PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಮೇ. :ಮಾಹಿತಿ ಹಕ್ಕು ಅಧಿನಿಯಮ ೨೦೦೫ ಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಆಯೋಗಕ್ಕೆ ಬರುವ ದೂರುಗಳ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ಆಯೋಗ ಚಿಂತನೆ ನಡೆಸಿದೆ ಎಂದು ಮಾಹಿತಿ ಹಕ್ಕು ಆಯೋಗದ ಆಯುಕ್ತ ಡಾ: ಶೇಖರ್ ಡಿ. ಸಜ್ಜನರ್ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲೆಯ ಎಲ್ಲ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಸಹಾಯಕ ಮಾಹಿತಿ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಾಹಿತಿ ಹಕ್ಕು ಕುರಿತಂತೆ ಮಾಹಿತಿ ಹಕ್ಕು ಆಯೋಗಕ್ಕೆ ಬರುವ ದೂರುಗಳ ಸಂಖ್ಯೆ ಹೆಚ್ಚಾಗಿದ್ದು, ಅಧಿಕಾರಿಗಳು, ತಮ್ಮ ಕಚೇರಿ ಕೆಲಸ ಬಿಟ್ಟು, ಪದೇ ಪದೇ ಬೆಂಗಳೂರಿಗೆ ವಿಚಾರಣೆಗಾಗಿ ಅಲೆದಾಡುವುದನ್ನು ತಪ್ಪಿಸಲು ಹಾಗೂ ಪ್ರಕರಣಗಳ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾಡಳಿತದಲ್ಲಿ ಸದ್ಯ ಲಭ್ಯವಿರುವ ವಿಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಬಳಸಿಕೊಂಡು, ಇದರ ಮೂಲಕವೇ ಪ್ರಕರಣಗಳ ವಿಚಾರಣೆ ಕೈಗೊಳ್ಳಲು ಉದ್ದೇಶಿಸಿದೆ. ಅಲ್ಲದೆ ಜಿಲ್ಲಾ ಕೇಂದ್ರಗಳಲ್ಲಿಯೂ ಸಹ ಮಾಹಿತಿ ಆಯೋಗದ ಆಯುಕ್ತರು ಪ್ರವಾಸ ಕೈಗೊಂಡು, ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ. ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಹಕ್ಕು ದೂರುಗಳ ಪ್ರಕರಣಗಳನ್ನು ಇದೇ ಜೂ. ೨೦ ರಿಂದ ೨೪ ರವರೆಗೆ ನಾಲ್ಕು ದಿನಗಳ ಕಾಲ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ವಿಚಾರಣೆ ನಡೆಸಲಾಗುವುದು. ದಿನವೊಂದಕ್ಕೆ ೨೫ ರಿಂದ ೩೦ ಪ್ರಕರಣಗಳಂತೆ ಸುಮಾರು ೧೩೦ ಪ್ರಕರಣಗಳ ವಿಚಾರಣೆ ನಡೆಸಲಾಗುವುದು ಎಂದರು.
ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯಲ್ಲಿಯೂ ಸಹ ಕೆಲವು ನ್ಯೂನತೆಗಳು ಇರಬಹುದಾಗಿದ್ದು, ಇಂತಹ ಲೋಪ, ದೋಷಗಳನ್ನು ಸರಿಪಡಿಸಿ, ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲು ಅಗತ್ಯ ವರದಿ ತಯಾರಿಸಲಾಗುತ್ತಿದ್ದು, ತಿದ್ದುಪಡಿಯ ನಂತರ ಮಾಹಿತಿ ಹಕ್ಕು ಕಾಯ್ದೆ ಸಾಕಷ್ಟು ಪರಿಣಾಮಕಾರಿಯಾಗಲಿದೆ. ಮಾಹಿತಿ ಹಕ್ಕು ಕಾಯ್ದೆಯು ನಾಗರೀಕರ ಹಕ್ಕು ಸಾಧನೆಗೆ ದುರ್ಬಳಕೆಯಾಗದೆ ಸದುಪಯೋಗ ಆಗಬೇಕು, ಕಚೇರಿಗಳಲ್ಲಿ ನಡೆಸುವ ವ್ಯವಹಾರಗಳೆಲ್ಲವು ಪಾರದರ್ಶಕವಾಗಿರಬೇಕು. ಜನಸಾಮಾನ್ಯರು ಕೇಳಿದಾಗ ಮಾಹಿತಿ ಕೊಡುವುದು ಅಗತ್ಯವಾಗಿದೆ. ಸಾರ್ವಜನಿಕರು ಕೇಳುವ ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯ ಎಂದು ಮಾಹಿತಿ ಆಯೋಗದ ಆಯುಕ್ತ ಡಾ. ಶೇಖರ್ ಡಿ. ಸಜ್ಜನರ್ ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ಸಹಾಯಕ ಆಯುಕ್ತ ಶರಣಬಸಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

29 May 2011

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top