲು ಕೈದಿಗಳನ್ನು ಬಿಡುಗಡೆೆ ಮಾಡುವಂತೆ ಬಂದಿಖಾನೆ ಸಚಿವರಾಗಿದ್ದ ಉಮೇಶ್ ಕತ್ತಿ 2010ರ ಆಗಸ್ಟ್‌ನಲ್ಲಿ ಶಿಫಾರಸು ಮಾಡಿದಾಗ, ಅವರನ್ನೆ ಸಚಿವ ಸಂಪುಟದಿಂದ ಕೈಬಿಡುವಂತೆ ಯಡಿಯೂರಪ್ಪರಿಗೆ ರಾಜ್ಯಪಾಲರು ಪತ್ರ ಬರೆದಿದ್ದರು. ನಂತರ ವಿನಾಃ ಕಾರಣ ಸಂವಿಧಾನ ಬಿಕ್ಕಟ್ಟು ಏರ್ಪಟ್ಟಿದೆ ಎಂದು ಹೇಳಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕೇಂದ್ರಕ್ಕೆ ಎರಡು ಬಾರಿ ಶಿಫಾರಸು ಮಾಡಿದ್ದರು. ರಾಜ್ಯಪಾಲ ಭಾರದ್ವಾಜ್ ದುರುದ್ದೇಶ, ಪೂರ್ವಾಗ್ರಹ ಪೀಡಿತ ಹಾಗೂ ಕಾನೂನು ಬಾಹಿರವಾಗಿ ಯಡಿಯೂರಪ್ಪರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಇವುಗಳಿಂದ ತಿಳಿಯುತ್ತದೆ ಎಂದು ಜೇಠ್ಮಲಾನಿ ವಿಭಾಗೀಯ ಪೀಠಕ್ಕೆ ವಿವರಿಸಿದರು.
ನಂತರ ಸರಕಾರದ ಪರ ವಾದ ಮಾಡಿದ ಹಿರಿಯ ವಕೀಲ ಪಿ.ಪಿ.ರಾವ್, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮುನ್ನ ಫಿರ್ಯಾದುದಾರ ಸಿರಾಜಿನ್ ಭಾಷಾ ದೂರಿನೊಂದಿಗೆ ಸಲ್ಲಿಸಿದ್ದ ಎಲ್ಲ ಸಾಕ್ಷಾಧಾರಗಳನ್ನು ರಾಜ್ಯಪಾಲರು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ಅಲ್ಲದೆ ಈ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿಗಳಿಂದ 94 ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸಿದ್ದಾರೆ. ಜೊತೆಗೆ ಸಚಿವ ಸಂಪುಟದ ಅಭಿಪ್ರಾಯವನ್ನು ಸಂಗ್ರಹಿಸಿ, ಅದು ಸೂಕ್ತವಾಗಿಲ್ಲದ ಕಾರಣ, ಕಾನೂನು ಪ್ರಕಾರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ವಿಭಾಗೀಯ ಪೀಠದ ಗಮನಕ್ಕೆ ತಂದರು.
ಈ ನಡುವೆ ಡಿನೋಟಿಫೈ ಸಂಬಂಧ ಸಮನ್ಸ್ ಜಾರಿ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಘನತೆ ಹಾಗೂ ಅವರು ಈ ಹಿಂದೆ ಅಲಂಕರಿಸಿದ್ದ ಸ್ಥಾನಗಳನ್ನು ಪರಿಗಣಿಸಿ, ವೈಯಕ್ತಿಕ ಸ್ವಾತಂತ್ರ ಸಂರಕ್ಷಣೆಯ ದೃಷ್ಟಿಯಿಂದ ವಿಚಾರಣೆಗೆ ಖುದ್ದು ಹಾಜರಾತಿಗೆ ವಿನಾಯ್ತಿ ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದರು. ಆದರೆ ಇದಕ್ಕೊಪ್ಪದ ವಿಭಾಗೀಯ ಪೀಠ ಸಮನ್ಸ್ ಜಾರಿ ಹಿನ್ನೆಲೆಯಲ್ಲಿ ಅವರ ಮನವಿಯನ್ನು ತಿರಸ್ಕರಿಸಿತು.
ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆಗೆ ಹಾಜರಾದರೆ ಕೂಡಲೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ. ಇದು ತೀವ್ರ ಭೀತಿ ಉಂಟು ಮಾಡಿಸಿದ್ದು, ವೈಯಕ್ತಿಕ ಸ್ವಾತಂತ್ರ ರಕ್ಷಣೆಯ ದೃಷ್ಟಿಯಿಂದ ಮತ್ತು ಯಡಿಯೂರಪ್ಪ ಘನತೆ ಹಾಗೂ ಅವರು ಈ ಹಿಂದೆ ಅಲಂಕರಿಸಿದ್ದ ಸ್ಥಾನವನ್ನು ಪರಿಗಣಿಸಿ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡಬೇಕು ಎಂದು ರಾಮ್ ಜೇಠ್ಮಲಾನಿ ಕೋರ್ಟ್‌ಗೆ ಮನವಿ ಮಾಡಿದರು.
ಆದರೆ ಇದಕ್ಕೊಪ್ಪದ ನ್ಯಾಯಾಲಯ ಇಂದಿನ ಅರ್ಜಿ ಕೇವಲ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಕುರಿತದ್ದಾಗಿದೆ. ಆದುದರಿಂದ ಆ ಸಂಬಂಧ ಮಾತ್ರ ವಿಚಾರಣೆ ನಡೆಸಬೇಕಾಗಿದೆ. ಖುದ್ದು ಹಾಜರಾತಿ ವಿನಾಯ್ತಿ ಕುರಿತು ವಿಶೇಷ ನ್ಯಾಯಾಲಯದಲ್ಲೆ ಇತ್ಯರ್ಥ ಪಡಿಸಿಕೊಳ್ಳುವಂತೆ ನಿರ್ದೇಶಿಸಿ ವಿಚಾರಣೆಯನ್ನು ಅ.18ಕ್ಕೆ ಮುಂದೂಡಿತು
0 comments:
Post a Comment
Click to see the code!
To insert emoticon you must added at least one space before the code.