PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜ. ೦೬ (ಕ ವಾ)  ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಎಲ್ಲ ತಾಲೂಕು ಕಾನೂನು ಸೇವಾ ಸಮಿತಿಗಳಿಂದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪ್ರತಿ ಎರಡನೆ ಶನಿವಾರ ಮಾಸಿಕ ಲೋಕ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ ಅವರು ತಿಳಿಸಿದ್ದಾರೆ.
     ಪ್ರಸಕ್ತ ವರ್ಷದ ಪ್ರತಿ ಎರಡನೆ ಶನಿವಾರದಂದು ಮಾಸಿಕ ಲೋಕ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ.  ೨೦೧೬ ರ ಫೆ. ೧೩ ರಂದು ಬ್ಯಾಂಕುಗಳಿಗೆ ಸಂಬಂಧಪಟ್ಟ ಪ್ರಕರಣಗಳು, ಮಾರ್ಚ್ ೧೨ ರಂದು ಸಿವಿಲ್ ಮತ್ತು ಕಂದಾಯ ಪ್ರಕರಣಗಳು, ಏಪ್ರಿಲ್ ೦೯ ರಂದು ಕಾರ್ಮಿಕ ಮತ್ತು ಕೌಟುಂಬಿಕ ಪ್ರಕರಣಗಳು, ಮೇ ೧೪ / ಜೂನ್ ೧೧ ರಂದು ಮೋಟಾರು ವಾಹನ ಅಪಘಾತ ಪ್ರಕರಣಗಳು, ಜುಲೈ ೦೯ ರಂದು ವಿದ್ಯುತ್, ನೀರು, ದೂರವಾಣಿ, ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳು, ಆಗಸ್ಟ್ ೧೩ ರಂದು ಬ್ಯಾಂಕ್‌ಗೆ ಸಂಬಂಧಿಸಿದ ಪ್ರಕರಣಗಳು, ಸೆಪ್ಟಂಬರ್ ೧೦ ರಂದು ಕ್ರಿಮಿನಲ್ ಪ್ರಕರಣಗಳು, ಅಕ್ಟೋಬರ್ ೦೮ ರಂದು ಟ್ರಾಫಿಕ್, ಮುನಿಸಿಪಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕ ಅದಾಲತ್ ಜರುಗಲಿದೆ.  ನವೆಂಬರ್/ಡಿಸೆಂಬರ್ ತಿಂಗಳಿನಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ.  ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲು ನ್ಯಾಯಾಲಯಗಳಲ್ಲಿ ಪ್ರತಿನಿತ್ಯ ಲೋಕ ಅದಾಲತ್ ಅನ್ನು ಏರ್ಪಡಿಸಲಾಗುವುದು.  ಸಾರ್ವಜನಿಕರು ಈ  ಲೋಕ ಅದಾಲತ್ ಮೂಲಕ ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿಯಾಗುವಂತಹ ಕ್ರಿಮಿನಲ್ ಪ್ರಕರಣಗಳು, ಇತ್ಯರ್ಥವಾಗುವಂತಹ ಸಿವಿಲ್, ಕೌಟುಂಬಿಕ, ಮೋಟಾರು ವಾಹನ ಅಪಘಾತ, ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಲೋಕ ಅದಾಲತ್ ಅಂಗವಾಗಿ ಪ್ರತಿ ನಿತ್ಯ ಜನತಾ ನ್ಯಾಯಾಲಯವನ್ನು ಏರ್ಪಡಿಸಲಾಗಿದೆ. ಈ ಜನತಾ ನ್ಯಾಯಾಲಯದಲ್ಲಿ ಉಭಯ ಪಕ್ಷಕಾರರು  ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು. ಅಲ್ಲದೇ ಜನತಾ ನ್ಯಾಯಾಲಯದಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ವವಾಗಿ ಪಾವತಿಸಲಾಗುವುದು. ಇಲ್ಲಿ ಸೌಹಾರ್ದಯುತವಾಗಿ ಪ್ರಕರಣವು ಇತ್ಯರ್ಥಗೊಳ್ಳುವುದರಿಂದ ಬಾಂಧವ್ಯವು ಉಳಿದು ವಿವಾದವು ಇತ್ಯರ್ಥಗೊಳ್ಳಲಿದೆ. ಕಡಿಮೆ ಖರ್ಚಿನಲ್ಲಿ ಶೀಘ್ರ ವಿಲೇವಾರಿಗಾಗಿ ಇದೊಂದು ವಿಶೇಷ ಅವಕಾಶವಾಗಿದ್ದು, ಸಾರ್ವಜನಿಕರು  ಸದುಪಯೋಗಪಡಿಸಿಕೊಳ್ಳುವಂತೆ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ ಅವರು ಮನವಿ ಮಾಡಿದ್ದಾರೆ.

Advertisement

0 comments:

Post a Comment

 
Top