









ಜನವರಿ ೧೫, ೧೬ ರಂದು ಹಾವೇರಿಯ ಗುರುಭವನದಲ್ಲಿ ಎರಡು ದಿನಗಳ ಕಾಲ ರಹಮತ್ ತರೀಕೆರೆ ಅವರ ಜತೆ ಸಂವಾದ ಮತ್ತು ಅವರ ವಿಚಾರ ಸಂಕಿರಣ ಅರ್ಥಪೂರ್ಣವಾಗಿ ನಡೆಯಿತು. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಸಾಹಿತ್ಯಾಸಕ್ತರು ರಹಮತ್ ಮೇಷ್ಟ್ರ ಮೇಲಿನ ಪ್ರೀತಿಯಿಂದಾಗಿ ಬಂದಿದ್ದರು. ಪೀರ್ ಭಾಷಾ ಕಾರ್ಯಕ್ರಮದ ಆರಂಭಕ್ಕೆ ರಹಮತ್ ಅವರನ್ನು ಆರಾಧಿಸಬೇಕಿಲ್ಲ, ಅವರೊಂದಿಗೆ ನಮ್ಮ ಭಿನ್ನಮತಗಳನ್ನೂ ಕೂಡ ಗಂಭೀರವಾಗಿಯೇ ಎತ್ತಬೇಕಿದೆ ಎಂದರು. ಅಂತೆಯೇ ಇಡೀ ಕಾರ್ಯಕ್ರಮ ಒಂದು ಮೆಚ್ಚುಗೆಯ ಹಳಹಳಿಕೆಯಾಗದೆ, ತರೀಕೆರೆ ಅವರ ನೆಪದಲ್ಲಿ ವರ್ತಮಾನದ ಕರ್ನಾಟಕದ ಚರ್ಚೆಯೇ ಆದದ್ದು ಈ ಕಾರ್ಯಕ್ರಮದ ಯಶಸ್ಸು.
ಡಾ. ಎಂ.ಎಂ ಕಲಬುರ್ಗಿಯವರು ವಿದ್ವತ್ತು ಮತ್ತು ಶ್ರದ್ಧೆ ಎರಡೂ ಒಂದೇ ಕಡೆ ಮೇಳವಿಸಿದೆ ಎಂದರೆ ಟಿ.ಆರ್.ಚಂದ್ರಶೇಖರ್ ಅವರು ರಹಮತ್ ರ ಜೀವನ ಪ್ರೀತಿಯನ್ನು ತುಂಬಾ ಆಪ್ತವಾಗಿ ಕಟ್ಟಿಕೊಟ್ಟರು. ಅಂತೆಯೇ ಜಿ. ರಾಮಕೃಷ್ಣ ಅವರು ಸದ್ಯದ ಕರ್ನಾಟಕದಲ್ಲಿ ರಹಮತ್ ಮಾದರಿಯ ಅಧ್ಯಯನ ಕ್ರಮದ ಅಗತ್ಯವಿದೆ ಎಂದರು. ಡೊಮನಿಕ್, ಆಶಾದೇವಿ, ಚಂದ್ರಪ್ಪ ಸೊಬಟಿ, ವೀರೇಶ ಬಡಿಗೇರ, ನಟರಾಜ ಬೂದಾಳ, ಸರ್ಜಾಶಂಕರ, ತಾರಿಣಿ, ಭಾರತೀದೇವಿ, ಶ್ರೀಧರ ಬಳಗಾರ,ಕೆ.ಪಿ.ಸುರೇಶ, ರಂಗನಾಥ, ಮುಜಾಫರ್ ಅಸ್ಸಾದಿ, ರಾಜೇಂದ್ರ ಚನ್ನಿ ಹೀಗೆ ಹಿರಿಯರು,ಹೊಸಬರು ರಹಮತ್ ಅವರನ್ನು ಬೇರೆ ಬೇರೆ ಮಗ್ಗಲುಗಳಿಂದ ನೋಡಿ ಅವರ ಚಿಂತನೆಯನ್ನು ವಿಸ್ತರಿಸುವಂತೆಯೂ, ಮತ್ತು ಚಿಂತನೆಗೆ ಹೊಸ ಹೊಳಪನ್ನು ನೀಡುವಂತೆಯೂ ಮಾತನಾಡಿದರು.
ಈ ಕಾರ್ಯಕ್ರಮವನ್ನು ಹಾವೇರಿಯ ಬಿ.ಶ್ರೀನಿವಾಸ ಮತ್ತು ಅವರ ಗೆಳೆಯರು ಅಚ್ಚುಕಟ್ಟಾಗಿ ರೂಪಿಸಿದ್ದರು. ರಹಮತ್ ಅವರ ಬರಹ ಮತ್ತು ಬದುಕಲ್ಲಿ ಲಡಾಯಿಯ ಆಶಯ ಶಕ್ತಿಯುತವಾಗಿರುವ ಕಾರಣವೇ, ಲಡಾಯಿ ಪ್ರಕಾಶನದ ನೆಪದಲ್ಲಿ ಕಾರ್ಯಕ್ರಮವನ್ನು ರೂಪಿಸಿ ಸಮಾನಾಸಕ್ತರೆಲ್ಲಾ ಒಂದೆಡೆ ಸೇರಿ ಆರೋಗ್ಯಕರವಾಗಿ ಚರ್ಚಿಸಲು ಸಾದ್ಯವಾಯಿತು. ಈ ಇಡೀ ಸಂವಾದ ಚರ್ಚೆಗೆ ಕಾರಣವಾದ ರಹಮತ್ ತರೀಕೆರೆ ಅವರನ್ನು ಮತ್ತೊಮ್ಮೆ ಅಭಿನಂದಿಸುತ್ತೇವೆ.
-ಬಸವರಾಜ ಸೂಳೀಬಾವಿ ಮತ್ತು ಸಂಗಾತಿಗಳು.
0 comments:
Post a Comment
Click to see the code!
To insert emoticon you must added at least one space before the code.