PLEASE LOGIN TO KANNADANET.COM FOR REGULAR NEWS-UPDATES

ಉದ್ಯಾನ ನಗರಿಯಲ್ಲಿ ಡಿ.24ರಿಂದ ಮೂರು ದಿನಗಳ ಕಾಲ ನಡೆಯಲಿರುವ 77ನೇ ಕನ್ನಡ ಸಾಹಿತ್ಯ ಜಾತ್ರೆಯ ಅಧ್ಯಕ್ಷರಾಗಿ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ (97ವ) ಅವರನ್ನು ಆಯ್ಕೆ ಮಾಡಲಾಗಿದೆ. ಡಿ.24, 25 ಮತ್ತು 26ರಂದು ನ್ಯಾಶನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನು ಬುಧವಾರ ನಡೆದ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಸಮ್ಮೇಳನಾಧ್ಯಕ್ಷತೆ ಪಟ್ಟಕ್ಕಾಗಿ ಹಂಪ ನಾಗರಾಜಯ್ಯ ಹಾಗೂ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಆದರೆ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನೇ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು ಎಂದು ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.ಶತಮಾನ ಕಂಡ ಅಪರೂಪದ ಭಾಷಾ ತಜ್ಞ ಪ್ರೊ.ವೆಂಕಟಸುಬ್ಬಯ್ಯನವರು ಮೈಸೂರಿನಲ್ಲಿ ಜನಿಸಿದರು. ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಆರಂಭಿಸಿದ್ದ ಅವರು ನಾಲ್ಕು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ದುಡಿದಿದ್ದರು. ಅಲ್ಲದೇ, ವಿಮರ್ಶೆ, ಭಾಷಾ ಸಂಶೋಧನೆ, ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಪ್ರೊ.ಜಿವಿ ಅವರು ಸುಮಾರು 25ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಪಾದಿಸಿದ್ದರು. ವೆಂಕಟಸುಬ್ಬಯ್ಯ ಅವರು ಇಪ್ಪತ್ತು ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟಿನ ಪ್ರಧಾನ ಸಂಪಾದಕರಾಗಿ ಹತ್ತು ಸಂಪುಟ ಗಳನ್ನು ಹೊರತಂದಿದ್ದರು.ಪ್ರೊ.ವೆಂಕಟಸುಬ್ಬಯ್ಯನವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಶಂಭಾ ಪ್ರಶಸ್ತಿ, ಸೇಡಿಯಾಪು, ಶಿವರಾಮ ಕಾರಂತ, ಮಾಸ್ತಿ ಹಾಗೂ ನಾಡೋಜ ಪಂಪ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿವೆ.

ವಿಠ್ಠಪ್ಪ ಗೋರಂಟ್ಲಿ, ಮಹಾಂತೇಶ ಮಲ್ಲನಗೌಡರ ಸೇರಿದಂತೆ ಜಿಲ್ಲೆಯ ಸಾಹಿತಿಗಳು ವೆಂಕಟಸುಬ್ಬಯ್ಯನವರ ಆಯ್ಕೆಗೆ ಹರ್ಷವ್ಯಕ್ತಪಡಿಸಿದ್ದಾರೆ.
10 Nov 2010

Advertisement

1 comments:

  1. ಕನ್ನಡ ಕಂಡ ಅಪರೂಪದ ಭಾಷಾ ತಜ್ಞ ವೆಂಕಟಸುಬ್ಬಯ್ಯನವರಿಗೆ ಧನ್ಯವಾದಗಳು

    ReplyDelete

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top